ಮಂಗಳೂರು: ನಗರದ ಪಂಪ್‌ವೆಲ್‌ನ ವಸತಿಗೃಹ ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಸುರತ್ಕಲ್‌ನ ಜಾಯ್ಸನ್ ಯಾನೆ ಜೇಸನ್ (21), ಜೆಪ್ಪು ಬಪ್ಪಾಲ್‌ನ ಪ್ರಮೀತ್ ಡಿ (24), ವಾಮಂಜೂರಿನ ಕಾರ್ತಿಕ್ (21), ಪಚ್ಚನಾಡಿಯ ಪ್ರಜ್ವಲ್ (22), ದುರ್ಗೇಶ್ (22) ಬಂಧಿತರು.
ಈ ಕುರಿತು ಸೋಮವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ‘ಕೊಲೆಯಾದ ಧನುಷ್ ಪಚ್ಚನಾಡಿ, ಅ.15ರಂದು ಪಂಪ್‌ವೆಲ್ ಬಳಿಯ ವಸತಿಗೃಹದಲ್ಲಿ ಗೆಳೆಯರಾದ ಜಾಯ್ಸನ್, ಪ್ರಮೀತ್, ಕಾರ್ತಿಕ್, ಪ್ರಜ್ವಲ್ ಹಾಗೂ ದುರ್ಗೇಶ್ ಜತೆ ಪಾರ್ಟಿ ಮಾಡುತ್ತಿದ್ದರು. ಧನುಷ್ ಈ ಹಿಂದೆ ಗೆಳೆಯರ ಜತೆ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಪದಗಳನ್ನು ಬಳಸಿದ ಬಗ್ಗೆ ಉಳಿದವರಿಗೆ ಬೇಸರ ಇತ್ತು. ಅದನ್ನು ರಾಜಿ ಪಂಚಾಯ್ತಿ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ದುರ್ಗೇಶ್ ಮೂಲಕ ಧನುಷ್ ಅವರನ್ನೂ ಇತರರು ವಸತಿಗೃಹಕ್ಕೆ ಕರೆಸಿಕೊಂಡಿದ್ದರು. ಪರಸ್ಪರ ಮಾತುಕತೆಯ ವೇಳೆ ಜಗಳ ಉಂಟಾಗಿದೆ. ಜಗಳ ಹಲ್ಲೆಗೆ ತಿರುಗಿದೆ. ಈ ವೇಳೆ ಜಾಯ್ಸನ್ ತನ್ನಲ್ಲಿದ್ದ ಹರಿತವಾದ ಆಯುಧದಿಂದ ಧನುಷ್ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ನಂತರ ಆರೋಪಿಗಳು ಘಟನೆ ಸ್ಥಳದಿಂದ ಪರಾರಿಯಾಗಿದ್ದರು’ ಎಂದರು.
ಐವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಲ್ಲಿ ಜಾಯ್ಸನ್, ಪ್ರಮೀತ್ ಡಿ, ಕಾರ್ತಿಕ್ ಈ ಹಿಂದೆ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಇದ್ದರು.
ಮಂಗಳೂರು ನಗರದ ಪಂಪ್‌ವೆಲ್‌ನ ವಸತಿಗೃಹ ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.