ದಾವಣಗೆರೆ: ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಸೋಂಕು ಬಂದರೆ ಅಪಾಯ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ವಿಡಿಯೊ ಮೂಲಕ ಹೇಳಿಕೆ ನೀಡಿರುವ ಅವರು, ‘ಕೊರೊನಾ ಪಾಸಿಟಿವ್ ಬಂದರೆ ಏನಾಗುತ್ತದೆ ಎಂದು ಹಗುರವಾಗಿ ಯಾರೂ ತಗೋಬಾರದು’ ಎಂದು ತಿಳಿಸಿದ್ದಾರೆ.
ಆಮ್ಲಜನಕ ವ್ಯವಸ್ಥೆ, ಬೆಡ್, ಐಸಿಯು, ವೆಂಟಿಲೇಟರ್ ಹೀಗೆ ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆಗಳು ಇವೆ. ಹಾಗಂತ ಎಲ್ಲರೂ ಆಸ್ಪತ್ರೆಗೆ ಬರಬೇಕು ಎಂದಲ್ಲ. ಆದರೆ ನಿಮ್ಮ ಸುರಕ್ಷತೆಯನ್ನು ನೀವು ಕಾಪಾಡಿಕೊಳ್ಳಬೇಕು. ಕೋವಿಡ್ ನಿರೋಧಕ ಲಸಿಕೆ ಎರಡೂ ಡೋಸ್ ಹಾಕಿಕೊಂಡವರಿಗೆ ಕೊರೊನಾ ಹಾಗೆ ಬಂದು ಹೋಗುತ್ತದೆ. ಒಂದು ಡೋಸ್ ಹಾಕಿಸಿಕೊಂಡು ಸುಮ್ಮನಾಗಿರುವವರಿಗೆ ಕೊರೊನಾ ಬಂದಾಗ ಸ್ವಲ್ಪ ತೊಂದರೆಯಾಗುತ್ತದೆ. ಎರಡೂ ಡೋಸ್ ಹಾಕಿಸಿಕೊಳ್ಳದೇ ಇದ್ದವರಿಗೆ ಕೊರೊನಾ ಬಂದಾಗ ಹೆಚ್ಚು ಅಪಾಯ ಉಂಟಾಗುತ್ತಿದೆ. ನಿನ್ನೆ ಮೃತಪಟ್ಟಿರುವ 80 ವರ್ಷದ ವೃದ್ಧೆಗೆ ಬೇರೆ ಬೇರೆ ಕಾಯಿಲೆಗಳು ಇದ್ದವು ನಿಜ. ಜತೆಗೆ ಕೊರೊನಾ ನಿರೋಧಕ ಡೋಸ್ ಹಾಕಿಸಿಕೊಂಡೇ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಎರಡೂ ಡೋಸ್ ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ. ಎರಡನೇ ಡೋಸ್ ಕೂಡ ಹಾಕಿಸಿಕೊಳ್ಳಿ. 60 ವರ್ಷ ದಾಟಿದ ಇತರ ಕಾಯಿಲೆಗಳಿಂದ ಬಳುತ್ತಿರುವವರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಕೂಡಲೇ ಹಾಕಿಸಿಕೊಳ್ಳಬೇಕು. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಇಲ್ಲ ಎಂದು ಮದುವೆ, ಜಾತ್ರೆ, ತೇರು ಎಂದು ಅಡ್ಡಾಡಿ ಈಗ ಕೊರೊನಾ ಪ್ರಕರಣಗಳು ದಿನಕ್ಕೆ ಐನೂರು, ಸಾವಿರ ಬರುತ್ತಿವೆ. ಮದುವೆ ಮುಂತಾದ ಕಾರ್ಯಗಳನ್ನು ಮಾಡಬೇಡಿ. ತೀರ ಅನಿವಾರ್ಯವಾದರೆ ಮಾತ್ರ ಸರಳವಾಗಿ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಸೋಂಕು ಬಂದರೆ ಅಪಾಯ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.