ADVERTISEMENT

ಹಿಂದೂ ಯುವಕರ ಮೇಲೆ ಹಲ್ಲೆ: ಪೊಲೀಸ್ ಠಾಣೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 5:10 IST
Last Updated 18 ಜನವರಿ 2022, 5:10 IST
ನರಗುಂದದಲ್ಲಿ ಹಿಂದೂ ಯುವಕರ ಮೇಲೆ ಇನ್ನೊಂದು ಕೋಮಿನವರು ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಿಶ್ವ ಹಿಂದು ಪರಿಷದ್‌, ಭಜರಂಗ ದಳದ ಕಾರ್ಯಕರ್ತರು, ಹಿಂದೂ ಸಮುದಾಯದ ಮುಖಂಡರು ಸೋಮವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ನರಗುಂದದಲ್ಲಿ ಹಿಂದೂ ಯುವಕರ ಮೇಲೆ ಇನ್ನೊಂದು ಕೋಮಿನವರು ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಿಶ್ವ ಹಿಂದು ಪರಿಷದ್‌, ಭಜರಂಗ ದಳದ ಕಾರ್ಯಕರ್ತರು, ಹಿಂದೂ ಸಮುದಾಯದ ಮುಖಂಡರು ಸೋಮವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ನರಗುಂದ: ಹಳೆ ವೈಷಮ್ಯದ ಕಾರಣದಿಂದ ಕಳೆದ ಕೆಲವು ತಿಂಗಳಿಂದ ಎರಡು ಕೋಮಿನ ಯುವಕರ ನಡುವೆ ಗಲಾಟೆಯಾಗಿದ್ದು, ಹಿಂದೂ ಯುವಕರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಿಶ್ವ ಹಿಂದು ಪರಿಷದ್‌, ಭಜರಂಗ ದಳದ ಕಾರ್ಯಕರ್ತರು, ಹಿಂದೂ ಸಮುದಾಯದ ಮುಖಂಡರು ಸೋಮವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ದಂಡಾಪೂರ ಓಣಿಯ ಉಡಚಾಪರಮೇಶ್ವರಿ ದೇವಸ್ಥಾನದದಿಂದ ಹೊರಟ ಪ್ರತಿಭಟನಾ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಮುಖಂಡ ಸಂಗಪ್ಪ ಪೂಜಾರ, ‘ಜ.14ರ ರಾತ್ರಿ ಪಟ್ಟಣದ ಲೋದಿ ಗಲ್ಲಿಯಲ್ಲಿ ಹಿಂದೂ ಯುವಕನ ಮೇಲೆ ಇನ್ನೊಂದು ಕೋಮಿನವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿಲ್ಲ. ಹಲ್ಲೆ ನಡೆಸಿದ ಗುಂಪಿನ ಪರ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ಶಂಕರ ರಾಗಿ ಮಾತನಾಡಿ, ‘ಜ.14ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾವು ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತವೆ. ಆದ್ದರಿಂದ ತಾವು ಪ್ರತಿಭಟನೆ ಕೈ ಬಿಡಿ’ ಎಂದು ಮನವಿ ಮಾಡಿದರು.

‘ಮುಂದೆ ಈ ರೀತಿ ಘಟನೆಗಳು ನಡೆಯದ ಹಾಗೆ ಮುನ್ನೆಚ್ಚರಿಕೆ ವಹಿಸಬೇಕು. ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಎಲ್ಲರನ್ನೂ ಬಂಧಿಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಸಂಘಟನೆಗಳ ಸದಸ್ಯರು ಎಚ್ಚರಿಸಿ ಪ್ರತಿಭಟನೆ ಕೈಬಿಟ್ಟರು.

ಸಿಪಿಐ ನಂದಿಕೇಶ್ವರ ಕುಂಬಾರ ಮಾತನಾಡಿ, ‘ಇಲ್ಲಿಯವರೆಗೆ ಪಟ್ಟಣದಲ್ಲಿ ಘಟನೆಗೆ ಕಾರಣರಾದ ಎರಡು ಗುಂಪಿನ ಯುವಕರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದರು.

ಮುಖಂಡರಾದ ಸಂಗಪ್ಪ ಪೂಜಾರ, ಶಿವಾನಂದ ಮುತವಾಡ, ಬಸು ಪಾಟೀಲ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಸುನೀಲ ಕುಷ್ಟಗಿ, ಪವಾಡಪ್ಪ ವಡ್ಡಗೇರಿ, ಚಂದ್ರಗೌಡ ಪಾಟೀಲ, ನಿಂಗಪ್ಪ ನಾಗನೂರ, ಸಂಗಣ್ಣ ಕಳಸದ, ಮಹಾಂತೇಶ ಹಂಪಣ್ಣವರ ಭಾಗವಹಿಸಿದ್ದರು.

ಸಾರಾಂಶ

ಹಿಂದು ಯುವಕರ ಮೇಲೆ ಹಲ್ಲೆ : ಪ್ರತಿಭಟನೆ : ಪೊಲೀಸ್ ಠಾಣೆಗೆ ಮುತ್ತಿಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.