ADVERTISEMENT

ಕೋವಿಡ್ ಲಸಿಕೆಯಲ್ಲಿ ಭಾರತ ದಾಖಲೆ- ಮಹೇಶ ಟೆಂಗಿನಕಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 10:44 IST
Last Updated 17 ಜನವರಿ 2022, 10:44 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಹಾಗೂ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದಾರೆ
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಹಾಗೂ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದಾರೆ   

ಹುಬ್ಬಳ್ಳಿ: ‘ಕೋವಿಡ್–19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ನೀಡುವಲ್ಲಿ ಭಾರತ ದಾಖಲೆ ಬರೆದಿದೆ. 2021ರ ಜ.16ರಂದು ಆರಂಭವಾದ ಲಸಿಕೆ ಅಭಿಯಾನಕ್ಕೆ ಒಂದು ವರ್ಷವಾಗಿದ್ದು, ಇದುವರೆಗೆ 157 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಸುಮಾರು 66 ಕೋಟಿ ಜನ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

‘ಇದುವರೆಗೆ 91 ಕೋಟಿ ಜನ ಮೊದಲ ಡೋಸ್ ಪಡೆದಿದ್ದಾರೆ. 76 ಕೋಟಿಗೂ ಹೆಚ್ಚು ಮಹಿಳೆಯರಿಗೆ ಲಸಿಕೆ ಹಾಕಲಾಗಿದೆ. 3.69 ಲಕ್ಷಕ್ಕೂ ಹೆಚ್ಚು ತೃತೀಯ ಲಿಂಗಿಗಳು ಲಸಿಕೆಯ ಲಾಭ ಪಡೆದಿದ್ದಾರೆ. ಪ್ರತಿ ದಿನ ಸರಾಸರಿ 43 ಲಕ್ಷ ಡೋಸ್‌ಗಳನ್ನು ನೀಡಲಾಗುತ್ತಿದೆ. ದೇಶಿಯವಾಗಿಯೂ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಜಾಗತಿಕ ಮಟ್ಟದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯಾವುದೇ ಗುರುತಿನ ಚೀಟಿ ಇಲ್ಲದ 67 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ. ಸದ್ಯ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗುತ್ತಿದೆ. ಜೊತೆಗೆ, 5ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭವಾದ ಕೇವಲ 10 ದಿನಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ. ಇಲ್ಲಿಯವರೆಗೆ 3.31 ಕೋಟಿ ಮಕ್ಕಳಿಗೆ ಲಸಿಕೆ ಪಡೆದಿದ್ದಾರೆ’ ಎಂದರು.

ADVERTISEMENT

‘ಕಳೆದ ಸೆ. 17ರಂದು ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ಒಂದೇ ದಿನ 2.5 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಯಿತು. ಅಕ್ಟೋಬರ್ 21ಕ್ಕೆ ದೇಶವು 100 ಕೋಟಿ ಲಸಿಕೆಗಳನ್ನು ನೀಡಿದ ಗುರಿ ಸಾಧಿಸಿತು. ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಅಪಪ್ರಚಾರದ ನಡುವೆಯೂ, ಕೇಂದ್ರ ಸರ್ಕಾರ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗಿ ಲಸಿಕೆ ಅಭಿಯಾನ ನಡೆಸಿದೆ’ ಎಂದು ಹೇಳಿದರು.

‘ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಕುರಿತು, ಹುಬ್ಬಳ್ಳಿಯಲ್ಲಿ ನಡೆದಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಇತ್ತೀಚೆಗೆ ಜಿಲ್ಲೆಯ ಜನಪ್ರತಿನಿಧಿಗಳು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಫೆಬ್ರುವರಿಯೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಸದ್ಯದಲ್ಲೇ ಮಹಾನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ‘ನನ್ನ ಅನುದಾನದಲ್ಲಿ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ₹36 ಲಕ್ಷ ವೆಚ್ಚದಲ್ಲಿ ಎರಡು ಬೊಲೆರೊ ವಾಹನಗಳನ್ನು ನೀಡಲಾಗಿದೆ’ ಎಂದರು.

ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ, ‘ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದಕ್ಕಾಗಿ, ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೇ ವಾರ್ಡ್‌ಗಳ ಭೇಟಿ ಆರಂಭಿಸಿದ್ದೇನೆ. ಸ್ಥಳೀಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸುತ್ತಿದ್ದೇನೆ’ ಎಂದು ತಿಳಿಸಿದರು.

ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ಹಾಗೂ ಜಿಲ್ಲಾ ವಕ್ತಾರ ರವಿ ನಾಯಕ ಇದ್ದರು.

ಸಾರಾಂಶ

‘ಕೋವಿಡ್–19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ನೀಡುವಲ್ಲಿ ಭಾರತ ದಾಖಲೆ ಬರೆದಿದೆ. 2021ರ ಜ.16ರಂದು ಆರಂಭವಾದ ಲಸಿಕೆ ಅಭಿಯಾನಕ್ಕೆ ಒಂದು ವರ್ಷವಾಗಿದ್ದು, ಇದುವರೆಗೆ 157 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಸುಮಾರು 66 ಕೋಟಿ ಜನ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.