ಮೊಳಕಾಲ್ಮುರು: ಪೌಷ್ಟಿಕ ಅಂಶಗಳನ್ನು ಹೊಂದಿದೆ ಎನ್ನಲಾಗುವ ಕತ್ತೆ ಹಾಲು ಮಾರಾಟ 2 ವರ್ಷಗಳ ನಂತರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮತ್ತೆ ಕಾಣ ಸಿಗುತ್ತಿದೆ.
ಮಗು ಹುಟ್ಟಿದ ತಕ್ಷಣ ಕತ್ತೆ ಹಾಲು ಕುಡಿಸುವುದು ಹಳ್ಳಿಗಳಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ, ಜಾಗತೀಕರಣ ಹೆಚ್ಚಳದ ಜೊತೆಗೆ, ಆಸ್ಪತ್ರೆಗಳಲ್ಲಿ ಹೆರಿಗೆ ಆಗುವುದು ಆರಂಭವಾದ ನಂತರ ಈ ಹಾಲು ಕುಡಿಸುವುದು ಕ್ಷೀಣಿಸಿತ್ತು. ಇದರ ಜತೆಗೆ ಕತ್ತೆಗಳ ಸಾಕಣೆ ಸಹ ಕಡಿಮೆ ಆಗುತ್ತಿರುವುದು ಹಾಲು ಲಭ್ಯತೆಯನ್ನು ಕಡಿಮೆ ಮಾಡಿಸಿತ್ತು.
4–5 ವರ್ಷಗಳಿಂದ ತಮಿಳುನಾಡಿನವರು ಕತ್ತೆಗಳನ್ನು ಗ್ರಾಮಗಳಿಗೆ ಕರೆ ತಂದು ಹಾಲು ಮಾರಾಟ ಮಾಡುವುದು ಅಲ್ಲಲ್ಲಿ ಕಂಡುಬಂದಿತ್ತು. ಬೀದಿಗಳಲ್ಲಿ ಕೂಗುತ್ತ ಹಾಲು ಮಾರಾಟ ಮಾಡುತ್ತಿದ್ದರು. ಕೋವಿಡ್ ಸೋಂಕು ಕಂಡುಬಂದ ನಂತರ ಇದರ ಮಾರಾಟ ಪೂರ್ಣ ನಿಂತು ಹೋಗಿತ್ತು.
ಬುಧವಾರ ತಾಲ್ಲೂಕಿನ ಬಿ.ಜ.ಕೆರೆ, ಕೊಂಡ್ಲಹಳ್ಳಿಯಲ್ಲಿ ಕತ್ತೆ ಹಾಲು ಮಾರಾಟ ಮಾಡಲಾಗುತ್ತಿತ್ತು. ಮಾರಾಟ ಮಾಡುತ್ತಿದ್ದ ಮಣಿಯನ್ನು ‘ಪ್ರಜಾವಾಣಿ’ ಪ್ರತಿನಿಧಿ ಮಾತನಾಡಿಸಿದಾಗ, ‘ನನ್ನ ಹೆಸರು ಮಣಿ, ತಮಿಳುನಾಡು ಮೂಲದವನು. ನನ್ನ ಹಾಗೆ 18 ಜನರು ಕತ್ತೆ ಹಾಲು ಮಾರಾಟ ಮಾಡುತ್ತಿದ್ದಾರೆ. ಎಲ್ಲರೂ ತಮಿಳುನಾಡಿನವರು. ಕೋವಿಡ್ ಎದುರಾದ ನಂತರ ನಮ್ಮ ರಾಜ್ಯಕ್ಕೆ ವಾಪಸ್ ಹೋಗಿದ್ದೆವು. 2 ವರ್ಷಗಳ ನಂತರ ಮತ್ತೆ ವ್ಯಾಪಾರ ಆರಂಭಿಸಿದ್ದೇವೆ’
ಎಂದರು.
‘ಕತ್ತೆ ಹಾಲು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು, ಜೀರ್ಣಶಕ್ತಿ ಹೆಚ್ಚಿಸುತ್ತದೆ. ಪೌಷ್ಟಿಕ ಅಂಶಗಳನ್ನು ಹೊಂದಿದೆ. ಒಂದು ಒಳಲೆ ಹಾಲಿಗೆ ₹ 50, ಒಂದು
ಕಪ್ ಹಾಲಿಗೆ ₹ 100 ತೆಗೆದುಕೊಳ್ಳುತ್ತೇವೆ. ಮನೆ ಬಾಗಿಲಿನಲ್ಲಿ ಹಾಲು ಕರೆದು ಕೊಡುತ್ತೇವೆ. ನಾವು ಯಾರಿಗೂ ಬಲವಂತ ಮಾಡುವುದಿಲ್ಲ. ಇಷ್ಟಪಟ್ಟು ಕರೆದು ಹಾಲು ಕೇಳಿದರೆ ಮಾತ್ರ ಕರೆದು ಕೊಡುತ್ತೇವೆ ಅಷ್ಟೇ’ ಎಂದು ಮಣಿ
ಹೇಳಿದರು.
..............
ನಿತ್ಯ 5-6 ಒಳಲೆಯಷ್ಟು ಹಾಲು ಸಿಗುತ್ತದೆ. ಇದರಿಂದ ಹೊಟ್ಟೆಪಾಡು ನಡೆಯುತ್ತಿದೆ. ಹಳ್ಳಿಗಳಲ್ಲಿ ಹಾಲು ವ್ಯಾಪಾರ ಮಾಡಬಹುದು. ಪಟ್ಟಣಗಳಲ್ಲಿ ತುಸು ಕಷ್ಟ.
–ಮಣಿ, ಕತ್ತೆ ಮಾಲೀಕ
ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು: ಪೌಷ್ಟಿಕ ಅಂಶಗಳನ್ನು ಹೊಂದಿದೆ ಎನ್ನಲಾಗುವ ಕತ್ತೆ ಹಾಲು ಮಾರಾಟ 2 ವರ್ಷಗಳ ನಂತರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕಾಣಸಿಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.