ADVERTISEMENT

ಸೌಲಭ್ಯದ ನಿರೀಕ್ಷೆಯಲ್ಲಿ ಕೈಗಾರಿಕಾ ಪ್ರದೇಶ

ಜಿಲ್ಲೆಯ ನಿರುದ್ಯೋಗಿಗಳಿಗೆ ಸಿಗದ ಉದ್ಯೋಗ; ಹೊರ ಜಿಲ್ಲೆಗಳಿಗೆ ಕಾರ್ಮಿಕರ ವಲಸೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:08 IST
Last Updated 11 ಅಕ್ಟೋಬರ್ 2021, 2:08 IST
ಹಾಸನ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ
ಹಾಸನ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ   

ಹಾಸನ: ಕೈಗಾರಿಕೆಗಳ ಸ್ಥಾಪನೆಗೆ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಇದ್ದರೂ ಕೈಗಾರಿಕೋದ್ಯಮಿ ಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕೈಗಾರಿಕಾ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. 

ಜಿಲ್ಲೆಗೆ ಬೃಹತ್‌ ಕೈಗಾರಿಕೆಗಳನ್ನು ತರುವಲ್ಲಿ ಸರ್ಕಾರ ಮತ್ತು ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆ, ನಿರಾಸಕ್ತಿ ಎದ್ದು ಕಾಣುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗದ ಕಾರಣ ಕಾರ್ಮಿಕರು ಉದ್ಯೋಗ ಅರಸಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ವಲಸೆ ಹೋಗುವುದು ತಪ್ಪಿಲ್ಲ.

ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು ನಡುವೆ ಇರುವ ಕೃಷಿ ಪ್ರಧಾನ ಹಾಸನ ಜಿಲ್ಲೆಯಲ್ಲಿ ಕೈಗಾರಿಕೆ ಬೆಳವಣಿಯಾದರೆ ಸರಕು ಸಾಗಾಣಿಕೆಗೆ ವಿಫುಲ ಅವಕಾಶಗಳಿವೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 4,800 ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಘಟಕಗಳು ನೋಂದಾ ಯಿಸಿಕೊಂಡಿದ್ದು, 33,143 ಜನರು ಕೆಲಸ ಮಾಡುತ್ತಿದ್ದಾರೆ. 13 ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು, 18 ಸಾವಿರ ಕಾರ್ಮಿಕರಿಗೆ ಉದ್ಯೋಗ ಲಭಿಸಿದೆ. ‌

ಒಟ್ಟು 5 ಕೈಗಾರಿಕಾ ಪ್ರದೇಶಗಳಿದ್ದು, 571 ಪ್ಲಾಟ್‌ಗಳ ಹಂಚಿಕೆ ಆಗಿದೆ. 7 ಕೈಗಾರಿಕಾ ವಸಾಹತುಗಳಿದ್ದು, ಇದರಲ್ಲಿ 120 ಶೆಡ್‌ಗಳು ಹಾಗೂ 191 ಪ್ಲಾಟ್‌ಗಳನ್ನು ಉದ್ದಿಮೆದಾರರಿಗೆ ಹಂಚಿಕೆ ಮಾಡಲಾಗಿದೆ.

ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಖರೀದಿಸಿದ ಬಹುತೇಕರು ಅನೇಕ ವರ್ಷಗಳಿಂದ ಯಾವುದೇ ಕೈಗಾರಿಕೆ
ಪ್ರಾರಂಭಿಸದೆ ಪಾಳು ಬಿಟ್ಟಿದ್ದಾರೆ. ಈ ಭೂಮಿ ಹಿಂಪಡೆಯುವ ಕಾರ್ಯ ಇಲ್ಲಿವರೆಗೂ ನಡೆದಿಲ್ಲ. ಜಿಲ್ಲಾ ಕೈಗಾರಿಕಾ ಕೇಂದ್ರ ನೋಟಿಸ್‌ ನೀಡಿದರೂ ಪ್ರಯೋಜನವಾಗಿಲ್ಲ. ಶೇ 60ರಷ್ಟು ಭೂಮಿಯಲ್ಲಿ ಇನ್ನೂ ಕೈಗಾರಿಕೆ ಪ್ರಾರಂಭಿಸಿಲ್ಲ.

‘ಕೈಗಾರಿಕಾ ಉದ್ದೇಶಕ್ಕೆ ಖರೀದಿಸಿದ ಭೂಮಿ ಪಾಳು ಬಿಡಲಾಗಿದೆ. ಅವುಗಳನ್ನು ವಾಪಸ್ ಪಡೆದು, ಹೊಸಬರಿಗೆ ಹಂಚಿಕೆ ಮಾಡಬೇಕು. ಬೆಂಗಳೂರಿನಲ್ಲಿ ಹೊರ ರಾಜ್ಯಗಳ ಕಾರ್ಮಿಕರೇ ಹೆಚ್ಚು ಇರುವುದರಿಂದ ಕೈಗಾರಿಕೋದ್ಯಮ ಬೆಳವಣಿಗೆ ಆಗಿದ್ದು, ಉದ್ಯೋಗ ಹೇರಳವಾಗಿದೆ’ ಎನ್ನುತ್ತಾರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಕಾರ್ಯದರ್ಶಿ ದಲಿಚಂದ್‌ ಜೈನ್‌.

‘ಜಿಲ್ಲೆಯಲ್ಲಿ 180ರಿಂದ 200 ಜನ ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ನೀಡಲು ಭೂಮಿ ಇಲ್ಲ. ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಖರೀದಿಸಿರುವ ಬಹುತೇಕರು ಶೆಡ್‌ಗಳನ್ನು ನಿರ್ಮಿಸಿ ಬೇರೆಯವರಿಗೆ ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಸಣ್ಣ ಕೈಗಾರಿಕಾ ಘಟಕಗಳನ್ನು ನಡೆಸುವವರಿಗೆ ಬಾಡಿಗೆ ನೀಡುವುದು ಸಮಸ್ಯೆ ಆಗಿದೆ. ಕೈಗಾರಿಕಾ ಉದ್ದೇಶಕ್ಕೆ ಭೂಮಿ ಖರೀದಿಸಿ ಬೆಲೆ ಹೆಚ್ಚಾದ ಬಳಿಕ
ಬೇರೆಯವರಿಗೆ ಮಾರಾಟ ಮಾಡಲಾ ಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಹೊರತುಪಡಿಸಿ ಮನೆ ಹಾಗೂ ಇತರೆ ಖಾಸಗಿ ಕಟ್ಟಡಗಳನ್ನು ಕಾಣಬಹುದು’ ಎನ್ನುತ್ತಾರೆ ಹಾಸನದ ಉದ್ಯಮಿ ಮಂಜು.

ಅರಸೀಕೆರೆ ತಾಲ್ಲೂಕಿನಲ್ಲಿ ಮೂಲಸೌಕರ್ಯ, ಕಾರ್ಮಿಕರ ಕೊರತೆ, ಮಾರುಕಟ್ಟೆ ಸಮಸ್ಯೆ ಹಾಗೂ ನಷ್ಟದಿಂದಾಗಿ ಕೆಲ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ನಗರ ಹೊರ ವಲಯದ ಮೈಲನಹಳ್ಳಿ ಗ್ರಾಮ ಸಮೀಪ ನೂತನ ಕೈಗಾರಿಕಾ ವಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

ತೆಂಗು ನಾರು ಉತ್ಪಾದನಾ ಘಟಕದ ಒಂದು ಭಾಗದಲ್ಲಿ ಪ್ರಸ್ತುತ ತೆಂಗಿನ ಮ್ಯಾಟ್ ಉತ್ಪಾದನೆ ಕಾರ್ಯ
ನಡೆಯುತ್ತಿದ್ದು, ಉಳಿದ ಭಾಗದಲ್ಲಿ ಕೆಲಸ ನಡೆಯುತ್ತಿಲ್ಲ. ಹೊಸದಾಗಿ ತೆಂಗಿನ ನಾರು ಹಾಗೂ ಮ್ಯಾಟ್
ಉತ್ಪಾದನೆಗೆ ನೂತನ ಯಂತ್ರ ಅಳವಡಿಸಲಾಗಿದೆ.

‘ಕೈಗಾರಿಕಾ ವಲಯ ಪ್ರದೇಶಕ್ಕೆ ಸುಮಾರು 160 ಎಕರೆ ಜಮೀನನ್ನು ರೈತರು ಬಿಟ್ಟು ಕೊಟ್ಟಿದ್ದಾರೆ.
ಕೈಗಾರಿಕೆಗಳು ಸ್ಥಾಪನೆಯಾದರೆ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ’ ಎಂದು ಮೈಲನಹಳ್ಳಿ
ಗ್ರಾಮದ ಗುರುಮೂರ್ತಿ ಹೇಳಿದರು.
ಅರಕಲಗೂಡು ತಾಲ್ಲೂಕು ಕೈಗಾರಿಕಾ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ಎ.ಮಂಜು ಸಚಿವರಾಗಿದ್ದ
ಅವಧಿಯಲ್ಲಿ ₹ 48 ಕೋಟಿ ವೆಚ್ಚದಲ್ಲಿ ಪಶು ಆಹಾರ ಉತ್ಪಾದನಾ ಘಟಕ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು.
ಮೊಕಳಿ ಗ್ರಾಮದ ಬಳಿ 20 ಎಕರೆ ಪ್ರದೇಶದಲ್ಲಿ ಘಟಕದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಘಟಕ
ಪ್ರಾರಂಭವಾದರೆ ನಿರುದ್ಯೋಗ ಸಮಸ್ಯೆ ನೀಗಲಿದೆ. ಸ್ಥಳೀಯವಾಗಿ ಅಪಾರ ಪ್ರಮಾಣದಲ್ಲಿ ಬೆಳೆಯುತ್ತಿರುವ
ಮುಸುಕಿನ ಜೋಳಕ್ಕೆ ಉತ್ತಮ ಬೆಲೆ ದೊರಕಿ ರೈತರು ಆರ್ಥಿಕವಾಗಿ ಚೇತರಿಕೆ ಕಾಣಲಿದ್ದಾರೆ ಎಂದು
ನಿರೀಕ್ಷಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಚನ್ನರಾಯಪಟ್ಟಣದಲ್ಲಿ ಕೈಗಾರಿಕೆ ಸ್ಥಾಪನೆಗೆ ವಿಫುಲ ಅವಕಾಶ ಇದೆ. 80ರ ದಶಕದಲ್ಲಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸ ಲಾಯಿತು. ಈಚೆಗೆ ಕಾರ್ಖಾನೆಯಲ್ಲಿ ಆಧುನೀಕರಣ ಕೈಗೊಂಡಿದ್ದು ಕಬ್ಬು ಅರೆಯುವಿಕೆ ಪ್ರಮಾಣ ಹೆಚ್ಚಾಗಿದೆ.

ತೆಂಗು ಈ ಭಾಗದ ಪ್ರಮುಖ ಬೆಳೆ ಆಗಿರುವುದರಿಂದ ತೆಂಗು ಉತ್ಪನ್ನ ತಯಾರಿಕೆಗೆ ಸಂಬಂಧಿಸಿದಂತೆ
ಕೈಗಾರಿಕೆ ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ.

ಬಾಗೂರು ಹೋಬಳಿಯ ನವಿಲೆ ತಿಮ್ಲಾಪುರ ಗ್ರಾಮದಲ್ಲಿ ತೆಂಗು ನಾರು ಉತ್ಪಾದಕ ಘಟಕ ಆರಂಭಿಸಿರುವುದು ತೆಂಗು ಬೆಳೆಗಾರರಿಗೆ ವರದಾನವಾಗಿದೆ. ₹ 63 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರಗಳ ಅಳವಡಿಕೆಯಿಂದ ನಿತ್ಯ 2 ಟನ್ ತೆಂಗಿನ ಸಿಪ್ಪೆ ಸಂಸ್ಕರಿಸಿ ನಾರು ತೆಗೆಯಲಾಗುತ್ತಿದ್ದು, ರಾಜ್ಯದ 35 ನಾರು ಘಟಕಗಳಿಗೆ ಹುರಿ ಮತ್ತು ಮ್ಯಾಟ್ ತಯಾರಿಸಲು ಕಳುಹಿಸಲಾಗುತ್ತಿದೆ. ಒಂದು ಸಾವಿರ ತೆಂಗಿನ ಸಿಪ್ಪೆಗೆ ₹ 1,200 ದರ ನೀಡಲಾಗುತ್ತಿದೆ. ಘಟಕದಲ್ಲಿ 10 ದಿನಗೂಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಕಲೇಶಪುರದಲ್ಲಿ ಕೈಗಾರಿಕಾ ವಲಯದಲ್ಲಿ ಕಾಂಕ್ರೀಟ್ ರಸ್ತೆಗಳು, ವಿದ್ಯುತ್‌ ಸಂಪರ್ಕ ಸೇರಿದಂತೆ ಎಲ್ಲಾ
ಸೌಲಭ್ಯಗಳು ಇವೆ. ಸ್ಫೂರ್ತಿ ಇರಿಗೇಷನ್‌ ಹೊರತುಪಡಿಸಿದರೆ ಯಾವುದೇ ಕೈಗಾರಿಕೆಗಳು ಇಲ್ಲ.

‘ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ ವನ್ನು
ಬೆಂಗಳೂರಿನಲ್ಲಿ ಆಯೋಜಿಸಿದ್ದು, ಜಿಲ್ಲೆಯ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಬಂಡವಾಳ ಹೂಡಿಕೆದಾರರು ಭಾಗವಹಿಸುತ್ತಿದ್ದಾರೆ. ಜಿಲ್ಲೆಗೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯವಾದ ಮೂಲ ಸೌಕರ್ಯ ಮತ್ತು ಭೂಮಿ ಒದಗಿಸಬೇಕು. ವಿದೇಶದ ದೊಡ್ಡ ಕಂಪನಿಗೆ 500 ಎಕರೆ ಭೂಮಿ ಬೇಕೆಂದರೆ ನಮ್ಮಲ್ಲಿ ಲಭ್ಯವಿಲ್ಲ. ಅದಕ್ಕಾಗಿ ಹೊಸದಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಿದೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಉಪಾಧ್ಯಕ್ಷ ಕಿರಣ್‌ ತಿಳಿಸಿದರು.

‘ಹಾಸನ– ಬೆಂಗಳೂರು ನಡುವೆ ಹೈ ಸ್ಪೀಡ್‌ ರೈಲು ಅಗತ್ಯ. ಆ ರೈಲು ಯಶವಂತಪುರಕ್ಕೆ ಕೊನೆಗೊಳ್ಳದೆ
ನಗರಕ್ಕೆ ಸಂಪರ್ಕ ಕಲ್ಪಿಸುವಂತಾಗ ಬೇಕು. ಹಾಸನಕ್ಕೆ ಬೃಹತ್‌ ಕಂಪನಿಗಳು ಬಂದರೆ ಉದ್ಯೋಗವೂ ಸೃಷ್ಟಿಯಾಗ ಲಿದೆ. ಜಿಲ್ಲೆಯ ಆರ್ಥಿಕಾಭಿವೃದ್ಧಿಗೂ ಸಹಕಾರಿ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.‌

ಪ್ರಜಾವಾಣಿ ತಂಡ: ಕೆ.ಎಸ್.ಸುನಿಲ್, ಜೆ.ಎಸ್‌.ಮಹೇಶ್‌, ರಂಗನಾಥ್, ಜಿ.ಚಂದ್ರಶೇಖರ್ ಸಿದ್ದರಾಜು, ಜಾನಕೆರೆ ಪರಮೇಶ್, ಪ್ರದೀಪ್

ಸಾರಾಂಶ

ಹಾಸನ: ಕೈಗಾರಿಕೆಗಳ ಸ್ಥಾಪನೆಗೆ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಇದ್ದರೂ ಕೈಗಾರಿಕೋದ್ಯಮಿ ಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕೈಗಾರಿಕಾ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.