ADVERTISEMENT

ಪ್ರತ್ಯೇಕ ಕಾರಿಡಾರ್‌ನ ರಾಜ್ಯದ ಮೊದಲ ಯೋಜನೆ ಎಚ್‌ಡಿಬಿಆರ್‌

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಬಸವರಾಜ ಹವಾಲ್ದಾರ
Published 14 ಜುಲೈ 2022, 14:23 IST
Last Updated 14 ಜುಲೈ 2022, 14:23 IST
ಉದ್ಘಾಟನೆಗೆ ಸಿದ್ಧಗೊಂಡಿರುವ ಬಿಆರ್‌ಟಿಎಸ್‌ನ ‘ಚಿಗರಿ’ ಬಸ್‌ಗಳು
ಉದ್ಘಾಟನೆಗೆ ಸಿದ್ಧಗೊಂಡಿರುವ ಬಿಆರ್‌ಟಿಎಸ್‌ನ ‘ಚಿಗರಿ’ ಬಸ್‌ಗಳು   

ಹುಬ್ಬಳ್ಳಿ–ಧಾರವಾಡ ಮಧ್ಯೆ ನಿತ್ಯ ಸಂಚರಿಸುವ ಪ್ರಯಾಣಿಕರನ್ನು ಹೊತ್ತೊಯ್ಯುವ ಬಸ್‌ಗಳಿಗಾಗಿಯೇ ಪ್ರತ್ಯೇಕ ಕಾರಿಡಾರ್‌ ನಿರ್ಮಿಸಿರುವ ರಾಜ್ಯದ ಮೊದಲ ಯೋಜನೆ ಎಚ್‌ಡಿಬಿಆರ್‌ಟಿಎಸ್‌ (ಹುಬ್ಬಳ್ಳಿ–ಧಾರವಾಡ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆ).

ಕಾರಿಡಾರ್‌ನಲ್ಲಿ ‘ಚಿಗರಿ’ ಬಸ್‌ಗಳ ಓಡಾಟ ಜೋರಾಗಿದ್ದು, ಹವಾ ನಿಯಂತ್ರಿತ ಬಸ್‌ಗಳಲ್ಲಿ ಜನರು ನೆಮ್ಮದಿಯಿಂದ ಪ್ರಯಾಣಿಸುತ್ತಿದ್ದಾರೆ. ನಿತ್ಯ 90 ಸಾವಿರ ಮಂದಿ ಸಂಚರಿಸುತ್ತಿದ್ದಾರೆ. ₹ 44 ಕೋಟಿ ವೆಚ್ಚದಲ್ಲಿ ಖರೀದಿಸುತ್ತಿರುವ 50ಕ್ಕೂ ಹೆಚ್ಚು ವಿದ್ಯುತ್‌ ಚಾಲಿತ ಬಸ್‌ಗಳು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ.

ಅವಳಿ ನಗರದ ನಡುವೆ 32 ಅತ್ಯಾಧುನಿಕ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮೆಟ್ರೊ ಮಾದರಿಯಲ್ಲಿ ಟಿಕೆಟ್‌ ಅನ್ನು ನಿಲ್ದಾಣದಲ್ಲಿಯೇ ಪಡೆದುಕೊಂಡು ಪಂಚ್‌ ಮಾಡಿದ ನಂತರವಷ್ಟೇ ನಿಲ್ದಾಣ ಪ್ರವೇಶಿಸಬಹುದಾಗಿದೆ. ಮಾರ್ಗದುದ್ದಕ್ಕೂ 160ಕ್ಕೂ ಹೆಚ್ಚು ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ADVERTISEMENT

ಕಾರಿಡಾರ್‌ ಇದ್ದರೂ ಸಹ ಅಲ್ಲಲ್ಲಿ ಅಡೆ ತಡೆಗಳಿಂದ ಮುಕ್ತವಾಗಿಲ್ಲ. ಸಿಗ್ನಲ್‌ ಕ್ರಾಸಿಂಗ್‌ ಸಂದರ್ಭದಲ್ಲಿ ನಿಲುಗಡೆ ಮಾಡುವುದರಿಂದ ನಿಯಮಿತ ನಿಲುಗಡೆಗಳನ್ನು ಹೊಂದಿರುವ ಬಸ್‌ ಅರ್ಧ ಗಂಟೆಯಲ್ಲಿ ಹುಬ್ಬಳ್ಳಿಯಿಂದ ಧಾರವಾಡ ತಲುಪಿದರೆ, ಎಲ್ಲ ಕಡೆಗಳಲ್ಲಿ ನಿಲುಗಡೆಯಾಗುವ ಬಸ್‌ 45 ನಿಮಿಷ ತೆಗೆದುಕೊಳ್ಳುತ್ತದೆ. ತ್ವರಿತ ಸೇವೆಯ ಹೆಸರಿನಲ್ಲಿ ಆರಂಭಿಸಿರುವ ಯೋಜನೆಯ ಬಸ್‌ಗಳಿಗೆ ವೇಗ ನೀಡುವ ಕೆಲಸ ಆಗಬೇಕಿದೆ.

ಈಗ ಕೈಗಾರಿಕಾ ಸಚಿವರಾಗಿರುವ ಜಗದೀಶ ಶೆಟ್ಟರ್ ಅವರು, 2012ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗ ₹ 692 ಕೋಟಿ ವೆಚ್ಚದಲ್ಲಿ 22 ಕಿ.ಮೀ. ಕಾರಿಡಾರ್ ನಿರ್ಮಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದರು. ವಿಳಂಬವಾಗಿದ್ದರಿಂದ ವೆಚ್ಚ ಹೆಚ್ಚಾಗಿ ಈಗ ₹ 970 ಕೋಟಿ ತಲುಪಿದೆ. 2017ಕ್ಕೆ ಮುಗಿಯಬೇಕಿದ್ದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ನವಲೂರು ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಕೆಲವು ಕಾಮಗಾರಿಗಳು ಬಾಕಿ ಉಳಿದಿವೆ.

ಪ್ರತಿ ತಿಂಗಳು ಬಿಆರ್‌ಟಿಎಸ್‌ ಬಸ್‌ಗಳ ಕಾರ್ಯಾಚರಣೆಗಾಗಿ ₹ 5 ಕೋಟಿ ವೆಚ್ಚವಾಗುತ್ತಿದೆ. ₹ 3 ಕೋಟಿ ಆದಾಯ ಬರುತ್ತಿದ್ದು, ₹ 2 ಕೋಟಿ ನಷ್ಟವಾಗುತ್ತಿದೆ. ಜಾಹೀರಾತು, ಬಾಡಿಗೆಯಿಂದ ₹50 ಲಕ್ಷ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜತೆಗೆ ಆದಾಯ ಹೆಚ್ಚಿಸುವ ಮೂಲಗಳನ್ನು ಪರಿಶೀಲಿಸಲಾಗುತ್ತಿದೆ.

ಬಿಎಂಟಿಸಿ ನಗರ ಸಾರಿಗೆಯಲ್ಲಿ ಹವಾನಿಯಂತ್ರಿತ ಬಸ್‍ಗಳಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹3.72 ದರ ನಿಗದಿ ಮಾಡಿದ್ದರೆ, ಬಿಆರ್‌ಟಿಎಸ್‌ ಪ್ರತಿ ಕಿ.ಮೀ. ₹ 1.18 ದರ ನಿಗದಿ ಮಾಡಲಾಗಿದೆ. ಕಡಿಮೆ ದರದಲ್ಲಿ ಉತ್ತಮ ಸಾರಿಗೆ ಸೇವೆ ನೀಡಲಾಗುತ್ತಿದೆ.

ಟಿಕೆಟ್‌ ಪಡೆದುಕೊಳ್ಳಲು ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ. ಕಾಮಗಾರಿ ಆರಂಭವಾದ ಏಳು ವರ್ಷಗಳಲ್ಲಿ ಐವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ತೆರಿಗೆ ಹೊರೆ:

ವಾಹನಗಳ ತೆರಿಗೆ ಶೇ 5.55 ಹಾಗೂ ಹವಾ ನಿಯಂತ್ರಿತ ಬಸ್‌ ಓಡಿಸುವುದರಿಂದ ಜಿಎಸ್‌ಟಿ ರೂಪದಲ್ಲಿ ಶೇ 5ರಷ್ಟು ತೆರಿಗೆ ಪಾವತಿಸಬೇಕಿದೆ. ₹ 100 ಆದಾಯ ಬಂದರೆ ₹ 10.50 ತೆರಿಗೆ ರೂಪದಲ್ಲಿ ಹೋಗುತ್ತಿದೆ. ಯೋಜನಾ ಸಲಹೆಗಾರರಿಗೇ ₹ 24.5 ಕೋಟಿ ಮೊತ್ತ ಪಾವತಿಸಲಾಗಿದೆ. ಇದಕ್ಕೆ ವಿನಾಯ್ತಿ ನೀಡಿದರೆ, ಒಂದಷ್ಟು ಹೊರೆ ಕಡಿಮೆಯಾಗಲಿದೆ.

ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಐಟಿಎಸ್‌) ಸೆಂಟರ್:

ಕಾರಿಡಾರ್ ಅನ್ನು ಪೂರ್ತಿಯಾಗಿ ಈ ಸೆಂಟರ್‌ಗಳಿಂದಲೇ ನಿರ್ವಹಿಸಲಾಗುತ್ತದೆ. ಬಸ್‌ ಎಲ್ಲಿದೆ. ಎಷ್ಟು ವೇಗದಲ್ಲಿ ಚಲಿಸುತ್ತಿದೆ. ಮುಂದಿನ ನಿಲ್ದಾಣಕ್ಕೆ ಎಷ್ಟೊತ್ತಿಗೆ ಹೋಗುತ್ತದೆ. ಕಾರಿಡಾರ್‌ನಲ್ಲಿ ಏನಾದರೂ ತೊಂದರೆಯಾಗಿದೆಯಾ ಎಂಬುದನ್ನು ಕ್ಯಾಮೆರಾಗಳ ಮೂಲಕವೇ ತಿಳಿದುಕೊಂಡು ಕೂಡಲೇ ಸರಿ ಪಡಿಸಲು ಕ್ರಮಕೈಗೊಳ್ಳಲಾಗುತ್ತದೆ

ಕಾರಿಡಾರ್‌ ನಿರ್ಮಾಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗಿಡಗಳನ್ನು ಕಡಿಯಲಾಗಿದೆ. ಪರ್ಯಾಯವಾಗಿ ಈಗಾಗಲೇ 25,400 ಸಸಿಗಳನ್ನು ನೆಡಲಾಗಿದೆ. ಕಾರಿಡಾರ್‌ ಮಾರ್ಗದಲ್ಲಿಯೂ 2,110 ಸಸಿಗಳನ್ನು ನೆಡಲಾಗಿದೆ.

ಪ್ರಸ್ತಾವ

ಬಿಆರ್‌ಟಿಎಸ್‌ ಅನ್ನು ಪ್ರತ್ಯೇಕ ನಗರ ಸಾರಿಗೆಯನ್ನಾಗಿ ಮಾಡಬೆಕು. ಕಾರಿಡಾರ್‌ ನಿರ್ವಹಣೆಗೆ ಸಂಬಂಧಿಸಿದರೆ ಪ್ರತ್ಯೇಕ ಪೊಲೀಸ್‌ ಸ್ಟೇಷನ್‌ ಆರಂಭಿಸಬೇಕು ಎನ್ನುವ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸ್ಮಾರ್ಟ್‌ ಕಾರ್ಡ್‌ ಸಿದ್ಧಗೊಂಡಿದ್ದು, ನೀತಿ ಸಂಹಿತೆ ಮುಗಿದ ಮೇಲೆ ಅವುಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

₹970.87 ಕೋಟಿ ಯೋಜನೆಯ ಒಟ್ಟು ವೆಚ್ಚ

72.29 ಎಕರೆ ಸ್ವಾಧೀನ ಪಡಿಸಿಕೊಂಡ ಭೂಮಿ

₹301.71 ಕೋಟಿ ಭೂಮಿಗೆ ನೀಡಿದ ಪರಿಹಾರ

ನಿತ್ಯ 85ರಿಂದ 90 ಸಾವಿರ ಪ್ರಯಾಣಿಕರ ಪ್ರಯಾಣ

105 ಈಗ ಓಡುತ್ತಿರುವ ಚಿಗರಿ ಬಸ್‌ಗಳ ಸಂಖ್ಯೆ

32 ಬಸ್‌ ಸ್ಟಾಪ್‌

1,100 ಟ್ರಿಪ್

₹16 ಲಕ್ಷ ಪ್ರತಿ ದಿನದ ವೆಚ್ಚ

₹8 ಲಕ್ಷ ಪ್ರತಿ ದಿನದ ಆದಾಯ

l ಹೊಸೂರದಿಂದ ನವೀನ್‌ ಹೋಟೆಲ್‌ವರೆಗೆ ಏಳು ಪಥ

l ನವೀನ್‌ ಹೋಟೆಲ್‌ನಿಂದ ಗಾಂಧಿನಗರದವರೆಗೆ ಎಂಟು ಪಥ

l ಗಾಂಧಿನಗರದಿಂದ ಜ್ಯುಬಿಲಿ ವೃತ್ತದವರೆಗೆ 7 ಏಳು ಪಥ‌

l ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಡಿಪೊ

l ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಟರ್ಮಿನಲ್

l 32 ಅತ್ಯಾಧುನಿಕ ಬಸ್‌ ನಿಲ್ದಾಣ

l ಮೂರು ಕಡೆಗಳಲ್ಲಿ ಮೇಲ್ಸೇತುವೆ

l ಆರು ಕಡೆಗಳಲ್ಲಿ ಪಾದಚಾರಿ ಮೇಲ್ಸೇತುವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.