ಹರಪನಹಳ್ಳಿ: ರಸ್ತೆ ನಿರ್ಮಾಣಕ್ಕಾಗಿ ಅನುದಾನ ಪಡೆಯಲು ಚಾತಕ ಪಕ್ಷಿಯಂತೆ ಕಾದು ನಿರಾಶರಾದ ತಾಲ್ಲೂಕಿನ ನಿಟ್ಟೂರು ಗ್ರಾಮಸ್ಥರು ಹಣ ಸಂಗ್ರಹಿಸಿ 2 ಕಿ.ಮೀ. ಮಣ್ಣಿನ ರಸ್ತೆ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ.
ಗ್ರಾಮದ ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಗ್ರಾಮದ ಎಚ್.ಟಿ. ರಾಮಚಂದ್ರಪ್ಪ ಅವರ ಹೊಲದಿಂದ ಹೊಟ್ಟೆವ್ವರ ಲಕ್ಕಪ್ಪನ ಹೊಲದವರೆಗೂ ರಸ್ತೆ ಸಂಪೂರ್ಣ ಹಾಳಾಗಿತ್ತು. ಗುಂಡಿಗಳು ಬಿದ್ದಿದ್ದರಿಂದ ಟ್ರ್ಯಾಕ್ಟರ್, ಎತ್ತಿನ ಬಂಡಿಗಳು ಕೆಸರಿಗೆ ಸಿಲುಕಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕೆಸರಿಗೆ ಸಿಲುಕಿದ ಟ್ರ್ಯಾಕ್ಟರ್ ಎಳೆಯಲು ಮತ್ತೊಂದು ಟ್ರ್ಯಾಕ್ಟರ್ ಬಳಸಬೇಕಾಗಿತ್ತು. ಎತ್ತಿನ ಬಂಡಿ ಸಿಲುಕಿದರಂತೂ ಗೋಳು ಹೇಳತೀರದಾಗಿತ್ತು.
‘ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳಿಗೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆ ಅಡಿ ರಸ್ತೆ ನಿರ್ಮಾಣಕ್ಕೆ ಅಲವತ್ತುಕೊಂಡರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಾವೇ ಮಣ್ಣಿನ ರಸ್ತೆ ನಿರ್ಮಾಣಕ್ಕೆ ಮುಂದಾದೆವು’ ಎಂದು ಗ್ರಾಮಸ್ಥರು ತಿಳಿಸಿದರು.
‘ಎರಡು ಕಿ.ಮೀ. ರಸ್ತೆಯ ಮಾರ್ಗದಲ್ಲಿರುವ ರೈತರ ಹೆಸರುಗಳನ್ನು ಪಟ್ಟಿ ಮಾಡಿ, ಎಕರೆಗೆ ಸಾವಿರ ರೂಪಾಯಿಯಂತೆ ಅಂದಾಜು ₹ 2.50 ಲಕ್ಷ ಸಂಗ್ರಹಿಸಿದ್ದೇವೆ. ಕೆಲ ರೈತರು ಸ್ವಯಂಪ್ರೇರಿತರಾಗಿ 10 ಟ್ರ್ಯಾಕ್ಟರ್‌ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಬಾಡಿಗೆಗೆ ಜೆಸಿಬಿ ತಂದು, ರೈತರ ಹೊಲಗಳಿಂದ ಮಣ್ಣು ತಂದು ಉತ್ತಮ ರಸ್ತೆ ನಿರ್ಮಾಣ ಮಾಡಿದ್ದೇವೆ’ ಎಂದು ಕಾಮಗಾರಿ ನೇತೃತ್ವ ವಹಿಸಿದ್ದ ಗ್ರಾಮದ ಎಸ್.ವಿ. ನಾಗರಾಜ್, ಎಚ್.ಟಿ. ಕೆಂಚಪ್ಪ ಮತ್ತು ಹನುಮಂತಪ್ಪ ಮಾಹಿತಿ ನೀಡಿದರು.
‘ಅ.11ರಿಂದ ಕೆಲಸ ಆರಂಭವಾಗಿದ್ದು, ಇನ್ನೂ ಪ್ರಗತಿಯಲ್ಲಿದೆ. ಇನ್ನೆರಡು ದಿನಗಳಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ಉತ್ತಮ ರಸ್ತೆ ನಿರ್ಮಾಣವಾಗುತ್ತದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರೈತರಾದ ನಾಗರಾಜ್, ಎಚ್.ಟಿ. ಕೆಂಚಪ್ಪ, ಹನುಮಂತಪ್ಪ, ಅರುಣಪ್ಪ, ಎಂ. ಸೋಮಪ್ಪ, ಮಡಿವಾಳ ಮಂಜಪ್ಪ, ಎಚ್. ನಾಗಪ್ಪ, ಮೂಲಿಮನಿ ದೇವೇಂದ್ರಪ್ಪ, ಶೇಖಪ್ಪ, ಬಿ.ಟಿ. ಮಲ್ಲಿಕಾರ್ಜುನ್, ಎಂ. ಲಕ್ಕಪ್ಪ, ಎ.ಕೆ. ಬಸವರಾಜ್, ಬಂಡ್ರಿ ಹನುಮಂತಪ್ಪ, ಇ. ಸೋಮಪ್ಪ, ಎನ್. ಸಂತೋಷ್, ಎಂ. ಶಿವರಾಜ್, ಬಡಿಗೇರ ಕೃಷ್ಣ, ಗೋದೆಪ್ಪ, ಎಚ್.ಟಿ. ಪರಶುರಾಮ್, ನವೀನ್, ಬಾರ್ಕಿ ವಸಂತಪ್ಪ ಮುಂತಾದವರು ರಸ್ತೆ ನಿರ್ಮಾಣಕ್ಕೆ ಕೈಜೋಡಿಸಿದವರು.
ಚಿಕ್ಕವನಿದ್ದಾಗಿನಿಂದಲೂ ಈ ರಸ್ತೆ ತೀರಾ ಹದಗೆಟ್ಟಿತ್ತು. ಮಣ್ಣಿನ ರಸ್ತೆ ಮಾಡುವುದರಿಂದ ಹೊಲಗಳಲ್ಲಿ ಬೆಳೆದ ಫಸಲು ಕಟಾವು ಮಾಡಿ ತರಲು ಸುಲಭವಾಗುತ್ತದೆ.
ಮೂಲಿಮನಿ ಅಶೋಕಪ್ಪ, ರೈತ
ಮಳೆಗಾಲದಲ್ಲಿ ರಸ್ತೆಯಲ್ಲಿ ನಡೆದು ಹೋಗುವುದು ಕಷ್ಟ. ಆದಕಾರಣ ರೈತರೆಲ್ಲರೂ ಮಾತನಾಡಿಕೊಂಡು ರಸ್ತೆ ನಿರ್ಮಾಣ ಮಾಡಿದ್ದೇವೆ. ₹ 15 ಸಾವಿರ ದೇಣಿಗೆ ಹಾಗೂ ಎರಡು ಟ್ರ್ಯಾಕ್ಟರ್ ಉಚಿತವಾಗಿ ನೀಡಿದ್ದೇನೆ.
ಎಚ್.ಟಿ. ಕೆಂಚಪ್ಪ, ರೈತ
ಮಣ್ಣಿನ ರಸ್ತೆ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹ 20 ಸಾವಿರ ಕೊಟ್ಟಿದ್ದೇನೆ. ಜೊತೆಗೆ ಎರಡು ಟ್ರ್ಯಾಕ್ಟರ್‌ಗಳನ್ನು ಉಚಿತವಾಗಿ ಕೊಟ್ಟಿದ್ದೇನೆ. ಸರ್ಕಾರವನ್ನೇ ನಂಬಿದರೆ, ನಮಗೆ ತೀವ್ರ ತೊಂದರೆಯಾಗುತ್ತದೆ.
ಎನ್. ನಾಗರಾಜ್, ರೈತ
ಹರಪನಹಳ್ಳಿ: ರಸ್ತೆ ನಿರ್ಮಾಣಕ್ಕಾಗಿ ಅನುದಾನ ಪಡೆಯಲು ಚಾತಕ ಪಕ್ಷಿಯಂತೆ ಕಾದು ನಿರಾಶರಾದ ತಾಲ್ಲೂಕಿನ ನಿಟ್ಟೂರು ಗ್ರಾಮಸ್ಥರು ಹಣ ಸಂಗ್ರಹಿಸಿ 2 ಕಿ.ಮೀ. ಮಣ್ಣಿನ ರಸ್ತೆ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.