ಮಂಗಳೂರು: ನಿವೃತ್ತ ಶಿಕ್ಷಕ ಗಜಾನನ ವಝೆ ಮುಂದಾಳತ್ವದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಸ್ಯ ಸಂಪತ್ತಿನ ದಾಖಲೀಕರಣವು ಆರಂಭಗೊಂಡಿದ್ದು, ಈಗಾಗಲೇ 315ಕ್ಕೂ ಹೆಚ್ಚು ಪ್ರಭೇದಗಳನ್ನು ದಾಖಲಿಸಲಾಗಿದೆ. ಆಗಸ್ಟ್ 15ರಂದು ಪ್ರಕ್ರಿಯೆ ಆರಂಭಗೊಂಡಿತ್ತು.
‘ಜೀವವೈವಿಧ್ಯಗಳನ್ನು ದಾಖಲಿಸಬೇಕು’ ಎಂಬ ನಿರ್ಣಯವನ್ನು 2002ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ವಿಜ್ಞಾನಿಗಳ ಸಮಾವೇಶವು ಅಂಗೀಕರಿಸಿತ್ತು. 2005ರಲ್ಲಿ ಅದಕ್ಕೆ ಮೂರ್ತ ರೂಪ ಸಿಕ್ಕಿದ್ದು, ಭಾರತದಲ್ಲೂ ವೇದಿಕೆ ದೊರೆಯಿತು. ಆದರೆ, ಇದನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿ ದಾಖಲೀಕರಣ ಮಾಡಿದ ಪಂಚಾಯಿತಿ ಅಥವಾ ಅರಣ್ಯ ವಲಯಗಳೇ ವಿರಳ.
ಪ್ರಕೃತಿ ಮತ್ತು ವಿಜ್ಞಾನದ ಮೇಲೆ ಪ್ರೀತಿ ಹೊಂದಿರುವ ಶಿಕ್ಷಕ ಗಜಾನನ ವಝೆ, ತಮ್ಮ ಗ್ರಾಮದ ಸಸ್ಯ ವೈವಿಧ್ಯವನ್ನಾದರೂ ದಾಖಲಿಸಬೇಕು ಎಂಬ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು. ಅವರ ಜೊತೆ ಗ್ರಾಮ ಪಂಚಾಯಿತಿಯ ದಾಖಲೀಕರಣ ಸಮಿತಿ ಹಾಗೂ ಸ್ಥಳೀಯ ಆಸಕ್ತರು ಕೈ ಜೋಡಿಸಿದ್ದಾರೆ. ಪ್ರಮುಖವಾಗಿ ಸಚಿನ್ ಭಿಡೆ, ಶಶಿಧರ ಖಾಡಿಲ್ಕರ್, ಶಿವಣ್ಣ, ವಾಸುದೇವ ತಾಮ್ಹನ್ಕರ್, ಶಶಾಂಕ ಮರಾಠೆ ಮತ್ತಿತರರು ಕೆಲಸ ಮಾಡುತ್ತಿದ್ದಾರೆ. ಸಸ್ಯಸಂಕುಲ ಕುರಿತು ಜ್ಞಾನ ಹೊಂದಿರುವ ಬಾಲಕೃಷ್ಣ ಗೌಡ, ಸರೋಜಾ ಗೌಡ, ಕೊರಗಪ್ಪ ನಾಯ್ಕ, ಐತ ಮತ್ತಿತರರು ಮಾಹಿತಿ ನೀಡಿದ್ದಾರೆ.
ಏನಿದು?
‘ನಮ್ಮ ದೇಶದ ಪರಂಪರೆ, ಸಂಪತ್ತಿನ ಬಗ್ಗೆ ಕೆಲವರು ಸಾಕಷ್ಟು ಮಾತನಾಡುತ್ತಾರೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗಬೇಕಾದರೆ ಪೂರಕ ದಾಖಲೆಗಳು ಬೇಕು. ಅರಶಿಣ ಮತ್ತು ಕಹಿಬೇವಿನ ಪೇಟೆಂಟ್ ಕುರಿತು ಪೂರಕ ದಾಖಲೆ ಇಲ್ಲದಿರುವುದು ಭಾರತಕ್ಕೆ ಆರಂಭಿಕ ಹಿನ್ನಡೆ ಉಂಟು ಮಾಡಿತ್ತು. ನಮ್ಮದು ದೇಶದ ಸಂಪತ್ತನ್ನು ದಾಖಲಿಸುವ ಪ್ರಕ್ರಿಯೆಯೂ ಹೌದು’ ಎನ್ನುತ್ತಾರೆ ಗಜಾನನ ವಝೆ.
ಈಗಾಗಲೇ 315 ಸಸ್ಯ ಪ್ರಭೇದಗಳನ್ನು ದಾಖಲಿಸಲಾಗಿದೆ. ಸುಮಾರು 400ಕ್ಕೂ ಅಧಿಕ ಪ್ರಭೇದಗಳನ್ನು ಗುರುತಿಸಲಾಗಿದೆ.
‘ಭೌಗೋಳಿಕ ವೈವಿಧ್ಯದ ಆಧಾರದಲ್ಲಿ ತೋಟ, ಗದ್ದೆ, ಅರಣ್ಯ, ಬದು, ನದಿ ತೀರ... ಹೀಗೆ ಪ್ರದೇಶವನ್ನು ವರ್ಗೀಕರಿಸಿಕೊಂಡಿದ್ದೇವೆ. ಇಂತಹ ಒಂದೇ ರೀತಿಯ ಎರಡು ಪ್ರದೇಶವನ್ನು ಆಯ್ದುಕೊಂಡು, ಅಲ್ಲಿನ ಸಸ್ಯ ಸಂಪತ್ತಿನ ಜಿಪಿಎಸ್ ಫೊಟೊ, ಸ್ಥಳೀಯರು (ನಾಟಿ ವೈದ್ಯರು, ಅರಣ್ಯವಾಸಿ, ಮೂಲ ನಿವಾಸಿಗಳು) ನೀಡುವ ಮಾಹಿತಿಯನ್ನು ವೈಜ್ಞಾನಿಕವಾಗಿ ದಾಖಲಿಸುತ್ತೇವೆ. ಕೊರಗ ಮತ್ತಿತರ ಸಮುದಾಯಗಳ ಹಿರಿಯರಲ್ಲಿ ಅಪಾರ ನೆಲದ ಜ್ಞಾನವಿದೆ’ ಎಂದರು.
‘ನಮ್ಮ ಊರಿನಲ್ಲಿ 100 ಅಡಿಕೆ ತೋಟವಿದ್ದರೂ, ಅವುಗಳ ಸಸ್ಯ ಪ್ರಭೇದಗಳು ಸಾಮಾನ್ಯ ಒಂದೇ ರೀತಿ ಆಗಿರುತ್ತವೆ. ಅದಕ್ಕಾಗಿ ನಾವು 100ರಲ್ಲಿ ಎರಡನ್ನು ಆಯ್ಕೆ ಮಾಡುತ್ತೇವೆ. ಅದೇ ರೀತಿ, ಗದ್ದೆ, ಅರಣ್ಯ, ಇಳಿಜಾರು, ಕೆರೆ ದಡ ಹೀಗೆ ಆಯ್ಕೆ ಮಾಡುತ್ತಾ ಹೋಗುತ್ತೇವೆ. ಇದರಿಂದ ನಮ್ಮಲ್ಲಿನ ಔಷಧೀಯ, ಅಳಿವಿನಂಚಿನಲ್ಲಿರುವ ಸಸ್ಯಗಳೂ ದಾಖಲಾಗುತ್ತಿವೆ’ ಎಂದು ವಿವರಿಸಿದರು.
ಸದಾ ವಿಜ್ಞಾನ, ಕೃಷಿ ಪರಿಕರ ಶೋಧ, ಸಸ್ಯ ಸಂಪತ್ತು ದಾಖಲು ಮತ್ತಿತರ ಕೆಲಸವನ್ನು ಗಜಾನನ ವಝೆ ಮಾಡುತ್ತಿರುತ್ತಾರೆ. ಸದ್ಯ ಪಶ್ಚಿಮ ಘಟ್ಟದ ತಪ್ಪಲಿನ ತೋಟ– ಕಾಡುಮೇಡುಗಳಲ್ಲಿ ಅಲೆದು ಸಸ್ಯ ಪ್ರಭೇದ ದಾಖಲಿಸುತ್ತಿರುವ ಅವರನ್ನು ಗ್ರಾಮಸ್ಥರು ಗುರುತಿಸುವುದು ‘67 ವರ್ಷದ ಯುವಕ’.
ಸಸ್ಯ ಸಂಪತ್ತಿನ ರೂಪಾಂತರ
ಒಂದು ಪ್ರದೇಶದ ಸಸ್ಯ ಸಂಪತ್ತು ಎಲ್ಲ ಕಾಲಕ್ಕೂ ಒಂದೇ ರೀತಿ ಇರುವುದಿಲ್ಲ. ಮನುಷ್ಯ ಹಾಗೂ ನೈಸರ್ಗಿಕ ಕಾರಣದಿಂದ ಬದಲಾಗುತ್ತದೆ. ನೆಲ್ಲಿ, ನಾಯಿ ತುಳಸಿ, ಕೊಟ್ಟೆ ಇತ್ಯಾದಿ ಈಗ ಅಳಿವಿನಂಚಿನಲ್ಲಿವೆ. ಇನ್ನೊಂದೆಡೆ ಕೃಷಿ, ಜಾನುವಾರು ಸಾಕಾಣಿಕೆ, ಹೊರಗಿನಿಂದ ತಂದ ಗೊಬ್ಬರ (ಜಾನುವಾರು, ಕೋಳಿ, ಕುರಿ ಗೊಬ್ಬರಗಳು) ಇತ್ಯಾದಿ ಮೂಲಕವೂ ಬೀಜದ ಮೂಲಕ ಹೊಸ ಸಸ್ಯಗಳು ಬರುತ್ತವೆ. ಹೀಗೆ ರೂಪಾಂತರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಆಯಾ ಕಾಲದ ದಾಖಲಾತಿ ಬಹಳ ಮುಖ್ಯವಾಗಿದೆ.
ಮಂಗಳೂರು: ನಿವೃತ್ತ ಶಿಕ್ಷಕ ಗಜಾನನ ವಝೆ ಮುಂದಾಳತ್ವದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಸ್ಯ ಸಂಪತ್ತಿನ ದಾಖಲೀಕರಣವು ಆರಂಭಗೊಂಡಿದ್ದು, ಈಗಾಗಲೇ 315ಕ್ಕೂ ಹೆಚ್ಚು ಪ್ರಭೇದಗಳನ್ನು ದಾಖಲಿಸಲಾಗಿದೆ. ಆಗಸ್ಟ್ 15ರಂದು ಪ್ರಕ್ರಿಯೆ ಆರಂಭಗೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.