ಚಿಕ್ಕಜಾಜೂರು: ಸರ್ಕಾರಿ ಕಚೇರಿಯ ಕಟ್ಟಡವೆಂದರೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕೆಲಸ. ಆದರೆ, ಬಿ. ದುರ್ಗ ಹೋಬಳಿಯ ನಾಡ ಕಚೇರಿಯಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೇ, ಅಧಿಕಾರಿಗಳು ಹಾಗೂ ಸಾರ್ವಜನಿಕರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.
ಬಿ. ದುರ್ಗವು ಹೋಬಳಿಯ ಕೇಂದ್ರವಾಗಿದೆ. 1942-43ರಲ್ಲಿ ಗ್ರಾಮದ ಪಟ್ಟಣ ಶೆಟ್ಟಿ ಗೌರಮ್ಮನವರ ಸ್ಮರಣಾರ್ಥ ನಿರ್ಮಿಸಿದ್ದ ಸರ್ಕಾರಿ ಆಸ್ಪತ್ರೆಯನ್ನು ಆಗಿನ ಆರೋಗ್ಯ ಸಚಿವ ಎಚ್.ಬಿ. ಗುಂಡಪ್ಪ ಗೌಡ್ರು ಉದ್ಘಾಟನೆ ಮಾಡಿದ್ದರು. ಆರೇಳು ವರ್ಷಗಳ ಹಿಂದೆ ಹೊಸ ಕಟ್ಟಡಕ್ಕೆ ಈ ಆಸ್ಪತ್ರೆಯನ್ನು ಸ್ಥಳಾಂತರ ಮಾಡಲಾಯಿತು. ಹಳೇ ಕಟ್ಟಡಕ್ಕೆ 2010–11ನೇ ಸಾಲಿನಲ್ಲಿ ಹೋಬಳಿ ಕೇಂದ್ರವಾದ ಬಿ. ದುರ್ಗದ ನಾಡ ಕಚೇರಿಯನ್ನು ಸ್ಥಳಾಂತರಿಸಲಾಯಿತು.
ಕಚೇರಿಯ ಉಪಯೋಗಕ್ಕಾಗಿ ಸಣ್ಣಪುಟ್ಟ ದುರಸ್ತಿಗಳನ್ನು ಆಗ ಮಾಡಿಸಲಾಗಿತ್ತು. ಆದರೆ ಇಲಾಖೆಯ ದಾಖಲೆಗಳನ್ನು ಸಂಗ್ರಹಿಸಿ ಇಡುವ ಕೊಠಡಿ, ಕಂಪ್ಯೂಟರ್ ಕೊಠಡಿ ಹಾಗೂ ಅಧಿಕಾರಿಗಳು ಇರುವ ಕೊಠಡಿ ಸೇರಿ ಎಲ್ಲ ಕೋಠಡಿಗಳ ಚಾವಣಿಗಳೂ ಮಳೆ ಬಂದಾಗ ಸೋರುತ್ತಿವೆ. ಕೊಠಡಿಯಲ್ಲಿ ಇಡಲಾಗಿರುವ ಎಲ್ಲ ದಾಖಲೆಗಳೂ ನೆನೆದು ಹಾಳಾಗುತ್ತಿವೆ. ಕೆಲವು ಕೊಠಡಿಗಳಿಗೆ ಹಾಕಲಾಗಿದ್ದ ಕಿಟಕಿಗಳಿಗೆ ಬಾಗಿಲುಗಳೇ ಇಲ್ಲ. ರಾತ್ರಿ ವೇಳೆ ಹಾಗೂ ಜನ ಸಂಚಾರ ಇಲ್ಲದ ಸಮಯದಲ್ಲಿ ಹಾವು ಮತ್ತಿತರ ವಿಷಜಂತುಗಳು ಕಚೇರಿಯ ಒಳಗೆ ಬರುವುದು ಸಾಮಾನ್ಯವಾಗಿದೆ. ಕಚೇರಿಯ ಬಾಗಿಲು ತೆರೆದಾಗ ಹಾವುಗಳನ್ನು ಕಂಡ ಅಧಿಕಾರಿಗಳು, ಸಾರ್ವಜನಿಕರು ಭಯಭೀತರಾಗುವ ಸಂದರ್ಭ ಹಲವು ಬಾರಿ ನಡೆದಿದೆ.
‘ಕಚೇರಿಯ ಆವರಣದಲ್ಲಿ ಶೌಚಾಲಯ ಇಲ್ಲದಿರುವುದರಿಂದ, ಇಲ್ಲಿಯ ಪುರುಷ ಹಾಗೂ ಮಹಿಳಾ ಅಧಿಕಾರಿಗಳು, ದೂರದ ಊರುಗಳಿಂದ ವಿವಿಧ ದಾಖಲೆಗಳನ್ನು ಪಡೆಯಲು ಬರುವ ಸಾರ್ವಜನಿಕರು ಶೌಚಕ್ಕಾಗಿ ಹಳೆಯ ಗೋಡೆ ಅಥವಾ ಬೇಲಿ ಸಾಲುಗಳಿಗೆ ಮೊರೆ ಹೋಗುವ ಸ್ಥಿತಿ ಇದೆ’ ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರು ತೋಡಿಕೊಂಡರು.
ವಿದ್ಯುತ್, ಅಂತರ್ಜಾಲ ಸಮಸ್ಯೆ ಕಾಯಂ: ಕಚೇರಿ ಆರಂಭವಾಗಿ ಹತ್ತು ವರ್ಷ ಕಳೆದಿದ್ದರೂ, ಕಚೇರಿಗೆ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ಸಾರ್ವಜನಿಕರು ಹೈರಾಣಾಗುವಂತಾಗಿದೆ. ಹಿಂದೆ ಚಿತ್ರದುರ್ಗದ ಪ್ಲಾಸಾ ಹೈಪವರ್ ಇಂಡಸ್ಟ್ರೀಸ್ ಎಂಬ ಖಾಸಗಿ ಕಂಪನಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲು ಟೆಂಡರ್ ನೀಡಲಾಗಿತ್ತು. ಕಂಪನಿಯವರು ಸೋಲಾರ್ ಬೋರ್ಡ್ ಹಾಗೂ ಯುಪಿಎಸ್‌ಗಳನ್ನು ನೀಡಿದ್ದು, ಅವುಗಳು ಆಗಾಗ ಕೆಟ್ಟು ಹೋಗುತ್ತಿದ್ದವು. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಮತ್ತೆ ಯುಪಿಎಸ್ ಕೆಟ್ಟು ಹೋದಾಗ, ಅದನ್ನು ದುರಸ್ತಿ ಮಾಡಿ, ಎರಡು ದಿನಗಳೊಳಗೆ ಕೊಡುವುದಾಗಿ ಹೇಳಿ ತೆಗೆದುಕೊಂಡು ಹೋದವರು ಇದುವರೆಗೂ ವಾಪಸ್ ಹಿಂತಿರುಗಿಸಿಲ್ಲ. ಈಗಿರುವ ಯುಪಿಎಸ್ ಒಂದರಿಂದ ಕೆಲಸ ನಡೆಯುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೇ ಕೆಲಸಗಳು ಸಂಪೂರ್ಣವಾಗಿ ಸ್ಥಗಿತವಾಗುತ್ತವೆ. ಅಲ್ಲದೇ ಅಂತರ್ಜಾಲದ ಸಮಸ್ಯೆಯಿಂದಾಗಿ ಪಹಣಿ, ಪಿಂಚಣಿ, ಜನನ–ಮರಣ ಮತ್ತಿತರ ದಾಖಲೆಗಳನ್ನು ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ನೀಡಲಾಗದೇ, ಅವರಿಂದ ನಿಂದನೆಯ ಮಾತುಗಳನ್ನು ನಿತ್ಯ ಕೇಳುವಂತಾಗಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.
ಇನ್ನಾದರೂ, ಜಿಲ್ಲಾಡಳಿತ ತಕ್ಷಣ ನಾಡ ಕಚೇರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ರಂಗನಾಥ್, ಜಯಪ್ಪ, ಪ್ರಶಾಂತ್ ಕುಮಾರ್, ನಾಗರಾಜ್ ಆಗ್ರಹಿಸಿದ್ದಾರೆ.
ಸ್ಪಂದಿಸದ ಬೆಸ್ಕಾಂ
‘ಕಚೇರಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡುವಂತೆ ಬೆಂಗಳೂರಿನ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದ ಕಚೇರಿ, 2020ರ ಜನವರಿಯಲ್ಲಿ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದು, ಅದರ ಆದೇಶದ ಪ್ರತಿಯನ್ನು ತಾಲ್ಲೂಕು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿಗೆ 2020ರ ಫೆಬ್ರುವರಿ 13ರಂದು ಕಳುಹಿಸಲಾಗಿತ್ತು. ನಾವು ಸಹ ಹೊಳಲ್ಕೆರೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ನಿರಂತರ ಜ್ಯೋತಿ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಿ, ಇಲ್ಲಿ ಆಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ 2021ರ ಫೆಬ್ರುವರಿಯಲ್ಲಿ ಪತ್ರ ಬರೆದಿದ್ದೆವು. ಆದರೆ ಬೆಸ್ಕಾಂ ಅಧಿಕಾರಿಗಳು ಇದುವರೆಗೂ ಸ್ಪಂದಿಸಿಲ್ಲ’ ಎಂದು ಉಪತಹಶೀಲ್ದಾರ್ ಎನ್. ಸುನಿಲ್ ರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬಿ. ದುರ್ಗ: ಕನಿಷ್ಠ ಸೌಕರ್ಯಗಳೇ ಇಲ್ಲದ ನಾಡ ಕಚೇರಿ: ಅಭಿವೃದ್ಧಿಗೆ ಗಮನ ಹರಿಸದ ಜಿಲ್ಲಾಡಳಿತ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.