ADVERTISEMENT

ಶಾಲೆಗಳಿಗೆ ಸದ್ಯಕ್ಕೆ ರಜೆ ಇಲ್ಲ

ತಜ್ಞರ ಸಲಹಾ ಸಮಿತಿ ಜತೆಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 5:11 IST
Last Updated 18 ಜನವರಿ 2022, 5:11 IST
ಎಂ.ಸುಂದರೇಶ್‌ ಬಾಬು
ಎಂ.ಸುಂದರೇಶ್‌ ಬಾಬು   

ಗದಗ: ‘ತಜ್ಞರ ಅಭಿಪ್ರಾಯ ಆಧರಿಸಿ ಸದ್ಯಕ್ಕೆ ಸೋಂಕು ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಶಾಲೆಗಳಿಗೆ ಮಾತ್ರ ರಜೆ ನೀಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ತಜ್ಞರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು’ ಎಂದು ತಿಳಿಸಿದರು.

ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಶಶಿಧರ ದಿಂಡೂರ ಮಾತನಾಡಿ, ‘ಜಿಲ್ಲೆಯ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಅಷ್ಟಾಗಿ ಇಲ್ಲದಿರುವುದರಿಂದ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ತರಗತಿ ನಡೆಸುವುದೇ ಸೂಕ್ತ. ಈ ವಾರವೂ ಶಾಲೆಗಳನ್ನು ನಡೆಸಲು ಅಡ್ಡಿ ಇಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ್‌ ನುಚ್ಚಿನ ಮಾತನಾಡಿ, ‘ಸೋಂಕು ದೃಢಪಟ್ಟ ಮಕ್ಕಳ ಆರೋಗ್ಯದಲ್ಲಿ ಗಂಭೀರ ಸ್ವರೂಪದ ಪರಿಣಾಮಗಳು ಕಂಡುಬಂದಿಲ್ಲ. ಸರ್ಕಾರ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಬಿ.ಎಂ.ಗೊಜನೂರ ಮಾತನಾಡಿ, ‘ಜಿಲ್ಲೆಯಲ್ಲಿ ಒಂದನೇ ಡೋಸ್ ಲಸಿಕೆಯನ್ನು ಶೇ 100ಕ್ಕೂ ಅಧಿಕ ಜನರಿಗೆ ನೀಡಲಾಗಿದೆ. ಎರಡನೇ ಡೋಸ್‌ನಲ್ಲಿ ಶೇ 89ರಷ್ಟು ಪೂರ್ಣಗೊಳಿಸಲಾಗಿದೆ. 15ರಿಂದ 18 ವರ್ಷದೊಳಗಿನ ಪ್ರೌಢರಿಗೆ ನೀಡುವ ಲಸಿಕಾಕರಣವನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ಮಾತನಾಡಿ, ‘ಶಾಲೆಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚಿಸಲಾಗಿದೆ. ಮಾಸ್ಕ್‌ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸೋಂಕು ದೃಢಪಟ್ಟ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ತರಗತಿಗಳನ್ನು ನಡೆಸುವ ಕುರಿತಂತೆ ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ’ ಎಂದರು.

ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು, ಐಎಂಎ ಪದಾಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.

ಪರಿಸ್ಥಿತಿ ಅವಲೋಕಿಸಿ ನಿರ್ಧಾರ

ಸೋಮವಾರ ನಡೆದ ಸಭೆಯಲ್ಲಿ ತಜ್ಞರ ಸಲಹಾ ಸಮಿತಿಯು ಈ ವಾರ ಶಾಲಾ ತರಗತಿಗಳನ್ನು ಮುಂದುವರಿಸುವಂತೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿತು.

ಶಾಲಾ ಮಕ್ಕಳಲ್ಲಿ ಸೋಂಕಿನ ಪ್ರಕರಣಗಳು ಅಧಿಕವಾಗಿ ಕಂಡುಬಂದಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದು ಎಂದು ನಿರ್ಧರಿಸಲಾಯಿತು. ಅಲ್ಲಿಯವರೆಗೆ, ಶಾಲಾ ಮಕ್ಕಳಲ್ಲಿ ಸೋಂಕು ದೃಢಪಟ್ಟಲ್ಲಿ ಆ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಪರಿಸ್ಥಿತಿಗೆ ಅನುಸಾರವಾಗಿ ರಜೆ ನೀಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸೋಂಕು ದೃಢಪಟ್ಟ ಶಾಲೆಯ ಎಲ್ಲ ಮಕ್ಕಳು ಹಾಗೂ ಶಿಕ್ಷಕರನ್ನು ತಪಾಸಣೆಗೆ ಒಳಪಡಿಸಬೇಕು. ಮಕ್ಕಳಿಗೆ ಶಾಲಾ ತರಗತಿಗಳಿಗೆ ಹಾಜರಾತಿ ಕಡ್ಡಾಯ ಇಲ್ಲ. ಆನ್‌ಲೈನ್ ಮೂಲಕವೂ ಮಕ್ಕಳು ತರಗತಿಗೆ ಹಾಜರಾಗಬಹುದು
ಎಂ.ಸುಂದರೇಶ್‌ಬಾಬು, ಜಿಲ್ಲಾಧಿಕಾರಿ

ತಜ್ಞರ ಸಮಿತಿ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು
ಭರತ್‌ ಎಸ್‌., ಜಿಲ್ಲಾ ಪಂಚಾಯ್ತಿ ಸಿಇಒ

ಸಾರಾಂಶ

ತಜ್ಞರ ಸಮಿತಿ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಭರತ್‌ ಎಸ್‌., ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.