ADVERTISEMENT

ಹುಬ್ಬಳ್ಳಿ–ಅಂಕೋಲಾ ಹೊಸ ಮಾರ್ಗದ ಮಾಹಿತಿ ನೀಡಿ: ಜೋಶಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 16:09 IST
Last Updated 16 ಅಕ್ಟೋಬರ್ 2021, 16:09 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಸಂಸದರು ಮತ್ತು ರೈಲ್ವೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಸಂಸದರು ಮತ್ತು ರೈಲ್ವೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು   

ಹುಬ್ಬಳ್ಳಿ: ‘ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ–ಅಂಕೋಲಾ ಹೊಸ ಬ್ರಾಡ್‌ಗೇಜ್ ಮಾರ್ಗದ ಅನುಷ್ಠಾನಕ್ಕೆ ಇರುವ ತೊಂದರೆಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಲು ನೋಡಲ್‌ ಅಧಿಕಾರಿ ನೇಮಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.

ನೈರುತ್ಯ ರೈಲ್ವೆಯ ಮುಖ್ಯ ಕಚೇರಿ ರೈಲುಸೌಧದಲ್ಲಿ ಶನಿವಾರ ನಡೆದ ಈ ಭಾಗದ ಸಂಸದರು ಮತ್ತು ರೈಲ್ವೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು ‘ಅಂಕೋಲಾ ಮಾರ್ಗದ ಅನುಷ್ಠಾನಕ್ಕಿರುವ ತಾಂತ್ರಿಕ ತೊಡಕುಗಳು ಮತ್ತು ನ್ಯಾಯಾಲಯದಲ್ಲಿರುವ ವಿಷಯಗಳ ತ್ವರಿತ ಪರಿಹಾರಕ್ಕೆ ನೈರುತ್ಯ ರೈಲ್ವೆ ಹಿರಿಯ ಅಧಿಕಾರಿ ನೇಮಿಸಬೇಕು. ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಿ ತ್ವರಿತವಾಗಿ ಪ್ರಕರಣ ಪೂರ್ಣಗೊಳಿಸಲು ನೆರವಾಗಬೇಕು’ ಎಂದರು.

‘ಹುಬ್ಬಳ್ಳಿ–ಚಿಕ್ಕಜಾಜೂರ ಜೋಡಿ ಮಾರ್ಗ, ಹೊಸಪೇಟೆ–ತಿನೈಘಾಟ್‌ ಜೋಡಿ ಮಾರ್ಗ, ತುಮಕೂರು, ಚಿತ್ರದುರ್ಗ–ದಾವಣಗೆರೆ ಹೊಸ ರೈಲು ಮಾರ್ಗ, ಹೊಸಪೇಟೆ–ವಾಸ್ಕೊ ಮಾರ್ಗದ ವಿದ್ಯುದ್ದೀಕರಣ, ಕುಡಚಿ–ಬಾಗಲಕೋಟೆ ಸೇರಿದಂತೆ ಹಲವು ಯೋಜನೆಗಳ ಪ್ರಗತಿ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಿಗದಿತ ಯೋಜನೆಗಳನ್ನು 2023ರೊಳಗೆ ಪೂರ್ಣಗೊಳಿಸಬೇಕು’ ಎಂದೂ ಸೂಚಿಸಿದರು.

ADVERTISEMENT

‘ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯವಿರುವಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಿಸಲು ಜನರು ಹಾಗೂ ರೈತರಿಂದ ಬಂದ ಮನವಿಗಳನ್ನು ಆದಷ್ಟು ಬೇಗನೆ ಇತ್ಯರ್ಥ ಪಡಿಸಬೇಕು’ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅವರಿಗೆ ತಿಳಿಸಿದರು.

‘ಧಾರವಾಡ–ಬೆಳಗಾವಿ ಹೊಸ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲು ರಾಜ್ಯ ಸರ್ಕಾರದಿಂದ ಆದೇಶ ಬರಬೇಕಿದೆ. ಹಲವು ಯೋಜನೆಗಳಿಗೆ ಭೂಸ್ವಾಧೀನ ಆಗಬೇಕಿದ್ದು, ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ಆಯೋಜಿಸಬೇಕು. ಕೋವಿಡ್‌ ಕಾರಣದಿಂದಾಗಿ ರದ್ದುಪಡಿಸಲಾಗಿದ್ದ ಹುಬ್ಬಳ್ಳಿ–ಮಂಗಳೂರು, ಹುಬ್ಬಳ್ಳಿ–ಶಿರಡಿ ಮತ್ತು ಯಶವಂತಪುರ–ಹುಬ್ಬಳ್ಳಿ–ಪಂಢರಪುರ ರೈಲುಗಳನ್ನು ಪುನರಾರಂಭಿಸಬೇಕು’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ವಿನಯ್‌ ತೆಂಡೂಲ್ಕರ್‌, ಸಂಸದರಾದ ಮಂಗಲಾ ಅಂಗಡಿ, ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ, ಕರಡಿ ಸಂಗಣ್ಣ, ವೈ. ದೇವೇಂದ್ರಪ್ಪ, ಸಾಂಗ್ಲಿಯ ಸಂಜಯಕಾಕಾ ಪಾಟೀಲ, ಸೊಲ್ಲಾಪುರ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ಸಾರಾಂಶ

‘ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ–ಅಂಕೋಲಾ ಹೊಸ ಬ್ರಾಡ್‌ಗೇಜ್ ಮಾರ್ಗದ ಅನುಷ್ಠಾನಕ್ಕೆ ಇರುವ ತೊಂದರೆಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಲು ನೋಡಲ್‌ ಅಧಿಕಾರಿ ನೇಮಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.