ADVERTISEMENT

ಸ್ಥಳೀಯ ಮಹನೀಯರ ಪ್ರತಿಮೆ ಸ್ಥಾಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 11:09 IST
Last Updated 16 ಅಕ್ಟೋಬರ್ 2021, 11:09 IST

ಹುಬ್ಬಳ್ಳಿ: ನಗರದ ಪ್ರಮುಖ ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಸ್ಥಾಪಿಸಿ ಉತ್ತರ ಕರ್ನಾಟಕದ ಮಹನೀಯರಿಗೆ ಅನ್ಯಾಯ ಮಾಡಲಾಗಿದೆ. ಅವುಗಳನ್ನು ತೆಗೆದು ಹಾಕಿ ಸ್ಥಳೀಯ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್‌. ಶಂಕರಣ್ಣ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ’ಇಲ್ಲಿನ ರೈಲು ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮಿ ಹೆಸರು ಇಡಲಾಗಿದೆ. ಆದರೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಛತ್ತು ಹಾಕಿ ವಿವೇಕಾನಂದರ ಮೂರ್ತಿ ಸ್ಥಾಪಿಸಿ, ಸಿದ್ಧಾರೂಢರ ಸಣ್ಣ ಮೂರ್ತಿಯನ್ನಷ್ಟೇ ಪ್ರತಿಷ್ಠಾಪಿಸಲಾಗಿದೆ. ಇದು ಹುಬ್ಬಳ್ಳಿ ಜನರ ಸ್ವಾಭಿಮಾನಕ್ಕೆ, ನಂಬಿಕೆ ಮತ್ತು ಅಸ್ಮಿತೆಗೆ ಧಕ್ಕೆ ತರುತ್ತಿದೆ. ಆದ್ದರಿಂದ ವಿವೇಕಾನಂದ ಮೂರ್ತಿ ತೆರವು ಮಾಡಿ, ನಿಲ್ದಾಣದ ಸ್ವಾಗತ ದ್ವಾರದ ಬಳಿ ಸಿದ್ಧಾರೂಢರ  ದೊಡ್ಡ ಮೂರ್ತಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

’ಉಣಕಲ್‌ ಕೆರೆಗೆ ಚನ್ನಬಸವ ಸಾಗರ ಕೆರೆ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿಯೂ ವಿವೇಕಾನಂದರ ಮೂರ್ತಿಯಿದ್ದು ಅದನ್ನು ತೆಗೆದು ಚನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಬೇಕು. ಪಾಲಿಕೆ ಮೇಯರ್‌ ಆಗಿದ್ದ ಸರ್‌ ಸಿದ್ಧಪ್ಪ ಕಂಬಳಿ ಅವರ ಪುತ್ಥಳಿಯನ್ನು ಪಾಲಿಕೆ ಆವರಣದಲ್ಲಿಯೇ ಸ್ಥಾಪಿಸಬೇಕು. ಅಂಜುಮನ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮೆಹಬೂಬ ಅಲಿಖಾನ್‌ ಅವರ ಹೆಸರನ್ನು ರೈಲು ನಿಲ್ದಾಣ ರಸ್ತೆಗೆ ನಾಮಕರಣ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

’ಬಿಜೆಪಿ ಪ್ರಾಯೋಜಿತ ಬೆಂಬಲಿಗರು ಹಿಂದುತ್ವದ ಹೆಸರಿನಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಉತ್ತರ ಕರ್ನಾಟಕದ ಮಹನೀಯರ ಹೆಸರು ಮರೆಮಾಚುವ ಹುನ್ನಾರ ಮಾಡುತ್ತಿದ್ದಾರೆ. ಜಿಲ್ಲೆಯ ಲಿಂಗಾಯತ ಸಮುದಾಯದ ಶಾಸಕರಿಗೆ ಸ್ವಾಭಿಮಾನವಿಲ್ಲವೇ’ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಜುನಾಲ್‌ ಮುಲ್ಲಾ, ಈಕ್ವೆಲಿಟಿ ರೈಟ್ಸ್‌ ಸಂಸ್ಥೆ ಅಧ್ಯಕ್ಷ ಪ್ರೊ. ಎಸ್‌.ಎನ್‌. ಬಡಿಗೇರ ಇದ್ದರು.

ಸಾರಾಂಶ

ನಗರದ ಪ್ರಮುಖ ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಸ್ಥಾಪಿಸಿ ಉತ್ತರ ಕರ್ನಾಟಕದ ಮಹನೀಯರಿಗೆ ಅನ್ಯಾಯ ಮಾಡಲಾಗಿದೆ. ಅವುಗಳನ್ನು ತೆಗೆದು ಹಾಕಿ ಸ್ಥಳೀಯ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್‌. ಶಂಕರಣ್ಣ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.