ADVERTISEMENT

ಧಾರವಾಡ: ವಿದ್ಯಾರ್ಥಿ ವೇತನವಿಲ್ಲದೆ ಪರದಾಟ

ಹಣಕಾಸು ಇಲಾಖೆ ವಿಳಂಬ: ಸಚಿವ ಶ್ರೀನಿವಾಸ ಪೂಜಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:23 IST
Last Updated 17 ಜನವರಿ 2022, 16:23 IST

ಧಾರವಾಡ: ಹಿಂದುಳಿದ ವರ್ಗಗಳ ಇಲಾಖೆಯಿಂದ ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುವ ವಿದ್ಯಾರ್ಥಿವೇತನ ಹಾಗೂ ಫೆಲೋಶಿಪ್‌ 2019ರಿಂದ 2021ನೇ ಸಾಲಿನವರೆಗೆ ನೀಡಿಲ್ಲ. ಈಗ ಒಂದು ವರ್ಷಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ, ‘ಕೋವಿಡ್ ಕಾರಣದಿಂದಾಗಿ ಹಣಕಾಸು ಇಲಾಖೆಯು ಹೆಚ್ಚುವರಿ ಹಣ ಹೊರೆಯಿಂದಾಗಿ ವಿದ್ಯಾರ್ಥಿ ವೇತನಕ್ಕೆ ಅನುಮೋದನೆ ನೀಡಿಲ್ಲ’ ಎಂದು ಕಾರಣ ನೀಡಿದ್ದಾರೆ. ಈ ಕರೆಯ ಧ್ವನಿಮುದ್ರಿಕೆ ಎಲ್ಲೆಡೆ ಹರಿದಾಡಿದೆ.

‘ಹಿಂದುಳಿದ ಬಡಕುಟುಂಬದ ವಿದ್ಯಾರ್ಥಿಗಳು ಸರ್ಕಾರದ ನೆರವಿನೊಂದಿಗೆ ತಮ್ಮ ಉನ್ನತ ಶಿಕ್ಷಣ ಬಯಸಿ ಸಂಶೋಧನೆಗೆ ಪ್ರವೇಶ ಪಡೆದಿದ್ದಾರೆ. ಆದರೆ ಕಳೆದ ಎರಡು ವರ್ಷಗಳ ವಿದ್ಯಾರ್ಥಿ ವೇತವನ್ನು ತಡೆ ಹಿಡಿದು, ಈ ವರ್ಷಕ್ಕೆ ಮಾತ್ರ ಅರ್ಜಿ ಕರೆದಿರುವುದು, ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ’ ಎಂದು ಸಂಶೋಧನಾ ವಿದ್ಯಾರ್ಥಿ ಮಹಾಂತೇಶ ಕುಂಬಾರ ಆರೋಪಿಸಿದರು.

ADVERTISEMENT

‘ಸರ್ಕಾರದ ಯೋಜನೆಗಳನ್ನು ನಂಬಿ ತಮ್ಮ ಕನಸನ್ನು ಕಂಡಿರುತ್ತಾರೆ. ಉತ್ತಮ ಸಂಶೋಧನೆ ಮಾಡಬೇಕು ಎಂಬ ಅಭಿಲಾಷೆ ಇಟ್ಟುಕೊಂಡು ವಿಶ್ವವಿದ್ಯಾಲಯಕ್ಕೆ ಬಂದಿರುತ್ತಾರೆ. ಅವರ ಕನಸುಗಳಿಗೆ ತಣ್ಣೀರೆರಚುವ ಕೆಲಸವನ್ನು ರಾಜ್ಯದ ಹಿಂದುಳಿದ ವರ್ಗಗಳ ಸಚಿವಾಲಯ ಮಾಡಿದೆ. ಆರ್ಥಿಕ ಸಹಾಯವಿಲ್ಲದೆ ಬಹಳಷ್ಟು ವಿದ್ಯಾರ್ಥಿಗಳು ಸಂಶೋಧನಾ ಕಾರ್ಯವನ್ನು ಮೊಟಕುಗೊಳಿಸುವ ಸಂಭವ ಹೆಚ್ಚಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರ ಯೋಜನೆಗಳನ್ನು ತರುವ ಮೊದಲು ಅದಕ್ಕೆ ಅನುಗುಣವಾಗಿ ಹಣಕಾಸಿನ ವ್ಯವಸ್ಥೆ ಮಾಡಿರುತ್ತದೆ. ಆದರೆ ಇಂದಿನ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಮಾಸಿಕ ₹10ಸಾವಿರವನ್ನು ಕೊರೊನಾ ನೆಪ ಹೇಳಿ ಬೇರೆ ಇಲಾಖೆಗೆ ವೆಚ್ಚ ಮಾಡಿರುವುದು ವಿದ್ಯಾರ್ಥಿಗಳಿಗೆ ಮಾಡಿರುವ ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಶ್ರೀನಿವಾಸ ಪೂಜಾರಿ ಅವರು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದು ಭರವಸೆಯಂತೂ ಅಲ್ಲ. ಹೀಗಾದರೆ ಬಡ ಸಂಶೋಧನಾ ವಿದ್ಯಾರ್ಥಿಗಳ ಪಾಡು ಹೇಳತೀರದು’ ಎಂದು ತಮ್ಮ ಅಳಲು ತೋಡಿಕೊಂಡರು.

ಸಾರಾಂಶ

ಹಿಂದುಳಿದ ವರ್ಗಗಳ ಇಲಾಖೆಯಿಂದ ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುವ ವಿದ್ಯಾರ್ಥಿವೇತನ ಹಾಗೂ ಫೆಲೋಶಿಪ್‌ 2019ರಿಂದ 2021ನೇ ಸಾಲಿನವರೆಗೆ ನೀಡಿಲ್ಲ. ಈಗ ಒಂದು ವರ್ಷಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.