ADVERTISEMENT

ಕೋವಿಡ್‌ ಕೇಂದ್ರಗಳಿಗೆ ಜಾಗ ಹುಡುಕಾಟ

ಕೋವಿಡ್‌ ಮೂರನೇ ಅಲೆ ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳದ ಜಿಲ್ಲಾಡಳಿತ

ಮನೋಜ ಕುಮಾರ್ ಗುದ್ದಿ
Published 20 ಜನವರಿ 2022, 5:05 IST
Last Updated 20 ಜನವರಿ 2022, 5:05 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ಜಿಲ್ಲೆಯಲ್ಲಿ ವಾರದಿಂದ ನಿತ್ಯ ಸರಾಸರಿ 450ಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಬೇಕಿದ್ದ ಜಿಲ್ಲಾಡಳಿತ ಇನ್ನೂ ಸಮರ್ಪಕವಾಗಿ ಕೋವಿಡ್‌ ಆರೈಕೆ ಕೇಂದ್ರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಮೀನ ಮೇಷ ಎಣಿಸುತ್ತಿದೆ. ಜೊತೆಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಜನರ ಮನವೊಲಿಸುವಲ್ಲಿಯೂ ವಿಫಲವಾಗಿದೆ.

ಜಿಲ್ಲೆಯಲ್ಲಿ ಏಕಾಏಕಿ ಜ್ವರ, ನೆಗಡಿ, ಕೆಮ್ಮು, ಕಫದಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮನೆಯಲ್ಲೇ ಆರೈಕೆಯ ಮೊರೆ ಹೋಗಿದ್ದಾರೆ. ಜನರು ಕೋವಿಡ್‌ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದು, ಸೌಮ್ಯವಲ್ಲದ ಪ್ರಕರಣಗಳಲ್ಲಿ ಮನೆಯಲ್ಲೇ ಪ್ರತ್ಯೇಕವಾಗಿರಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಆದರೆ, ಅವರಿಗೆ ಜಿಲ್ಲಾಡಳಿತದಿಂದ ವೈದ್ಯಕೀಯ ಕಿಟ್‌ ವಿತರಣೆ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಕೋವಿಡ್‌ ಆರೈಕೆ ಕೇಂದ್ರ ಆರಂಭಕ್ಕೆ ಹಿಂದೇಟು: ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲಾಡಳಿತವು ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಸಮನ್ವಯ ಸಾಧಿಸಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳನ್ನು ಹೊರತುಪಡಿಸಿ ಸರ್ಕಾರಿ ವಸತಿ ನಿಲಯಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಿತ್ತು. ಸೌಮ್ಯ ಲಕ್ಷಣಗಳುಳ್ಳ ಕೋವಿಡ್‌ ರೋಗಿಗಳ ಮನವೊಲಿಸಿ ವಸತಿ ನಿಲಯಗಳಲ್ಲಿ ಇರಿಸಿ ಅವರಿಗೆ ಊಟ, ವೈದ್ಯಕೀಯ ಉಪಚಾರ ನೀಡಲಾಗುತ್ತಿತ್ತು. ಆದರೆ, ಈಗ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಇರುವುದರಿಂದ ಅವರನ್ನು ತೆರವುಗೊಳಿಸಲು ಆಗುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಹೀಗಾಗಿ, ಕೋವಿಡ್ ಪ್ರಕರಣಗಳು ಹೆಚ್ಚಾದರೆ, ಆರೈಕೆ ಕೇಂದ್ರಗಳನ್ನು ಎಲ್ಲಿ ಆರಂಭಿಸಬೇಕು ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.

ADVERTISEMENT

ಸಿದ್ಧವಾಗದ ಶಹಾಬಾದ್ ಇಎಸ್‌ಐ ಆಸ್ಪತ್ರೆ: ಶಹಾಬಾದ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋವಿಡ್ ಉಲ್ಬಣಗೊಂಡರೆ ಅಲ್ಲಿನ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕರೆತರುವ ಬದಲು ಅಲ್ಲಿನ ಹಳೆಯ ಇಎಸ್‌ಐ ಆಸ್ಪತ್ರೆಯನ್ನು ₹ 12 ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಆದರೆ, ಅದಿನ್ನೂ ಉದ್ಘಾಟನೆಗೊಂಡಿಲ್ಲ. ಹೀಗಾಗಿ, ಜಿಲ್ಲಾಸ್ಪತ್ರೆ ಅಥವಾ ಕಲಬುರಗಿಯ ಇಎಸ್‌ಐಸಿ ಆಸ್ಪತ್ರೆಗೆ ಬರಬೇಕಿದೆ.

ಚಿಂಚೋಳಿ, ಅಫಜಲಪುರ, ಚಿತ್ತಾಪುರ, ಸೇಡಂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳು ಕಾರ್ಯಾರಂಭ ಮಾಡಿವೆ. ಒಟ್ಟು ಹಾಸಿಗೆ ಸಾಮರ್ಥ್ಯದ ಅರ್ಧದಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಆದರೆ, ಆಳಂದ, ಜೇವರ್ಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಇನ್ನೂ ಘಟಕಗಳು ಶುರುವಾಗಿಲ್ಲ. ಹೊಸ ತಾಲ್ಲೂಕುಗಳಾದ ಕಮಲಾಪುರ, ಕಾಳಗಿ, ಯಡ್ರಾಮಿ ಹಾಗೂ ಶಹಾಬಾದ್‌ ತಾಲ್ಲೂಕಿನ ಜನರು ಅಕ್ಕ‍ಪಕ್ಕದ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಕ್ಕೇ ಬರಬೇಕಿದೆ.

ಹಣಕಾಸು ಕೊರತೆಯ ಕಾರಣದಿಂದಾಗಿ ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಇನ್ನೂ ತಾಲ್ಲೂಕು ಆಸ್ಪತ್ರೆಗಳಿಗೆ ಮಂಜೂರಾತಿ ಸಿಕ್ಕಿಲ್ಲ. ಕಮಲಾಪುರದಲ್ಲಿ 100 ಹಾಸಿಗೆ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಸಚಿವ ಮುರುಗೇಶ ನಿರಾಣಿ ಅವರು ಪ್ರಕಟಿಸಿದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ, ಕಮಲಾಪುರ ತಾಲ್ಲೂಕಿನ ಜನರು ಕಲಬುರಗಿ ಜಿಲ್ಲಾಸ್ಪತ್ರೆಗೇ ಬರಬೇಕಿದೆ.

ಸರ್ಕಾರವೇ ಗೊಂದಲದಲ್ಲಿದೆ: ಪ್ರಿಯಾಂಕ್

ಕೋವಿಡ್‌ ಮೂರನೇ ಅಲೆ ಬಂದಿದೆಯೋ ಇಲ್ಲವೋ, ಬಂದಿದ್ದರೆ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸರ್ಕಾರ ಹೇಳುತ್ತಿಲ್ಲ. ಏಕೆಂದರೆ ಏನು ಸಿದ್ಧತೆ ಮಾಡಬೇಕು ಎಂಬ ಬಗ್ಗೆ ಸರ್ಕಾರವೇ ಗೊಂದಲದಲ್ಲಿದೆ. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಏನೂ ಮಾಡದೆಯೂ ಎಲ್ಲಾ ಮಾಡಿದ್ದೇವೆ ಎಂದು ತಾವೇ ಗೋಲು ಹೊಡೆದುಕೊಂಡರು. ಈಗಲೂ ಅದನ್ನೇ ಮಾಡಿದರೆ ಅಚ್ಚರಿಯಿಲ್ಲ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಶಹಾಬಾದ್‌ ಇಎಸ್‌ಐ ಆಸ್ಪತ್ರೆಗೆ ಸುಣ್ಣ ಬಣ್ಣ ಬಳಿದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಅದಕ್ಕೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳು ಬಂದಿಲ್ಲ. ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ನಡೆಸಬೇಕೋ, ಇಎಸ್‌ಐನವರು ನಡೆಸಬೇಕೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಇಎಸ್‌ಐನವರು ತಮಗೆ ಈಗಲೇ ಇರುವ ಆಸ್ಪತ್ರೆಗಳನ್ನು ನಡೆಸಲು ಆಗುತ್ತಿಲ್ಲ ಎಂದಿದ್ದಾರೆ. ಆರೋಗ್ಯ ಇಲಾಖೆಯವರನ್ನು ಕೇಳಿದರೆ ಹೊಸ ನೇಮಕಾತಿ ಆಗಬೇಕು. ಅದಕ್ಕಾಗಿ ಆರ್ಥಿಕ ಇಲಾಖೆಯ ಒಪ್ಪಿಗೆ ಬೇಕು ಎನ್ನುತ್ತಾರೆ. ಚಿತ್ತಾಪುರದಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಸರ್ಕಾರಿ ವಸತಿ ನಿಲಯದಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿತ್ತು. ಈಗ ವಿದ್ಯಾರ್ಥಿಗಳು ಇರುವುದರಿಂದ ಬೇರೆ ಕಡೆ ಜಾಗ ಇಲ್ಲದಂತಾಗಿದೆ. ಇದನ್ನೆಲ್ಲ ಮೇಲ್ವಿಚಾರಣೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಇರಬೇಕು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಿಲ್ಲ ಎಂದು ಹರಿಹಾಯ್ದರು.

ಚೆಕ್‌ಪೋಸ್ಟ್‌ಗಳಲ್ಲಿ ತೀವ್ರಗೊಳ್ಳದ ನಿಗಾ

ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿದೆ. ಅಲ್ಲಿ ಕಾಟಾಚಾರಕ್ಕೆ ತಪಾಸಣಾ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಎರಡು ಡೋಸ್ ಹಾಕಿಸಿಕೊಂಡಿರುವ ಅಥವಾ 72 ಗಂಟೆಗಳ ಹಿಂದೆ ಆರ್‌ಟಿ–ಪಿಸಿಆರ್‌ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರುವುದನ್ನು ಖಚಿತಪಡಿಸಿಕೊಂಡು ಒಳಗೆ ಬಿಡಬೇಕು ಎಂಬ ನಿಯಮವಿದೆ. ಆದರೆ, ಅಧಿಕಾರಿಗಳು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ಇದು ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ನಂತರ ತಪಾಸಣೆ ನಡೆಸುವ ಗೋಜಿಗೆ ಹೋಗುವುದಿಲ್ಲ ಎಂಬ ಆರೋಪಗಳಿವೆ.

ಚೆಕ್‌ಪೋಸ್ಟ್‌ನಲ್ಲಿ ಇದ್ದುದರಲ್ಲಿ ಕೊಂಚ ತಪಾಸಣೆಯಾದರೂ ನಡೆಯುತ್ತದೆ. ಆದರೆ, ರೈಲಿನ ಮೂಲಕ ಜಿಲ್ಲೆಗೆ ಬರುವವರನ್ನು ತಪಾಸಣೆ ಮಾಡುವ ವ್ಯವಸ್ಥೆಯೇ ಇಲ್ಲ.

ಸಾರಾಂಶ

ಜಿಲ್ಲೆಯಲ್ಲಿ ವಾರದಿಂದ ನಿತ್ಯ ಸರಾಸರಿ 450ಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಬೇಕಿದ್ದ ಜಿಲ್ಲಾಡಳಿತ ಇನ್ನೂ ಸಮರ್ಪಕವಾಗಿ ಕೋವಿಡ್‌ ಆರೈಕೆ ಕೇಂದ್ರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಮೀನ ಮೇಷ ಎಣಿಸುತ್ತಿದೆ. ಜೊತೆಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಜನರ ಮನವೊಲಿಸುವಲ್ಲಿಯೂ ವಿಫಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.