ADVERTISEMENT

ಅವೈಜ್ಞಾನಿಕ ಹಂಪ್ಸ್; ಅಪಘಾತದ ಭೀತಿ

ಕಡಿದಾದ ರಸ್ತೆ ಉಬ್ಬುಗಳಿಂದ ಅಪರಿಚಿತರಿಗೆ ಕಂಠಕ; ತೆರವಿಗೆ ವಾಹನ ಸವಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:02 IST
Last Updated 11 ಅಕ್ಟೋಬರ್ 2021, 2:02 IST
ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಗ್ರಾಮದ ಮುಖ್ಯ ರಸ್ತೆಗೆ ಹಾಕಿರುವ ಸ್ಪೀಡ್ ಬ್ರೇಕರ್‌
ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಗ್ರಾಮದ ಮುಖ್ಯ ರಸ್ತೆಗೆ ಹಾಕಿರುವ ಸ್ಪೀಡ್ ಬ್ರೇಕರ್‌   

ಗದಗ: ಅವಳಿ ನಗರಗಳೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಗ್ರಾಮ, ಪಟ್ಟಣ, ನಗರಗಳಲ್ಲಿ ಅವೈಜ್ಞಾನಿಕವಾಗಿ ಮತ್ತು ಅನವಶ್ಯಕವಾಗಿ ರಸ್ತೆ ಉಬ್ಬು ಹಾಗೂ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಳವಡಿಸುವ ರಸ್ತೆ ಉಬ್ಬುಗಳಿಂದ ನಿಯಂತ್ರಣಕ್ಕಿಂತ ಅಪಘಾತ ಪ್ರಕರಣಗಳೇ ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಗ್ರಾಮೀಣ ಭಾಗದ ರಸ್ತೆಗಳಲ್ಲಿ ಲೋಕೋಪಯೋಗಿ ಇಲಾಖೆಯವರು ಅಥವಾ ಗುತ್ತಿಗೆದಾರರು ನಿರ್ಮಿಸಿರುವ ರಸ್ತೆ ಉಬ್ಬುಗಳು ಮತ್ತು ವೇಗ ನಿಯಂತ್ರಕಗಳು ವೈಜ್ಞಾನಿಕವಾಗಿವೆ. ಆದರೆ, ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಜನರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮನ ಒಲಿಸಿ ಸ್ವ ಇಚ್ಛೆಯಿಂದ ತಮ್ಮ ಮನೆಯ ಬಳಿ ನಿರ್ಮಿಸಿಕೊಂಡಿರುವ ರಸ್ತೆ ಉಬ್ಬುಗಳು ತುಂಬಾ ಕಡಿದಾಗಿದ್ದು, ವೇಗವಾಗಿ ಸಂಚರಿಸುವ ವಾಹನಗಳಿಗೆ ಅಪಾಯ ತಂದೊಡ್ಡುತ್ತಿವೆ.

‘ಸರ್ಕಾರದ ಆದೇಶದಂತೆ ರಸ್ತೆಯಲ್ಲಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆಗೆಸಲು ಕ್ರಮವಹಿಸಲಾಗಿದೆ. ಕೆಲವು ರಸ್ತೆಗಳಲ್ಲಿ ಸಾರ್ವಜನಿಕರು ದಪ್ಪ ದಪ್ಪ ಕಲ್ಲುಗಳನ್ನಿಟ್ಟು, ಅದರ ಮೇಲೆ ಡಾಂಬರು ಹಾಕಿಸಿ ಕಡಿದಾದ ಹಂಪ್ಸ್‌ ನಿರ್ಮಿಸಿಕೊಂಡಿರುತ್ತಾರೆ. ಈ ಬಗೆಯ ಅವೈಜ್ಞಾನಿಕ ಹಂಪ್ಸ್‌ ತೆಗೆಸಲು ಹೋದಾಗ ಸ್ಥಳೀಯರು ಅಧಿಕಾರಿಗಳ ಜತೆಗೆ ಮಾತಿನ ಚಕಮಕಿ ನಡೆಸುತ್ತಾರೆ. ಅಪಘಾತಗಳು ಸಂಭವಿಸಿದರೆ ಹೊಣೆ ಯಾರು ಎಂದು ಪ್ರಶ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ಮನವೊಲಿಸಿ ಅವೈಜ್ಞಾನಿಕ ಹಂಪ್ಸ್‌ ತೆರವು ಮಾಡಿ ಅಲ್ಲಿ ರಬ್ಬರ್‌ ಹಂಪ್ಸ್‌ ಅಳವಡಿಸುತ್ತಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ದೇವರಾಜ್‌ ತಿಳಿಸಿದರು.

ADVERTISEMENT

‘ರಸ್ತೆ ಪ್ರಯಾಣ ಸುಗಮವಾಗಿರಲು ನೆರವಾಗುವಂತೆ ರಸ್ತೆ ಸುರಕ್ಷತಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿರುವ ಅಪಘಾತ ವಲಯಗಳ ಪಟ್ಟಿ, ಎಲ್ಲೆಲ್ಲೆ ರಸ್ತೆ ಉಬ್ಬುಗಳನ್ನು ಅಳವಡಿಸಬೇಕು, ತಿರುವು ರಸ್ತೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ ಕುರಿತು ವರದಿ ನೀಡುವಂತೆ ಅವರು ಕೋರಿದ್ದಾರೆ. ಆ ಪ್ರಕಾರ ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.

ಫೈಬರ್ ಸ್ಪೀಡ್‌ ಬ್ರೇಕರ್‌ಗಳಿಗೆ ಕಳ್ಳರ ಕಾಟ

ಮುಳಗುಂದ: ರಸ್ತೆ ಅಪಘಾತ ತಡೆಗಟ್ಟುವ ಉದ್ದೇಶದಿಂದ ಆಯ್ದ ಜಾಗಗಳಲ್ಲಿ ಸ್ಪೀಡ್‌ ಬ್ರೇಕರ್‌ಗಳನ್ನು ಅಳವಡಿಸಲಾಗಿದೆ.  ಆದರೆ, ಇತ್ತೀಚಿನ ದಿನಗಳಲ್ಲಿ ಹೊಸ ರಸ್ತೆಗಳಿಗೆ ಅಳವಡಿಸಿರುವ ಫೈಬರ್ ಸ್ಪೀಡ್‌ ಬ್ರೇಕರ್‌ಗಳಿಗೆ ಕಳ್ಳರ ಕಾಟ ಹೆಚ್ಚಾಗಿದೆ.

ಗದಗ ತಾಲ್ಲೂಕಿನ ಚಿಂಚಲಿ– ಕೋಳಿವಾಡ ಮಧ್ಯದ ಇರುವ ಅಪಾಯಕಾರಿ ತಿರುವಿನಲ್ಲಿ ಅಳವಡಿಸಿದ್ದ ಫೈಬರ್‌ ಸ್ಪೀಡ್‌ ಬ್ರೇಕರ್‌, ಸೂಚನಾ ಫಲಕ ಮತ್ತು ರೋಡ್‌ ಲೈಟ್ ರಿಫ್ಲೆಕ್ಟರ್‌ಗಳನ್ನು ಸಹ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ದೂರು ಕೂಡ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಇನ್ನು, ಚಿಂಚಲಿ ಮೂಲಕ ಹಾಯ್ದು ಹೋಗುವ ಜಿಲ್ಲಾ ಮುಖ್ಯ ಸಿಸಿ ರಸ್ತೆಯಲ್ಲಿ ನೂರು ಮೀಟರ್ ಅಂತರದಲ್ಲಿ ಅವೈಜ್ಞಾನಿಕವಾಗಿ ಸ್ಪೀಡ್‌ ಬ್ರೇಕರ್‌ಗಳನ್ನು ಅಳವಡಿಸಿರುವುದರಿಂದ ವಾಹನ ಸವಾರರಿಗೆ ಕಿರಿಕಿರಿ ತಂದೊಡ್ಡಿದೆ.

ಮುಳಗುಂದ– ಅಬ್ಬಿಕೆರೆ ಬೈಪಾಸ್ ಸಿಸಿ ರಸ್ತೆಯಲ್ಲಿ ಶಾಲೆ ಹತ್ತಿರ ಕಾಂಕ್ರಿಟ್‌ನಿಂದ ಹಾಕಿದ ಸ್ಪೀಡ್‌ ಬ್ರೇಕರ್ ಅವೈಜ್ಞಾನಿಕವಾಗಿದ್ದು, ಹೊಸ ರಸ್ತೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಪಾಯಕಾರಿ ಸ್ಥಳದಲ್ಲಿ ಸ್ಪೀಡ್‌ ಬ್ರೇಕರ್, ಸೂಚನಾ ಫಲಕ ಅಳವಡಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಎಂಜಿನಿಯರ್‌ಗಳು ಸಮಸ್ಯೆ ನಿವಾರಿಸಲು ಸೂಕ್ತ ಕ್ರಮ ವಹಿಸಬೇಕು’ ಎಂದು ಸ್ಥಳೀಯರಾದ ಎಂ.ಎಸ್.ಕಣವಿ ಆಗ್ರಹಿಸಿದರು.

ಅಪರಿಚಿತರಿಗೆ ಕಂಠಕವಾಗಿರುವ ರಸ್ತೆ ಉಬ್ಬುಗಳು

ಗಜೇಂದ್ರಗಡ: ತಾಲ್ಲೂಕಿನಲ್ಲಿ ರಸ್ತೆ ವಿಭಜಿಸುವ ಸ್ಥಳಗಳಲ್ಲಿ, ಗ್ರಾಮಗಳ ಪ್ರವೇಶ, ತಿರುವುಗಳು, ಶಾಲೆಗಳು, ಜನಸಂದಣಿ  ಸ್ಥಳಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ.

ಕೆಲವು ಕಡೆಗಳಲ್ಲಿ ರಸ್ತೆ ಉಬ್ಬುಗಳು ಕಡಿದಾಗಿರುವುದರಿಂದ ಅಪರಿಚಿತ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಬೈಕ್ ಸವಾರರ ಬೆನ್ನು ಮೂಳೆಗೆ ತೊಂದರೆಯಾಗುತ್ತಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ಪೈಪ್ ಲೈನ್ ಅಳವಡಿಸಲು ರಸ್ತೆ ಅಗೆದು ಮಣ್ಣು ಹಾಕಿರುವ ಸ್ಥಳಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಇವುಗಳು ಸಹ ವಾಹನ ಸವಾರರು ಕಂಠಕವಾಗಿವೆ.

ಪಟ್ಟಣದ ಒಳ ರಸ್ತೆಗಳಲ್ಲಿ ರಸ್ತೆಗುಂಟ ರಸ್ತೆ ಉಬ್ಬುಗಳಿದ್ದು, ಇವುಗಳಿಂದ ವಾಹನಸವಾರರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಹಳ್ಳಿಗಳಲ್ಲಿಯೂ ಇದಕ್ಕೆ ಹೊರತಾಗಿಲ್ಲ. ಒಂದೆಡೆ ಹಾಳಾದ ರಸ್ತೆಗಳಲ್ಲಿ ರಸ್ತೆಗುಂಟ ಇರುವ ರಸ್ತೆ ಉಬ್ಬುಗಳನ್ನು ದಾಟಿಕೊಂಡು ಪ್ರಯಾಣ ಮಾಡುವುದು ವಾಹನ ಸವಾರರಿಗೆ ದುಸ್ತರವಾಗಿದೆ.

ರಸ್ತೆ ಉಬ್ಬುಗಳಿಂದ ಅಪಘಾತಗಳೇ ಹೆಚ್ಚು!

ಮುಂಡರಗಿ: ಪಟ್ಟಣದ ಅನ್ನದಾನೀಶ್ವರ ಪಿಯು ಕಾಲೇಜಿನಿಂದ ಭಜಂತ್ರಿ ಓಣಿಯವರೆಗಿನ ಸುಮಾರು 400 ಮೀಟರ್ ಉದ್ದದ ರಸ್ತೆಯಲ್ಲಿ ಅಂದಾಜು 50 ಮೀಟರ್‌ಗೆ ಒಂದರಂತೆ ಆರೆಂಟು ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಇಲ್ಲಿ ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುತ್ತಾ ಸಂಚರಿಸಬೇಕಾಗಿದೆ. ಅದೇರೀತಿ ಪಟ್ಟಣದ ಬಹುತೇಕ ಭಾಗಗಳಲ್ಲಿ ಅನವಶ್ಯಕವಾಗಿ ರಸ್ತೆ ಉಬ್ಬುಗಳನ್ನು ಹಾಗೂ ವೇಗ ನಿಯಂತ್ರಕಗಳನ್ನು ನಿರ್ಮಿಸಲಾಗಿದೆ.

ಅಪಘಾತಕ್ಕೆ ಆಹ್ವಾನ ನೀಡುವ ರಸ್ತೆ

ಡಂಬಳ: ಗದಗ– ಮುಂಡರಗಿ ರಾಜ್ಯ ಹೆದ್ದಾರಿಯ ಡಂಬಳ, ಡೋಣಿ ಸರ್ಕಲ್, ಮೇವುಂಡಿ ಗ್ರಾಮದ ಬಳಿ ಹಾಗೂ ಇತರೆ ಕಡೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳ ಅಳವಡಿಕೆ, ಸೂಚನಾ ಫಲಕ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.

ಡೋಣಿ ಸರ್ಕಲ್ ಹಾಗೂ ಡಂಬಳದಿಂದ ಪೇಠಾಲೂರ ಗ್ರಾಮಕ್ಕೆ ಹೋಗುವ ರಸ್ತೆ ಮತ್ತು ಡಂಬಳ ಮತ್ತು ಮೇವುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕೆಲವೊಂದು ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸುವ ಅವಶ್ಯಕತೆ ಇದ್ದರೆ, ಇನ್ನು ಕೆಲವು ಕಡೆಗಳಲ್ಲಿ ಸಾರ್ವಜನಿಕರ ಒತ್ತಡದಿಂದ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ.

ಹೆದ್ದಾರಿಗಳಲ್ಲಿ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುತ್ತವೆ. ಗದಗ– ಮುಂಡರಗಿ ರಾಜ್ಯ ಹೆದ್ದಾರಿಯ ರಸ್ತೆಯ ಎರಡೂ ಬದಿಯಲ್ಲಿ ಜಾಲಿ ಕಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಅಪಘಾತ ಸಂಭವಿಸುತ್ತಿವೆ. ರೈತರು ಜಮೀನುಗಳಿಗೆ ತೆರಳುವ ಸಂದರ್ಭ ರಸ್ತೆ ದಾಟುವ ವೇಳೆ ಅಪಘಾತಕ್ಕೆ ಈಡಾಗಿದ್ದಿದೆ ಎನ್ನುತ್ತಾರೆ ಮೇವುಂಡಿ ಗ್ರಾಮದ ಸೋಮಣ್ಣ ಹೈತಾಪೂರ.

50 ಮೀಟರ್‌ಗೊಂದು ರಸ್ತೆಉಬ್ಬು

ಲಕ್ಷ್ಮೇಶ್ವರ: ಲಕ್ಷ್ಮೇಶ್ವರದಿಂದ ಕೇವಲ ಎರಡು ಕಿ.ಮೀ ದೂರದ ಅಡರಕಟ್ಟಿ ತಲುಪುವವರೆಗೆ ಅಂದಾಜು 8-10 ರಸ್ತೆ ಉಬ್ಬುಗಳನ್ನು ಹಾಕಿರುವುದು ವಾಹನ ಸವಾರರಿಗೆ ದೊಡ್ಡ ಕಿರಿಕಿರಿ ಉಂಟು ಮಾಡುತ್ತಿದೆ. ಅದೂ ಅಲ್ಲದೆ ಅವೈಜ್ಞಾನಿಕ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಪದೇ ಪದೇ ಅಪಘಾತಗಳು ಸಂಭವಿಸುತ್ತವೆ ಎಂಬ ಕಾರಣಕ್ಕೆ ಇಲ್ಲಿನ ಮಹಾಕವಿ ಪಂಪ ವರ್ತುಲದಿಂದ ಲಕ್ಷ್ಮೀ ನಗರದವರೆಗೆ ಕೇವಲ ಐದು ನೂರು ಮೀಟರ್ ಅಂತರದಲ್ಲಿ ಆರು ಕಡೆ ಲೋಕೋಪಯೋಗಿ ಇಲಾಖೆ ರಸ್ತೆ ಉಬ್ಬು ಹಾಕಿದೆ. ಹೆಜ್ಜೆ ಹೆಜ್ಜೆಗೆ ಬರುವ ಅಡೆತಡೆಗಳನ್ನು ದಾಟುವಾಗ ಚಾಲಕರು ಮತ್ತು ಪ್ರಯಾಣಿಕರ ಬೆನ್ನಿಗೆ ಏಟುಗಳೂ ಬೀಳುತ್ತಿವೆ.

ರಸ್ತೆ ಉಬ್ಬುಗಳು ವೈಜ್ಞಾನಿಕವಾಗಿರಬೇಕು ಹಾಗೂ ಸೂಚನಾ ಫಲಕ ಅಳವಡಿಸಬೇಕು. ರಸ್ತೆ ಬದಿಯಲ್ಲಿನ ಜಾಲಿ ಕಂಟಿಗಳನ್ನು ತೆರವುಗೊಳಿಸಿದರೆ ಅಪಘಾತಗಳನ್ನು ತಪ್ಪಿಸಬಹುದು

ಮಹೇಶ ಗಡಗಿ, ಡಂಬಳ

ರಸ್ತೆ ಉಬ್ಬುಗಳನ್ನು ನಿರ್ಮಿಸುವ ಪೂರ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಆಯಾ ರಸ್ತೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಲಕ್ಷ್ಯ ವಹಿಸುವ ಅಗತ್ಯವಿದೆ

ರಾಜು ಬಿ., ಬೈಕ್ ಸವಾರ, ನರಗುಂದ

-----

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ ಭಜಂತ್ರಿ, ನಾಗರಾಜ ಎಸ್‌.ಹಣಗಿ, ಶ್ರೀಶೈಲ ಎಂ. ಕುಂಬಾರ, ಲಕ್ಷ್ಮಣ ಎಚ್.ದೊಡ್ಡಮನಿ, ಡಾ. ಬಸವರಾಜ ಹಲಕುರ್ಕಿ

ಸಾರಾಂಶ

ಗದಗ: ಅವಳಿ ನಗರಗಳೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಗ್ರಾಮ, ಪಟ್ಟಣ, ನಗರಗಳಲ್ಲಿ ಅವೈಜ್ಞಾನಿಕವಾಗಿ ಮತ್ತು ಅನವಶ್ಯಕವಾಗಿ ರಸ್ತೆ ಉಬ್ಬು ಹಾಗೂ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಳವಡಿಸುವ ರಸ್ತೆ ಉಬ್ಬುಗಳಿಂದ ನಿಯಂತ್ರಣಕ್ಕಿಂತ ಅಪಘಾತ ಪ್ರಕರಣಗಳೇ ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.