ADVERTISEMENT

ಉಪಚುನಾವಣೆ ಪ್ರತಿಷ್ಠೆಯಲ್ಲ, ಜನರ ಭವಿಷ್ಯ: ಬಸವರಾಜ ಬೊಮ್ಮಾಯಿ

ಏತ ನೀರಾವರಿ ಯೋಜನೆಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 14:00 IST
Last Updated 17 ಅಕ್ಟೋಬರ್ 2021, 14:00 IST
ಹಾನಗಲ್‌ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಾನಗಲ್‌ ವಿಧಾನಸಭಾ ಉಪಚುನಾವಣೆ ಪ್ರಚಾರಾರ್ಥ ‘ಬೃಹತ್‌ ಸಾರ್ವಜನಿಕ ಸಭೆ’ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಇದ್ದಾರೆ  
ಹಾನಗಲ್‌ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಾನಗಲ್‌ ವಿಧಾನಸಭಾ ಉಪಚುನಾವಣೆ ಪ್ರಚಾರಾರ್ಥ ‘ಬೃಹತ್‌ ಸಾರ್ವಜನಿಕ ಸಭೆ’ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಇದ್ದಾರೆ     

ಹಾವೇರಿ: ‘ಹಾನಗಲ್‌ ಉಪಚುನಾವಣೆ ನನಗೆ ಪ್ರತಿಷ್ಠೆಯ ವಿಷಯವಲ್ಲ. ಆದರೆ, ಈ ಗೆಲುವಿನಲ್ಲಿ ತಾಲ್ಲೂಕಿನ ಜನರ ಭವಿಷ್ಯ ಅಡಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಹಾನಗಲ್‌ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಾನಗಲ್‌ ವಿಧಾನಸಭಾ ಉಪಚುನಾವಣೆ ಪ್ರಚಾರಾರ್ಥ ಭಾನುವಾರ ಏರ್ಪಡಿಸಿದ್ದ ‘ಬೃಹತ್‌ ಸಾರ್ವಜನಿಕ ಸಭೆ’ಯಲ್ಲಿ ಅವರು ಮಾತನಾಡಿದರು. 

‘ಈ ಉಪಚುನಾವಣೆಗಳು ಮುಂದಿನ ಚುನಾವಣೆಯ ದಿಕ್ಸೂಚಿಯಲ್ಲ ಎಂಬುದನ್ನು ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ನಾವೂ ಹೇಳಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಉಪಚುನಾವಣೆಗಳನ್ನೂ ಗೆದ್ದರು. ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿದ್ದರು. ಈ ಉಪಚುನಾವಣೆಗಳು ಆ ಎರಡು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿವೆ. ಸಾರ್ವತ್ರಿಕ ಚುನಾವಣೆ ಬಂದಾಗ ಜನರು ಸರಿಯಾದ ತೀರ್ಮಾನ ನೀಡುತ್ತಾರೆ’ ಎಂದು ಹೇಳಿದರು. 

ADVERTISEMENT

ಅಲ್ಪಸಂಖ್ಯಾತರ ಮತಕ್ಕಾಗಿ ಅಪಪ್ರಚಾರ:

ಎಚ್‌.ಡಿ. ಕುಮಾರಸ್ವಾಮಿ ಅವರು ಯಾರನ್ನು ಮೆಚ್ಚಿಸಲು ಆರ್.ಎಸ್.ಎಸ್ ಮೇಲೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಅವರ ಆರೋಪ ಸತ್ಯಕ್ಕೆ ದೂರವಾದುದು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಆರ್.ಎಸ್.ಎಸ್ ವಿರುದ್ಧ ಆರೋಪ ಮಾಡಲು ಪೈಪೋಟಿ ಇದೆ. ಅಲ್ಪಸಂಖ್ಯಾತರನ್ನು ಓಲೈಸಿ ಮತಗಳನ್ನು ಗಳಿಸಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ತಿರುಗೇಟು ನೀಡಿದರು. 

ದಾಖಲೆ ಬಿಡುಗಡೆ

ಹಾನಗಲ್‌ ಅಳಿಯ ಬೊಮ್ಮಾಯಿ ಅವರ ಕೊಡುಗೆ ಏನು? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಬಾಳಂಬೀಡ ಏತ ನೀರಾವರಿ ಯೋಜನೆ ಕಾಂಗ್ರೆಸ್‌ ಸರ್ಕಾರದಲ್ಲಿ ಆದದ್ದು ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಸಿ.ಎಂ. ಉದಾಸಿ ಮತ್ತು ನಾನು, ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮುಂದೆ ಪ್ರಸ್ತಾಪ ಮಾಡಿದಾಗ ₹418 ಕೋಟಿ ವೆಚ್ಚದ ಬಾಳಂಬೀಡ ಮತ್ತು ₹115 ಕೋಟಿ ವೆಚ್ಚದ ಹಿರೇಕಾಂಶಿ ಯೋಜನೆಗೆ ಮಂಜೂರಾತಿ ನೀಡಿದರು. ಅದರ ಸಮಗ್ರ ದಾಖಲೆಯನ್ನು ನಿಮಗೆ ಕಳುಹಿಸಿಕೊಡುತ್ತೇನೆ ಎಂದು ಸಭೆಯಲ್ಲಿ ದಾಖಲೆಗಳನ್ನು ಪ್ರದರ್ಶಿಸಿದರು. 

ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್

ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಆ ಪಕ್ಷದ ಎಲ್ಲ ನಾಯಕರ ಮೇಲೂ ಆರೋಪಗಳಿವೆ. ಯಾರ ಹೆಸರನ್ನು ಹೇಳಲಿ, ಯಾರ ಹೆಸರನ್ನು ಬಿಡಲಿ. ನಾನು ಮುಖ್ಯಮಂತ್ರಿಯಾದ ನಂತರ 5 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇನೆ. ಹಾನಗಲ್‌ ಕ್ಷೇತ್ರಕ್ಕೆ 7400 ಮನೆಗಳನ್ನು ಮಂಜೂರು ಮಾಡಿದ್ದೇನೆ. ಬಡವರಿಗೆ ಮನೆ, ಕೆರೆಗಳಿಗೆ ನೀರು, ಆಸ್ಪತ್ರೆಗಳ ಉನ್ನತೀಕರಣ, ಮೆಡಿಕಲ್‌ ಕಾಲೇಜು... ಇವು ಸಾಧನೆಗಳಲ್ಲದೆ ಮತ್ತೀನೇನು? ಎಂದು ಸಿದ್ದರಾಮಯ್ಯ ಅವರ ಎಲ್ಲ ಆರೋಪಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು. 

‘ತಪ್ಪು ಮಾಡಿದ್ರೆ ಜೈಲಿಗೆ ಕಳುಹಿಸಿ’

ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿ, ಸಿದ್ದರಾಮಯ್ಯನವರೇ ನೀವು ಐದು ವರ್ಷ ಮುಖ್ಯಮಂತ್ರಿಯಾಗಿದ್ರಿ. ಸಂಗೂರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ನಾವು ತಪ್ಪು ಮಾಡಿದ್ರೆ ಜೈಲಿಗೆ ಕಳುಹಿಸಬೇಕಿತ್ತು. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸುಳ್ಳು ಆರೋಪ ಮಾಡುತ್ತೀರಿ. ನಿಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ಸೋಲಿಸಿ, ಕೆಆರ್‌ಎಸ್‌ಗೆ ಒಗೆದಿದ್ದಾರೆ ಎಂದು ತಿರುಗೇಟು ನೀಡಿದರು. 

‘ಏಕವಚನದಲ್ಲಿ ಬೈಯ್ಯೋಕೆ ನಮಗೂ ಬರುತ್ತೆ’

ಸಿದ್ದರಾಮಯ್ಯನವರೇ ನಿಮಗೆ ಮಾನ ಮರ್ಯಾದೆ ಇಲ್ವಾ, ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಮಾತನಾಡುತ್ತೀರಿ. ನಿಮನ್ನು ಏಕವಚನದಲ್ಲಿ ಬೈಯ್ಯೋಕೆ ನಮಗೂ ಬರುತ್ತೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.

ನಿಮ್ಮ ಪಕ್ಷದವರು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರು ನೀಡಿದ ಭಿಕ್ಷೆಯಿಂದ ಅಧಿಕಾರ ಪಡೆದಿದ್ದಾರೆ. ಆದರೆ, ಮೋದಿ ಅವರು ವಿಶ್ವ ಮೆಚ್ಚಿದ ನಾಯಕರಾಗಿದ್ದಾರೆ. ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ರಾಹುಲ್‌ಗಾಂಧಿ ಹೆಬ್ಬೆಟ್ಟು ಗಿರಾಕಿ ಅಂತ ನಿಮಗೂ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರು ಪಿಎಂ ಆಗಲು ನಿಮ್ಮ ಪಕ್ಷದವರೇ ಬಯಸೋಲ್ಲ ಎಂದು ವ್ಯಂಗ್ಯವಾಡಿದರು. 

ಸಾರಾಂಶ

‘ಹಾನಗಲ್‌ ಉಪಚುನಾವಣೆ ನನಗೆ ಪ್ರತಿಷ್ಠೆಯ ವಿಷಯವಲ್ಲ. ಆದರೆ, ಈ ಗೆಲುವಿನಲ್ಲಿ ತಾಲ್ಲೂಕಿನ ಜನರ ಭವಿಷ್ಯ ಅಡಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.