ADVERTISEMENT

ಕಾರ್ಖಾನೆ ತ್ಯಾಜ್ಯದಿಂದ ಪರಿಸರ ಮಲಿನ

ಸಮುದ್ರಕ್ಕೆ ಸೇರುತ್ತಿರುವ ಹೊಲಸು: ಸ್ಥಳೀಯರ ಆರೋಪ

ಮೋಹನ್ ಕುತ್ತಾರ್
Published 14 ಅಕ್ಟೋಬರ್ 2021, 3:28 IST
Last Updated 14 ಅಕ್ಟೋಬರ್ 2021, 3:28 IST
ಕೋಟೆಪುರದ ಮೀನೆಣ್ಣೆ ತಯಾರಿಕಾ ಘಟಕದ ಪರಿಸರ
ಕೋಟೆಪುರದ ಮೀನೆಣ್ಣೆ ತಯಾರಿಕಾ ಘಟಕದ ಪರಿಸರ   

ಉಳ್ಳಾಲ: ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಮೀನಿನ ಎಣ್ಣೆ ತಯಾರಿಕಾ ಘಟಕಗಳಿಂದ ಸಮುದ್ರ ಹಾಗೂ ನದಿ ಮಾಲಿನ್ಯ ಹೆಚ್ಚುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

ಉಳ್ಳಾಲ ಮತ್ತು ಬೆಂಗ್ರೆ ಭಾಗಕ್ಕೆ ಬ್ರೇಕ್ ವಾಟರ್ ಹಾಕಿದ ನಂತರದ ದಿನಗಳಲ್ಲಿ ಉಳ್ಳಾಲದಲ್ಲಿ ಕಡಲ್ಕೊರೆತ ಆರಂಭವಾಯಿತು. ನಂತರ 1991ರ ಅವಧಿಯಲ್ಲಿ ಸಮುದ್ರ ಹಾಗೂ ನದಿ ಭಾಗ ಸೇರುವ ಕೋಟೆಪುರ ಪ್ರದೇಶದಲ್ಲಿ ಇದ್ದಂತಹ ಸುಣ್ಣದ ಗೂಡುಗಳು, ಮೀನು ಒಣಗಿಸುವ ಗೋದಾಮು ಹಾಗೂ ಮೀನಿನ ಎಣ್ಣೆ ತಯಾರಿಕಾ ಕಾರ್ಖಾನೆಗಳನ್ನು ತೆರವುಗೊಳಿಸಲಾಯಿತು. ಆ ಬಳಿಕ ಪ್ರದೇಶ ‘ಸಿಆರ್ ಝೆಡ್ -1’ ಎಂದು ಗುರುತಿಸಲಾಗಿತ್ತು. ಆದರೂ ಹಿಂದೆ ಇದ್ದಂತಹ ಸುಣ್ಣದ ಗೂಡು, ಒಣಮೀನಿನ ಗೋದಾಮುಗಳು ಮೀನಿನ ಎಣ್ಣೆ ತಯಾರಿಕಾ ಘಟಕಗಳಾಗಿ ಮಾರ್ಪಾಡಾದವು. ಮೀನು ಎಣ್ಣೆ ತಯಾರಿಸುವ 14 ಕಾರ್ಖಾನೆಗಳು ಆರಂಭವಾಗಿ ವಿಪರೀತವಾಗಿ ಮಾಲಿನ್ಯ ಆರಂಭವಾಯಿತು. ಇದರಿಂದಾಗಿ ಕೋಟೆಪುರ ಪ್ರದೇಶದಲ್ಲಿರುವ 200ರಿಂದ 300 ಮನೆಗಳಿಗೆ ಸಮಸ್ಯೆ ಆಗಿತ್ತು.

ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಪೊಡಿಮೋನು ಅವರು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಬಗ್ಗೆ ದೂರನ್ನು ದಾಖಲಿಸಿದ್ದರು. ಮೀನಿನ ಎಣ್ಣೆ ಕಾರ್ಖಾನೆ ಮಾಲೀಕರು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಸಮ್ಮುಖದಲ್ಲಿ ಇಟಿಪಿ (ಎನ್ವಿರಾನ್ ಮೆಂಟಲ್ ಟ್ರೀಟ್‍ಮೆಂಟ್ ಪ್ಲಾಂಟ್) ಸ್ಥಾಪಿಸುವ ವಿಶ್ವಾಸ ವ್ಯಕ್ತಪಡಿಸಿ, 14 ಮೀನಿನ ಕಾರ್ಖಾನೆಗಳಿಗೆ ಸುಮಾರು ₹ 40 ಲಕ್ಷ ವೆಚ್ಚದಲ್ಲಿ ಇಟಿಪಿ ಘಟಕ ಸ್ಥಾಪಿಸಿದರು.

ADVERTISEMENT

ಘಟಕ ಸ್ಥಾಪನೆ ಬಳಿಕ ನದಿ ಹಾಗೂ ಸಮುದ್ರ ಮಾಲಿನ್ಯ ನಿಯಂತ್ರಣಕ್ಕೆ ಬಂದಿತ್ತು. ಆದರೆ ಕ್ರಮೇಣ ಕಾರ್ಖಾನೆ ತ್ಯಾಜ್ಯ ಮತ್ತೆ ಸಮುದ್ರ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಆಗಿರುವ ಒಪ್ಪಂದದಂತೆ ಪರಿಸರ ಮಾಲಿನ್ಯ ತಡೆಯಲು ಕಾರ್ಖಾನೆಗಳಿರುವ ಪ್ರದೇಶದಲ್ಲಿ ನೀಲಗಿರಿ ಮರವನ್ನು ನೆಡಲು ಸೂಚಿಸಲಾಗಿತ್ತು. ಆದರೆ ಅದು ಪಾಲನೆಯಾಗಿಲ್ಲ. ಪ್ರತಿ ಕಾರ್ಖಾನೆಯಲ್ಲಿ ಸಕ್ ರಬ್ಬರ್ ಎನ್ನುವ ನಿಯಂತ್ರಕವನ್ನು ಅಳವಡಿಸಬೇಕಾಗಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ತಿಂಗಳಿಗೊಮ್ಮೆ ಭೇಟಿ ಕೊಟ್ಟು ಅದನ್ನು ಪರಿಶೀಲಿಸಿ ವರದಿ ಪಡೆಯಬೇಕಿತ್ತು. ಆದರೆ ಅದರ ಪಾಲನೆ ಆಗುತ್ತಿಲ್ಲ. ಕಾರ್ಖಾನೆಗಳಿಗೆ ನೀಡಿರುವ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಪಾಯವನ್ನು ಆಹ್ವಾನಿಸುವಂತಿದೆ ಎಂಬುದು ಅವರ ದೂರು.

‘ಕಾರ್ಖಾನೆಗಳಿಂದ ದುರ್ವಾಸನೆ ಬರುತ್ತಿಲ್ಲ. ಅಲ್ಲಿಗೆ ಮೀನು ಕೊಂಡೊಯ್ಯುವ ಮಾರ್ಗ ಮಧ್ಯೆ ವಾಹನ ಸವಾರರು ನೀರು ಚೆಲ್ಲುವುದರಿಂದ ಪರಿಸರವಿಡೀ ದುರ್ವಾಸನೆಯಿಂದ ಕೂಡಿರುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ, ನೀರು ಚೆಲ್ಲುವ ಕ್ರಮ ನಿಂತಿಲ್ಲ ಎಂದು ಮೊಗವೀರ ಪಟ್ಣದ ಮೀನುಗಾರ ಸಂತೋಷ ದೂರುತ್ತಾರೆ.

ಕಾರ್ಮಿಕರಿಗೆ ಬೇಕಿದೆ ಭದ್ರತೆ: 14 ಕಾರ್ಖಾನೆಗಳಲ್ಲಿ ಊರಿನ ಹಾಗೂ ಹೊರರಾಜ್ಯದ 500ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಲೆಯಿರುವ ಸಮೀಪವೇ ಬಾಯ್ಲರ್‌ಗಳನ್ನು ಇಡಲಾಗಿದೆ. ಸುರಕ್ಷತಾ ಕ್ರಮ ಅನುಸರಿಸುವ ಜತೆಗೆ ಕಾರ್ಮಿಕರಿಗೆ ಭದ್ರತೆ ನೀಡಬೇಕು ಎಂಬುದು ಕಾರ್ಮಿಕರ ಆಗ್ರಹವಾಗಿದೆ.

ಪ್ರಕರಣ ನ್ಯಾಯಾಲಯಕ್ಕೆ

ಮೀನಿನ ಎಣ್ಣೆ ತಯಾರಿಕಾ ಘಟಕಗಳಿಂದ ಆಗುತ್ತಿರುವ ಮಾಲಿನ್ಯದ ವಿರುದ್ಧ ಪಿಯುಸಿಎಲ್ ಕಾರ್ಯಕರ್ತ ಕಬೀರ್ ಉಳ್ಳಾಲ್ ಚೆನ್ನೈನ ಗ್ರೀನ್ ಟ್ರಿಬ್ಯುನಲ್ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2016ರಲ್ಲಿ ಕಾರ್ಖಾನೆಗಳು ಸಿಆರ್‌ಝೆಡ್ ವ್ಯಾಪ್ತಿಗೆ ಬರುವುದರಿಂದ ಹಾಗೂ ನೀಡಿರುವ ತನಿಖಾ ವರದಿಗಳಲ್ಲಿ ಮಾಲಿನ್ಯ ಸಾಬೀತಾಗಿರುವುದರಿಂದ ಕಾರ್ಖಾನೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿತ್ತು. ಆದರೆ ಕಾರ್ಖಾನೆಗಳ ಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ವ್ಯಾಜ್ಯ ನ್ಯಾಯಾಲಯದಲ್ಲಿದೆ.

ಸಾರಾಂಶ

ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಮೀನಿನ ಎಣ್ಣೆ ತಯಾರಿಕಾ ಘಟಕಗಳಿಂದ ಸಮುದ್ರ ಹಾಗೂ ನದಿ ಮಾಲಿನ್ಯ ಹೆಚ್ಚುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.