ಹಾನಗಲ್: ಬಿಜೆಪಿ ಮುಖಂಡ ಹಾಗೂ ಪಂಚಮಸಾಲಿ ಸಮಾಜದ ಮುಖಂಡರಾದ ಸಿ.ಆರ್. ಬಳ್ಳಾರಿ ಬುಧವಾರ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ ಬಿಜೆಪಿಗೆ ಎದುರಾಗಿದ್ದ ಬಂಡಾಯದ ಆತಂಕ ನಿವಾರಣೆಯಾಗಿದೆ.
ಸಚಿವ ಮುರಗೇಶ ನಿರಾಣಿ ಸೇರಿದಂತೆ ಪಕ್ಷದ ಇತರ ಮುಖಂಡರು ನಡೆಸಿದ ಮಾತುಕತೆ ಫಲಪ್ರದವಾಗಿದೆ. ವಕೀಲ ಚನ್ನಗೌಡ್ರ ಮನೆಯಲ್ಲಿ ಸಭೆ ನಡೆದಿತ್ತು. ಸಮಾಜದ ಪ್ರಮುಖರಾದ ನಿಜಲಿಂಗಪ್ಪ ಮುದಿಯಪ್ಪನವರ, ಎ.ಎಸ್.ಬಳ್ಳಾರಿ, ಮಾಲತೇಶ ಸೊಪ್ಪಿನ ಸಭೆಯಲ್ಲಿ ಇದ್ದರು.
‘ನಿರೀಕ್ಷೆಯಂತೆ ಸಚಿವ ಮುರಗೇಶ ನಿರಾಣಿ ಅವರು ಹಾನಗಲ್‌ನಲ್ಲಿ ಭೇಟಿಯಾಗಿದ್ದರು. ಒಂದು ತಾಸು ಮಾತುಕತೆ ನಡೆಯಿತು. ಸ್ಥಾನಮಾನದ ಭರವಸೆ ನೀಡಿದರು. ನನಗೆ ವೈಯಕ್ತಿಕ ಸ್ಥಾನಮಾನಕ್ಕಿಂತ ಸಮಾಜದ ಹಿತ ಮುಖ್ಯ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು ಎಂದು ಒತ್ತಾಯಿಸಿದ್ದೇನೆ. ಗುರುವಾರದಿಂದ ಬಿಜೆಪಿ ಪರವಾಗಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ಸಿ.ಆರ್. ಬಳ್ಳಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಮೊದಲಿನಿಂದಲೂ ಹಾನಗಲ್ ತಾಲ್ಲೂಕಿನಲ್ಲಿ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಬಳ್ಳಾರಿ ಅವರು, ಈ ಬಾರಿ ಬಿಜೆಪಿ ತಮಗೆ ಅವಕಾಶ ನೀಡುತ್ತದೆ. ಆ ಮೂಲಕ ಪಂಚಮಸಾಲಿ ಸಮಾಜದ ಬೇಡಿಕೆಗಳಿಗೆ ಸ್ಪಂದನೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಕಳೆದ ತಿಂಗಳು ಪಟ್ಟಣದಲ್ಲಿ ನಡೆದಿದ್ದ ಪಂಚಮಸಾಲಿ ಪ್ರತಿಜ್ಞಾ ಅಭಿಯಾನದಲ್ಲಿ ಮೂಚೂಣಿಯಲ್ಲಿ ನಿಂತು ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು.
ಕೂಡಲಸಂಗಮದ ಜಯಮೃತ್ಯಂಜಯ ಶ್ರೀಗಳು ಅಂದಿನ ಸಭೆಯಲ್ಲಿ, ಪಂಚಮಸಾಲಿ ಅಭ್ಯರ್ಥಿಗಳನ್ನು ಪ್ರಮುಖ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಪರಿಗಣಿಸುವಂತೆ ಹೇಳಿಕೆ ಕೊಟ್ಟಿದ್ದರು. ಇದರಿಂದ ಬಳ್ಳಾರಿ ಅವರಿಗೆ ವಿಶ್ವಾಸ ವೃದ್ಧಿಸಿತ್ತು. ಬಿಜೆಪಿ ಟಿಕೆಟ್ ಖಚಿತ ಎಂದು ತಮ್ಮ ಆಪ್ತ ಬಳಗದಲ್ಲಿ ಹೇಳಿಕೊಂಡಿದ್ದರು. ಅಂತಿಮವಾಗಿ ಟಿಕೆಟ್ ಸಿಗದಿದ್ದರಿಂದ ವರಿಷ್ಠರ ವಿರುದ್ಧ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾಲ್ಕು ದಿನಗಳಿಂದ ಬಳ್ಳಾರಿ ಅವರ ಮನವೊಲಿಸುವ ಪ್ರಯತ್ನಗಳು ಬಿಜೆಪಿ ವರಿಷ್ಠರಿಂದ ನಡೆದಿದ್ದವು. ಮಂಗಳವಾರ ದಾವಣಗೇರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗಿನ ಮಾತುಕತೆ ಪೂರ್ಣಪ್ರಮಾಣದಲ್ಲಿ ಫಲಪ್ರದವಾಗಿರಲಿಲ್ಲ.
‘ಸರ್ಕಾರದ ಪ್ರತಿನಿಧಿಯಾಗಿ ಸಚಿವ ಮುರಗೇಶ ನಿರಾಣಿ ಅವರು ಬುಧವಾರ ಹಾನಗಲ್‌ನಲ್ಲಿ ತಮ್ಮನ್ನು ಭೇಟಿ ಮಾಡಬೇಕು. ಸಮಾಜದ ಹಿತಕ್ಕಾಗಿ ಕೆಲವೊಂದು ಚರ್ಚೆಗಳು ಅಗತ್ಯವಾಗಿವೆ’ ಎಂದು ಬೊಮ್ಮಾಯಿ ಅವರಿಗೆ ಸಿ.ಆರ್. ಬಳ್ಳಾರಿ ಷರತ್ತು ಹಾಕಿದ್ದರು.
ಬಿಜೆಪಿ ಮುಖಂಡ ಹಾಗೂ ಪಂಚಮಸಾಲಿ ಸಮಾಜದ ಮುಖಂಡರಾಗಿದ್ದ ಸಿ.ಆರ್. ಬಳ್ಳಾರಿ ಬುಧವಾರ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ ಬಿಜೆಪಿಗೆ ಎದುರಾಗಿದ್ದ ಬಂಡಾಯದ ಆತಂಕ ನಿವಾರಣೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.