ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕ್ರಿಶ್ಚಿಯನ್ ಕುಟುಂಬಗಳು ಶಾಸಕ ಗೂಳಿಹಟ್ಟಿ ಡಿ.ಶೇಖರ್ ನೇತೃತ್ವದಲ್ಲಿ ಭಾನುವಾರ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿವೆ.
ಹಾಲುರಾಮೇಶ್ವರ ಕ್ಷೇತ್ರದ ಹಾಲುರಾಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಎಂಟು ಜನರು ಹಿಂದೂ ಧರ್ಮಕ್ಕೆ ಮರಳಿದರು. ಪುರುಷರಿಗೆ ಕೇಸರಿ ಶಲ್ಯ ಹಾಗೂ ಮಹಿಳೆಯರಿಗೆ ಸೀರೆ ನೀಡುವ ಮೂಲಕ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು. ಪೂಜೆ ಸಲ್ಲಿಸುವ ವೇಳೆ ಗೌರಮ್ಮ ಎಂಬುವರು ಕಣ್ಣೀರಿಟ್ಟರು.
ಬಲ್ಲಾಳಸಮುದ್ರದ ಮಾರುತಿ ನಗರದ ನಿವಾಸಿಗಳಾದ ಅಣ್ಣಪ್ಪ, ನಾರಾಯಣಪ್ಪ, ಗೌರಮ್ಮ ಹಾಗೂ ಮಾರಪ್ಪ ಕುಟುಂಬಗಳು ನಾಲ್ಕು ವರ್ಷಗಳ ಹಿಂದೆ ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದವು. ಹೊಸದುರ್ಗ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮತಾಂತರದ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕ ಗೂಳಿಹಟ್ಟಿ ಶೇಖರ್, ಮರು ಮತಾಂತರಕ್ಕೆ ಇವರನ್ನು ಮನವೊಲಿಸಿದ್ದಾರೆ.
‘ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದ ಹಿಂದೂ ಧರ್ಮಿಯರ ಘರ್ ವಾಪಾಸಿ ಆರಂಭವಾಗಿದೆ. ನನ್ನ ತಾಯಿಯಿಂದಲೇ ಇದು ಶುರುವಾಗಿದೆ. ತಾಯಿ ಹಿಂದೂ ಧರ್ಮಕ್ಕೆ ಮರಳಿದ್ದು, ನನ್ನೊಂದಿಗೆ ವಾಸವಾಗಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಲು ಆಸಕ್ತಿ ತೋರಿವೆ. ಹಂತ ಹಂತವಾಗಿ ಎಲ್ಲರನ್ನೂ ಮರು ಮತಾಂತರ ಮಾಡಲಾಗುವುದು’ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
‘ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಯುತ್ತಿಲ್ಲವೆಂದು ಸಮರ್ಥನೆ ಮಾಡಿಕೊಂಡವರಿಗೆ ಸಂದೇಶ ರವಾನೆಯಾಗಿದೆ. ಹಿಂದೂ ಧರ್ಮದಲ್ಲಿ ಹುಟ್ಟಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರ ಬೆದರಿಕೆಗೆ ಹೆದರುವುದಿಲ್ಲ. ಆದರೆ, ಮೂಲತಃ ಕ್ರಿಶ್ಚಿಯನ್ ಧರ್ಮದಲ್ಲಿರುವವರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದರು.
ಆರೋಗ್ಯ ಸುಧಾರಣೆಗೆ ಮತಾಂತರ
ಹದಗೆಟ್ಟಿದ್ದ ತಂದೆಯ ಆರೋಗ್ಯ ಸುಧಾರಣೆಗೆ ತಾಯಿ ಮತ್ತು ತಂಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಬ್ಬರು ಹಿಂದೂ ಧರ್ಮಕ್ಕೆ ಮರಳಿದ್ದರಿಂದ ನೆಮ್ಮದಿ ಸಿಕ್ಕಿದೆ ಎಂದು ಬಲ್ಲಾಳಸಮುದ್ರ ಗ್ರಾಮದ ಪ್ರದೀಪ್ ಅಭಿಪ್ರಾಯ ಹಂಚಿಕೊಂಡರು.
‘ತಾಯಿ ಮತ್ತು ತಂಗಿ ಚರ್ಚ್‌ಗೆ ಹೋಗುತ್ತಿದ್ದರು. ತಂದೆ ಮತ್ತು ನಾನು ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದೆವು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರೂ ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಪ್ರಾರ್ಥನೆ ಮಾಡಿದರೆ ಒಳಿತಾಗುತ್ತದೆ ಎಂದವರು ಕೈಚೆಲ್ಲಿದರು’ ಎಂದು ಬೇಸರ ಹೊರಹಾಕಿದರು.
***
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿರುವವರನ್ನು ಹಿಂದೂ ಧರ್ಮಕ್ಕೆ ಮರಳಿ ತರುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ರಾಜಕೀಯ ಉದ್ದೇಶಕ್ಕೆ ಖಂಡಿತ ಬಳಸಿಕೊಳ್ಳುವುದಿಲ್ಲ.
- ಗೂಳಿಹಟ್ಟಿ ಡಿ.ಶೇಖರ್, ಶಾಸಕ, ಹೊಸದುರ್ಗ
ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕ್ರಿಶ್ಚಿಯನ್ ಕುಟುಂಬಗಳು ಶಾಸಕ ಗೂಳಿಹಟ್ಟಿ ಡಿ.ಶೇಖರ್ ನೇತೃತ್ವದಲ್ಲಿ ಭಾನುವಾರ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.