ADVERTISEMENT

ಕನ್ನಡದ ಕಬೀರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ಅಪರೂಪದ ಫೋಟೊಗಳು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 5:05 IST
Last Updated 5 ಫೆಬ್ರುವರಿ 2022, 5:05 IST
   

ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಕೃಷ್ಣೆಯ ನಾಡಿನ ಕಬೀರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಇನ್ನಿಲ್ಲ.  ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕೋಮು ದ್ವೇಷ, ಜಾತಿ–ಧರ್ಮದ ಅಮಲು ಮಾನವತೆಯನ್ನು ಮಂಕಾಗಿಸಿರುವ ವಿಪ್ಲವದ ಈ ದಿನಗಳಲ್ಲಿ ಜನಸಾಮಾನ್ಯರ ನಡುವಿದ್ದ ಈ ಕಬೀರ ದಿಢೀರನೆ ಕಣ್ಮರೆಯಾಗಿದ್ದಾರೆ. 

ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್ ಹಾಗೂ ಅಮೀನಾಬಿ ದಂಪತಿ ಪುತ್ರ ಇಬ್ರಾಹಿಂ ಸುತಾರ (ಜನ್ಮ ದಿನ: ಮೇ 10, 1940) ಅವರಿಗೆ ಮನೆಯಲ್ಲಿನ ಬಡತನದ ಪರಿಸ್ಥಿತಿ ಓದಲು ಉತ್ತೇಜಕವಾಗಿರಲಿಲ್ಲ. ಮೂರನೇ ತರಗತಿಗೆ ಶಿಕ್ಷಣ ಅಪೂರ್ಣಗೊಂಡಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ ಸುತಾರ ಕಲಿತರು. ಬದುಕಿಗೆ ಅದೇ ದಾರಿಯಾಯಿತು.

ADVERTISEMENT

ಬಾಲ್ಯದಲ್ಲಿ ಮಸೀದಿಗೆ ಹೋಗಿ ಅಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಪ್ರಾರ್ಥನೆ ಕಲಿತು ಕುರಾನ್ ಅಧ್ಯಯನ ಮಾಡಿದರು. ಈ ವೇಳೆ ಬೇರೆ ಧರ್ಮಗಳ ಸಾರ ಅರಿಯುವ ಆಶಯ ಮೊಳಕೆಯೊಡೆಯಿತು. ಅದಕ್ಕೆ ಊರಿನ ಸಾಧುನ ಗುಡಿಯಲ್ಲಿದ್ದ ಭಜನಾ ಸಂಘ ಒತ್ತಾಸೆ ನೀಡಿತು. ಅಲ್ಲಿನ ಧಾರ್ಮಿಕರ ಸಾಂಗತ್ಯದಲ್ಲಿ ತತ್ವಪದ, ವಚನಗಳನ್ನು ಕಲಿತರು. ಉಪನಿಷತ್ತಿನ ಸಾರ ಅರಿತುಕೊಂಡರು. ರಮ್ಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡ ಅವರು, ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು

‘ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರೂ ಸತ್ಯ ಒಂದೇ ಎಂಬ ಸಂಗತಿ ಅರಿವಿಗೆ ಬಂದಿತು. ಜೊತೆಗೆ ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ಭವದ ಅರಿವು ವಿಸ್ತಾರಗೊಳಿಸಿತು’ ಎಂದು ವಿನಮ್ರವಾಗಿ ಹೇಳುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.