ADVERTISEMENT

ಹನಿಟ್ರ್ಯಾಪ್: ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳ ಬಂಧನ

ಪೂಜೆಗೆ ಕರೆಯಿಸಿ ಅರ್ಚಕರನ್ನು ಬಲೆಗೆ ಬೀಳಿಸಿದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 13:41 IST
Last Updated 21 ಜನವರಿ 2022, 13:41 IST
ಭವ್ಯಾ
ಭವ್ಯಾ   

ಮಂಗಳೂರು: ಮನೆಯಲ್ಲಿ ಪೂಜೆ ಮಾಡಿಸಬೇಕು ಎಂದು ಪುರೋಹಿತರನ್ನು ಕರೆಯಿಸಿ, ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲೆ ಶನಿವಾರ ಸಂತೆಯ ಮೈಲಾಪುರ ಗ್ರಾಮದ ಭವ್ಯಾ ಹಾಗೂ ಹಾಸನ ಜಿಲ್ಲೆ‌ ಅರಕಲಗೂಡು ತಾಲ್ಲೂಕಿನ ಕುಮಾರ್ ಅಲಿಯಾಸ್‌ ರಾಜು ಬಂಧಿತ ಆರೋಪಿಗಳು.

ಪ್ರಕರಣದ ವಿವರ: ದಾಂಪತ್ಯದಲ್ಲಿ ಸಮಸ್ಯೆ ಇದ್ದು, ಅದರ ಪರಿಹಾರಕ್ಕಾಗಿ ಮನೆಯಲ್ಲಿ ಪೂಜೆ ಮಾಡಿಸಬೇಕು ಎಂದು ಆರೋಪಿಗಳು ಚಿಕ್ಕಮಗಳೂರಿನ ಪುರೋಹಿತರೊಬ್ಬರನ್ನು ಪದವಿನಂಗಡಿಯಲ್ಲಿರುವ ತಮ್ಮ ಮನೆಗೆ ಕರೆಯಿಸಿದ್ದರು.

ADVERTISEMENT

ಮನೆಯಲ್ಲಿ ಪುರೋಹಿತರ ಜೊತೆಗೆ ಕೆಲವು ಫೋಟೊ ಮತ್ತು ವಿಡಿಯೊಗಳನ್ನು ತೆಗೆದು, ಆನಂತರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದರು. ಪುರೋಹಿತರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಇವರಿಂದ ಸುಮಾರು ₹15 ಲಕ್ಷ ನಗದು ರೂಪದಲ್ಲಿ ಹಾಗೂ ಸುಮಾರು ₹34 ಲಕ್ಷವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಪೊಲೀಸ್‌ ಇನ್‌ಸ್ಪೆಕ್ಟರ್‌, ಮಹಿಳಾ ಸಂಘಟನೆಗಳ ಹೆಸರಿನಲ್ಲಿಯೂ ಇವರು ಪುರೋಹಿತರಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಇನ್ನೂ ಹಲವರನ್ನು ವಂಚಿಸಿರುವ ಸಾಧ್ಯತೆ ಇದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಆರೋಪಿಗಳಿಂದ ₹37,000 ಮೌಲ್ಯದ ಎರಡು ಚಿನ್ನದ ಉಂಗುರ, ₹31,000 ನಗದು ಮತ್ತು 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಗಳಾದ ರಾಜೇಂದ್ರ ಬಿ., ಪ್ರದೀಪ ಟಿ.ಆರ್. ಹಾಗೂ ಸಿಸಿಬಿ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಐಷಾರಾಮಿ ಜೀವನ

ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು, ಹಣ ಕೈಸೇರಿದ ನಂತರ ₹10 ಲಕ್ಷ ನೀಡಿ ಫ್ಲ್ಯಾಟ್ ಒಂದನ್ನು ಲೀಸ್‌ಗೆ ಪಡೆದುಕೊಂಡಿದ್ದರು. ಈ ಫ್ಲಾಟ್‌ಗೆ ಸುಮಾರು ₹7 ಲಕ್ಷ ಮೌಲ್ಯದ ಮನೆ ಸಾಮಗ್ರಿ ಹಾಗೂ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ಭವ್ಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ  ಪಡೆದುಕೊಳ್ಳಲಾಗಿದೆ.

ಸಾರಾಂಶ

ಮನೆಯಲ್ಲಿ ಪೂಜೆ ಮಾಡಿಸಬೇಕು ಎಂದು ಪುರೋಹಿತರನ್ನು ಕರೆಯಿಸಿ, ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.