ಹಾವೇರಿ: ‘ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಉತ್ತಮ ಸೇವೆ ಸಿಗದಿದ್ದರೆ, ಜನರು ಖಾಸಗಿ ವಲಯದ ಬ್ಯಾಂಕ್‌ಗಳತ್ತ ಆಕರ್ಷಿತರಾಗುತ್ತಾರೆ. ಆಗ ನಿಮ್ಮ ಬ್ಯಾಂಕ್ ಮುಚ್ಚುವ ಪರಿಸ್ಥಿತಿ ಬರಬಹುದು. ಇದಕ್ಕೆ ಅವಕಾಶ ನೀಡದಂತೆ ಜನರಿಗೆ ಉತ್ತಮ ಸೇವೆ ನೀಡಿ’ ಎಂದು ಸಂಸದ ಶಿವಕುಮಾರ ಉದಾಸಿ ಎಚ್ಚರಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಸಿಬ್ಬಂದಿಗೆ ತಮ್ಮ ಬ್ಯಾಂಕ್‍ನ ಉದ್ದೇಶ, ಗುರಿಗಳ ಬಗ್ಗೆ ಮಾಹಿತಿ ಇಲ್ಲ. ಬ್ಯಾಂಕ್ ಮತ್ತು ಸೇವೆಗಳು ಎಂಬ ಪದಗಳಲ್ಲಿ ಸೇವೆ ಅಂದರೆ ಏನು ಎಂಬುದೇ ನಿಮಗೆ ಅರ್ಥವಾಗುತ್ತಿಲ್ಲ. ಪ್ರತಿ ಸಭೆಯಲ್ಲಿ ಹೇಳಿದರೂ ನಿಮ್ಮ ಸ್ಪಂದನೆ ಸುಧಾರಿಸುತ್ತಿಲ್ಲ. ಜನತೆ ಖಾಸಗಿ ಬ್ಯಾಂಕ್‍ಗಳತ್ತ ವಾಲಿದರೆ ನಿಮಗೆ ಕೆಲಸ ಇಲ್ಲದಂತಾಗುತ್ತದೆ. ಇದನ್ನು ಅರಿತು ಕೆಲಸ ಮಾಡಬೇಕು ಎಂದು ಬ್ಯಾಂಕರ್ಸ್‍ಗಳಿಗೆ ಸೂಚಿಸಿದರು.
ಜಿಪಂ ಸಿಇಒ ಮೊಹಮ್ಮದ್ ರೋಶನ್, ಕಳೆದ ಸಭೆಯಲ್ಲಿ ಸೂಚಿಸಿದನ್ವಯ ಬ್ಯಾಂಕ್ ಶಾಖೆಯ ಪ್ರಕಾರ ಮಾಹಿತಿ ಪಡೆದುಕೊಂಡು ಬ್ಯಾಂಕ್‍ಗಳ ಸಾಧನೆಯನ್ನಾಧರಿಸಿ ಟಾಪ್ -10 ಹಾಗೂ ಬಾಟಂ-10 ಶಾಖೆಗಳನ್ನು ಗುರುತಿಸಿದ್ದೇವೆ. ಮುಂದಿನ ಸಭೆಯಲ್ಲಿ ಮುದ್ರಾ, ಉದ್ಯೋಗಿನಿ ಸೇರಿದಂತೆ ಪ್ರತಿಯೊಂದು ಸರ್ಕಾರದ ಪುರಸ್ಕೃತ ಯೋಜನೆಗಳ ಪ್ರಕಾರ ಸಾಧನಾ ಪಟ್ಟಿ ಸಿದ್ಧಪಡಿಸುತ್ತೇವೆ ಎಂದರು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ರಾಣೆಬೆನ್ನೂರ, ಹಾವೇರಿ ತಾಲ್ಲೂಕುಗಳಲ್ಲಿ ಅಡಿಕೆ ಬೆಳೆಯುವ ರೈತರಿಗೆ ಸಹಾಯಧನ ನೀಡಲು ಕ್ರಮಕೈಗೊಳ್ಳಬೇಕು ಎಂದರು. ಆಗ ಪ್ರತಿಕ್ರಿಯಿಸಿದ ಸಂಸದರು, ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಲೀಡ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮುಖ್ಯಸ್ಥ ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೆವಿಜಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ನಾರಾಯಣ ಯಾಜಿ, ನಬಾರ್ಡ್ ಬ್ಯಾಂಕಿನ ಉಪನಿರ್ದೇಶಕ ಮಹದೇವ ಕೀರ್ತಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಇದ್ದರು.
‘ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಉತ್ತಮ ಸೇವೆ ಸಿಗದಿದ್ದರೆ, ಜನರು ಖಾಸಗಿ ವಲಯದ ಬ್ಯಾಂಕ್‌ಗಳತ್ತ ಆಕರ್ಷಿತರಾಗುತ್ತಾರೆ. ಆಗ ನಿಮ್ಮ ಬ್ಯಾಂಕ್ ಮುಚ್ಚುವ ಪರಿಸ್ಥಿತಿ ಬರಬಹುದು. ಇದಕ್ಕೆ ಅವಕಾಶ ನೀಡದಂತೆ ಜನರಿಗೆ ಉತ್ತಮ ಸೇವೆ ನೀಡಿ’ ಎಂದು ಸಂಸದ ಶಿವಕುಮಾರ ಉದಾಸಿ ಎಚ್ಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.