ADVERTISEMENT

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್‌ ಬಳಿಕ ವೃದ್ಧಾಶ್ರಮದತ್ತ ಹಿರಿಯರು

ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸಿ ಪ್ರವೇಶಾವಕಾಶ

ಕಲಾವತಿ ಬೈಚಬಾಳ
Published 17 ಅಕ್ಟೋಬರ್ 2021, 16:15 IST
Last Updated 17 ಅಕ್ಟೋಬರ್ 2021, 16:15 IST
ವೃದ್ಧಾಶ್ರಮ
ವೃದ್ಧಾಶ್ರಮ   

ಹುಬ್ಬಳ್ಳಿ: ಕೋವಿಡ್-19 ಲಾಕ್‌ಡೌನ್ ತೆರವಾದ ನಂತರದ ದಿನಗಳಲ್ಲಿ ವೃದ್ಧಾಶ್ರಮದತ್ತ ಹೆಜ್ಜೆ ಹಾಕುತ್ತಿರುವ ಹಿರಿಯ‌ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸೋಂಕು ಹರಡಬಹುದೆಂಬ ಕಾರಣದಿಂದ ಬಹುತೇಕ ವೃದ್ಧಾಶ್ರಮಗಳು ಪ್ರವೇಶ ನೀಡಿರಲಿಲ್ಲ. ಇನ್ನು ಕೆಲವು ಸಂಸ್ಥೆಗಳು ಕೋವಿಡ್ ಪರೀಕ್ಷೆ ಮಾಡಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪ್ರವೇಶಾವಕಾಶ ನೀಡಿದ್ದವು.

ಲಾಕ್‌ಡೌನ್ ಇದ್ದಾಗ ಹಲವರು ಮನೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಅವರು ಮರಳಿ ಕಚೇರಿಗಳಿಗೆ ಹೋಗಲಾರಂಭಿಸಿದ್ದಾರೆ. ಮೊಮ್ಮಕ್ಕಳು ಶಾಲೆಗೆ ಹೊರಟಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹಿರಿಯ ನಾಗರಿಕರಿಗೆ ಏಕಾಂಗಿತನ ಕಾಡತೊಡಗಿದೆ. ಹಾಗಾಗಿ ಅವರೆಲ್ಲ ವೃದ್ಧಾಶ್ರಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

‘ನಮ್ಮೊಂದಿಗೆ ಹೊಂದಿಕೊಳ್ಳುತ್ತಿಲ್ಲ ಎಂಬ ಅಸಮಾಧಾನದಿಂದ, ಆರ್ಥಿಕ ಹೊರೆಯ ಕಾರಣದಿಂದ ಅಪ್ಪ, ಅಮ್ಮನನ್ನು ಮಕ್ಕಳೇ ವೃದ್ಧಾಶ್ರಮಕ್ಕೆ ತಂದು ಬಿಡುವವರ ನಡುವೆ, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಕಾಳಜಿ‌ ವಹಿಸಿ ಇಲ್ಲಿ ಕರೆತರುವವರೂ ಇದ್ದಾರೆ. ಮಕ್ಕಳಿಗೆ ಏಕೆ ಹೊರೆಯಾಗೋಣ, ಒಬ್ಬಂಟಿ‌ಯಾಗಿ ಏಕೆ ಇರೋಣ ಎಂದು ಆಶ್ರಮವಾಸ ಬಯಸಿ ಬರುವ ಹಿರಿಯರೂ ಇದ್ದಾರೆ’ ಎನ್ನುತ್ತಾರೆ ಹುಬ್ಬಳ್ಳಿಯ ಸಮಧ್ವಾ ಸೇವಾ ಪ್ರತಿಷ್ಠಾನದ ಸಂಧ್ಯಾ ಕಿರಣ ವೃದ್ಧಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಸಂದೀಪ ಕುಲಕರ್ಣಿ.

ADVERTISEMENT

ಬೆಲೆ ಏರಿಕೆ ಬಿಸಿ: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ವೃದ್ಧಾಶ್ರಮಗಳಿಗೂ ತಟ್ಟಿದೆ. ಕಟ್ಟಡದ ಬಾಡಿಗೆ, ವಿದ್ಯುತ್ ವೆಚ್ಚ, ವೃದ್ಧರಿಗೆ ವೈದ್ಯಕೀಯ ಖರ್ಚು ಎಲ್ಲ ಸೇರಿ ತಿಂಗಳಿಗೆ ಅಂದಾಜು ₹1 ಲಕ್ಷ ವೆಚ್ಚವಾಗುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಆರ್ಥಿಕ ಹಾಗೂ ಇತರೆ ನೆರವು ಸಿಕ್ಕಿತ್ತು. ಈಗ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ಸಂಧ್ಯಾ ಕಿರಣ ವೃದ್ಧಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಸಂತೋಷ ಹರ್ಲಾಪುರ ತಿಳಿಸಿದರು.

‘ಧಾರವಾಡ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ವೃದ್ಧಾಶ್ರಮಗಳಿವೆ. ನಮ್ಮಲ್ಲಿ 45 ಜನ ಇದ್ದಾರೆ. ಎಲ್ಲರಿಗೂ ಲಸಿಕೆ ಹಾಕಿಸಲಾಗಿದೆ. ಆಶ್ರಮದ ವಾಸ ಬಯಸಿ ಬರುವವರಿಗೆ ಸೇವೆ ನೀಡಲು‌ ಸಿದ್ಧರಿದ್ದೇವೆ’ ಎಂದು ಧಾರವಾಡದ ಆನಂದಾಶ್ರಮ, ವೃದ್ಧಾಶ್ರಮದ ವ್ಯವಸ್ಥಾಪಕ ನವೀನ್ ಕುಲಕರ್ಣಿ ತಿಳಿಸಿದರು.

ಕೋವಿಡ್ ಮೊದಲ ಅಲೆ ವೇಳೆ ಕೇವಲ 3 ಜನ ಇದ್ದರು. 2ನೇ ಅಲೆ ವೇಳೆ ಯಾರಿಗೂ ಪ್ರವೇಶ ನೀಡಿರಲಿಲ್ಲ. ಇದೀಗ ಕೋವಿಡ್ ನಿಯಮಗಳನ್ನು ಪಾಲಿಸಿ‌ ಪ್ರವೇಶ ನೀಡುತ್ತಿದ್ದೇವೆ. 12 ಜನ ವೃದ್ಧರು ಇದ್ದಾರೆ
-ಡಾ. ಸಂದೀಪ ಕುಲರ್ಣಿ, ಮ್ಯಾನೇಜಿಂಗ್ ಟ್ರಸ್ಟಿ, ಸಂಧ್ಯಾ ಕಿರಣ ವೃದ್ದಾಶ್ರಮ

ಅಂಕಿ–ಅಂಶ

1,23,848: ಜಿಲ್ಲೆಯಲ್ಲಿರುವ ವೃದ್ಧರ ಸಂಖ್ಯೆ (2011ರ ಜನಗಣತಿ ಪ್ರಕಾರ)

3: ಸರ್ಕಾರಿ ಅನುದಾನಿತ ವೃದ್ಧಾಶ್ರಮಗಳು

4: ನೋಂದಾಯಿತ ಖಾಸಗಿ ವೃದ್ಧಾಶ್ರಮಗಳು

‘ಆಶ್ರಯ ಇಲ್ಲದವರಿಗಷ್ಟೇ ಪ್ರವೇಶ’

‘ಕುಟುಂಬದವರು ನೋಡಿಕೊಳ್ಳದ ಹಿರಿಯ ನಾಗರಿಕರಿಗೆ ಮಾತ್ರ ಪ್ರವೇಶ ನೀಡುತ್ತೇವೆ. ಇಲ್ಲಿ ಊಟ, ವಸತಿ ಸೇರಿದಂತೆ ಎಲ್ಲವೂ ಉಚಿತವಾಗಿದೆ. 25 ಜನರಿರಲು ಅವಕಾಶ ಇದೆ. ಇತ್ತೀಚೆಗೆ ಆಶ್ರಮವಾಸ ಬಯಸಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಹುಬ್ಬಳ್ಳಿಯ ನವನಗರದಲ್ಲಿರುವ ಸರ್ಕಾರಿ ಅನುದಾನಿತ ಮೈತ್ರಿ ವೃದ್ಧಾಶ್ರಮದ ಸೂಪರಿಂಟೆಂಡೆಂಟ್‌ ಮಕ್ತುಮ್‌ ಹುಸೇನ್‌ ಗಾನಮನಗಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಅನುದಾನಿತ ವೃದ್ಧಾಶ್ರಮದಲ್ಲಿ ಫಲಾನುಭವಿಗೆ ವರ್ಷಕ್ಕೆ ₹8 ಲಕ್ಷ, ಕೇಂದ್ರ ಸರ್ಕಾರ ಅನುದಾನಿತ ವೃದ್ಧಾಶ್ರಮಗಳಲ್ಲಿ ಫಲಾನುಭವಿಗೆ ವರ್ಷಕ್ಕೆ ₹18 ಲಕ್ಷ ವೆಚ್ಚ ಮಾಡಲಾಗುತ್ತದೆ. ಕೋವಿಡ್‌ ಸಮಯದಲ್ಲಿ ಯಾರನ್ನೂ ಆಚೆ ಹೋಗಲು ಬಿಟ್ಟಿಲ್ಲ, ಹೊಸಬರನ್ನು ತೆಗೆದುಕೊಂಡಿಲ್ಲ’ ಎಂದು ಧಾರವಾಡದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್‌. ಮೂಲಿಮನಿ ತಿಳಿಸಿದರು.

ಸಾರಾಂಶ

ಮೊಮ್ಮಕ್ಕಳು ಶಾಲೆಗೆ ಹೊರಟಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹಿರಿಯ ನಾಗರಿಕರಿಗೆ ಏಕಾಂಗಿತನ ಕಾಡತೊಡಗಿದೆ. ಹಾಗಾಗಿ ಅವರೆಲ್ಲ ವೃದ್ಧಾಶ್ರಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.