ADVERTISEMENT

ಸ್ಕೂಟರ್‌ಗೆ ಕಡವೆ ಡಿಕ್ಕಿ: ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ ನಿಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 5:15 IST
Last Updated 16 ಅಕ್ಟೋಬರ್ 2021, 5:15 IST
ಹವ್ಯಾಸಿ ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ
ಹವ್ಯಾಸಿ ಯಕ್ಷಗಾನ ಭಾಗವತ ರಾಮಚಂದ್ರ ಅರ್ಬಿತ್ತಾಯ   

ಸುಬ್ರಹ್ಮಣ್ಯ: ಕುಲ್ಕುಂದದಲ್ಲಿ ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ಯಕ್ಷಗಾನದ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅವರು ಕೊನೆಯುಸಿರೆಳೆದಿದ್ದಾರೆ.

ಕುಲ್ಕುಂದದಲ್ಲಿ ನಸುಕಿನ ಜಾವ, ಶಟಲ್ ಬ್ಯಾಡ್ಮಿಂಟನ್ ಅಭ್ಯಾಸಕ್ಕಾಗಿ ತಮ್ಮ ಸ್ನೇಹಿತರ ಮನೆಗೆ  ಸುಬ್ರಹ್ಮಣ್ಯದಿಂದ ಕುಲ್ಕುಂದಕ್ಕೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಕಡವೆ ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿಯಾಗಿದೆ. ರಾಮಚಂದ್ರ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತರಾಗಿದ್ದಾರೆ. ಸಹೋದರ ರವಿ ಅವರಿಗೂ ಗಾಯಗಳಾಗಿವೆ.

ಮೃದು ಸ್ವಭಾವದ ರಾಮಚಂದ್ರ ಅರ್ಬಿತ್ತಾಯ ಅವರು ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರ ಸೋದರಳಿಯ. ಅವರ ಮನೆಯಲ್ಲೇ ಯಕ್ಷಗಾನ ಕಲಿತಿದ್ದರು. 

ADVERTISEMENT

ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್, ಹಾಗೂ ರಾಜ್ಯಮಟ್ಟದ ಶಟ್ಲ್ ಆಟಗಾರರೂ ಆಗಿದ್ದ ರಾಮಚಂದ್ರ ಅರ್ಬಿತ್ತಾಯರೇ ಅವರ ಕುಟುಂಬಕ್ಕೆ ಆಸರೆಯಾಗಿದ್ದರು.

ಕಡಬ, ಸುಳ್ಯ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಪರಿಸರದಲ್ಲಿ ಯಕ್ಷಗಾನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅರ್ಬಿತ್ತಾಯರು, ಸುಮಧುರ ಕಂಠ ಮತ್ತು ಸಂಪ್ರದಾಯಬದ್ಧ ಯಕ್ಷಗಾನ ಹಾಡುಗಳಿಂದಾಗಿ ಜನಪ್ರಿಯರಾಗಿದ್ದರು.

ಕುಕ್ಕೆ ಸುಬ್ರಹ್ಮಣ್ಯ-ಸುಳ್ಯ ಪರಿಸರದಲ್ಲಿ ಭಜನಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದ ರಾಮಚಂದ್ರ ಅರ್ಬಿತ್ತಾಯರು ತಾಯಿ, ತಂಗಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಸಾರಾಂಶ

ಕುಲ್ಕುಂದದಲ್ಲಿ ಶನಿವಾರ ಮುಂಜಾನೆ ನಡೆದ ಅಪಘಾತದಲ್ಲಿ ಯಕ್ಷಗಾನದ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಅವರು ನಿಧನರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.