ಚಿತ್ರದುರ್ಗ: ಕೋವಿಡ್ ಲಸಿಕೀಕರಣಕ್ಕೆ 2022ರ ಜನವರಿ 16ಕ್ಕೆ ವರ್ಷ ತುಂಬಿದರು ಸಹ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮೊದಲ ಡೋಸ್ ಶೇ 100ರಷ್ಟು ಪ್ರಗತಿ ಸಾಧಿಸಿಲ್ಲ. ‘ಕೊರೊನಾ- ಓಮೈಕ್ರಾನ್’ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಸಂಕಷ್ಟದ ಸ್ಥಿತಿಯಲ್ಲಿ ಗಡಿ ತಾಲ್ಲೂಕಿನ ಆರೋಗ್ಯ ಸ್ಥಿತಿ ಶೋಚನೀಯವಾಗಿದೆ.
ಕಳೆದೊಂದು ವರ್ಷದಿಂದ ಆರೋಗ್ಯ ಇಲಾಖೆ ಸಿಬ್ಬಂದಿಯ ನಿರಂತರ ಶ್ರಮದಿಂದಾಗಿ ಮೊಳಕಾಲ್ಮುರಿನಲ್ಲಿ ಲಸಿಕೆಯ ಮೊದಲ ಡೋಸ್ ಶೇ 64 ಹಾಗೂ ಎರಡನೇ ಡೋಸ್ ಶೇ 38ರಷ್ಟು ಸಾಧನೆಯಾಗಿದೆ. ನಲವತ್ತೈದು ವರ್ಷ ಮೇಲಿನವರು ಲಸಿಕೆ ಹಾಕಿಸಿ
ಕೊಳ್ಳಲು ಹಿಂಜರಿಯುತ್ತಿರುವುದೇ ಇದಕ್ಕೆ ಪ್ರಮುಖ
ಕಾರಣವಾಗಿದೆ.
ಜಿಲ್ಲೆಯಲ್ಲಿ 2021ರ ಜನವರಿ 16ರಿಂದ ಲಸಿಕಾಕರಣಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಸರ್ಕಾರದ ಮಾರ್ಗಸೂಚಿಯಂತೆ ಹಂತ-ಹಂತವಾಗಿ ನಾಲ್ಕು ಜನರ 343 ತಂಡ ಲಸಿಕೆ ಕಾರ್ಯದಲ್ಲಿ ನಿರತವಾಗಿವೆ. ಈ ವರೆಗೆ ಶೇ 99.63ರಷ್ಟು ಮೊದಲ ಹಾಗೂ ಶೇ 75ರಷ್ಟು ಎರಡನೇ ಡೋಸ್ ಪಡೆದಿದ್ದಾರೆ.
ಜಿಲ್ಲೆಯಲ್ಲಿ 15 ವರ್ಷ ಮೇಲಿನವರು ಒಟ್ಟು 13,35,334 ರಷ್ಟು ಜನರಿದ್ದಾರೆ. ಅದರಲ್ಲಿ 13,03,325 ರಷ್ಟು ಜನ ಮೊದಲ ಡೋಸ್ ಪೂರ್ಣಗೊಳಿಸಿದ್ದಾರೆ. ಮೊದಲ ಮತ್ತು ಎರಡನೇ ಡೋಸ್‌ಗೆ 84 ದಿನಗಳ ಕಾಲಾವಕಾಶ ಇರುವುದರಿಂದ 9,99,243 ಜನ ಲಸಿಕೆ
ಪಡೆದಿದ್ದಾರೆ.
‘ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆಯಿರಿ’ ಎಂದು ಆರೋಗ್ಯ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಆದರೂ 32,009ರಷ್ಟು ಜನ ಮೊದಲ ಡೋಸ್ ಪಡೆದಿಲ್ಲ.
ಮೂರನೇ ಅಲೆಯ ಭೀತಿಯಿಂದ 15ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದ್ದು ಜಿಲ್ಲೆಯಲ್ಲಿ ಶೇ 58ರಷ್ಟು ಪ್ರಗತಿ ಕಂಡಿದೆ. ಅದರಲ್ಲಿ ಚಿತ್ರದುರ್ಗ ತಾಲ್ಲೂಕು ಶೇ 72 ರಷ್ಟು ಸಾಧನೆ ಮಾಡಿದ್ದರೆ, ಚಳ್ಳಕೆರೆ ಶೇ 51, ಹಿರಿಯೂರು ಶೇ 56, ಹೊಳಲ್ಕೆರೆ ಶೇ 57, ಹೊಸದುರ್ಗ ಶೇ 50 ಹಾಗೂ ಮೊಳಕಾಲ್ಮುರು ಶೇ 56ರಷ್ಟು ಪ್ರಗತಿ ಕಂಡಿದೆ.
‘ಎರಡನೇ ಅಲೆಯಲ್ಲಿ ಆದ ಸಾವು–ನೋವು ಮೂರನೇ ಅಲೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸಿದ್ದೇವೆ. ಲಸಿಕೆಯ ವಿಚಾರದಲ್ಲಿ ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅವರಿಗೆ ಸೋಂಕಿನ ತೀವ್ರತೆ ಅರ್ಥವಾಗುತ್ತಿಲ್ಲ. ಅಕ್ಷರಸ್ಥರೇ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ’ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.
ಚಳ್ಳಕೆರೆ ಮತ್ತು ಮೊಳಕಾಲ್ಮುರಿನ ಗ್ರಾಮಗಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಖುದ್ದು ಭೇಟಿ ನೀಡಿ ಜನರ ಮನವೊಲಿಸಿದ ಪರಿಣಾಮವಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ ಮೊದಲ ಡೋಸ್ ಶೇ 100 ಹಾಗೂ ಎರಡನೇ ಡೋಸ್ ಶೇ 67, ಮೊಳಕಾಲ್ಮುರಿನಲ್ಲಿ ಮೊದಲ ಡೋಸ್ ಶೇ 64 ಹಾಗೂ ಎರಡನೇ ಡೋಸ್ ಶೇ 38 ರಷ್ಟಿದೆ. ಲಸಿಕಾಕರಣದ ಆರಂಭದಲ್ಲಿಯ ಜಿಲ್ಲೆಯ ವೇಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗವೇ ಆರೋಗ್ಯ ಇಲಾಖೆಗೆ ಸವಾಲಾಗಿದೆ.
..................
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಲಸಿಕೆ ಪ್ರಮಾಣ ಕಡಿಮೆ ಇದೆ. ಲಸಿಕೆ ಹೆಚ್ಚಳಕ್ಕೆ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಐದು ಸಂಚಾರ ತಂಡ ಹಾಗೂ 31 ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ ನೀಡಲಾಗುವುದು.
ಡಾ.ರಂಗನಾಥ್, ಜಿಲ್ಲಾ ಆರೋಗ್ಯಾಧಿಕಾರಿ
.............
‘ಹೊಲ, ಕಣಕ್ಕೆ ಹೋಗಿದ್ದೇವೆ’
‘ಲಸಿಕೆ ವಿಚಾರದಲ್ಲಿ ಇಡೀ ಜಿಲ್ಲೆಯದೇ ಒಂದು ವರಸೆಯಾದರೆ, ಮೊಳಕಾಳಲ್ಮುರು, ಚಳ್ಳಕೆರೆಯದ್ದು ಮತ್ತೊಂದು ವರಸೆ. ಈ ಎರಡು ತಾಲ್ಲೂಕಿನಲ್ಲಿ ಹೊಲ, ಕಣ, ದೇವಸ್ಥಾನ, ಕೆರೆಯಂಗಳಕ್ಕೆ ಹೋಗಿ ಜನರ ಮನವೊಲಿಸಿ ಲಸಿಕೆ ಹಾಕಿದ್ದೇವೆ’ ಎಂದು ಸಾಹಸಗಾಥೆ ತೆರೆದಿಟ್ಟರು ಲಸಿಕಾ ಸಿಬ್ಬಂದಿ.
‘ಲಸಿಕೆ ಹಾಕಿಸಿಕೊಂಡರೆ ಕೈ, ಕಾಲು ಸ್ವಾಧೀನ ಕಳೆದುಕೊಳ್ಳುತ್ತವೆ’ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಮೊದಲ ಡೋಸ್ ಲಸಿಕೆ ಪಡೆದು ಜ್ವರ, ಸುಸ್ತು ಕಾಣಿಸಿಕೊಂಡರೆ ಇನ್ನಷ್ಟು ಹಿಂಜರಿಕೆ ಮಾಡಿಕೊಳ್ಳುವ ಪ್ರಸಂಗಗಳನ್ನು ಸಿಬ್ಬಂದಿ ಕಂಡಿದ್ದಾರೆ. ಗ್ರಾಮೀಣರ ಮನವೊಲಿಸಿ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ತಂಡ ನಿರಂತರವಾಗಿ ಮಾಡುತ್ತಿದೆ.
ಚಿತ್ರದುರ್ಗ: ಕೋವಿಡ್ ಲಸಿಕೀಕರಣಕ್ಕೆ 2022ರ ಜನವರಿ 16ಕ್ಕೆ ವರ್ಷ ತುಂಬಿದರು ಸಹ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮೊದಲ ಡೋಸ್ ಶೇ 100ರಷ್ಟು ಪ್ರಗತಿ ಸಾಧಿಸಿಲ್ಲ. ‘ಕೊರೊನಾ- ಓಮೈಕ್ರಾನ್’ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಸಂಕಷ್ಟದ ಸ್ಥಿತಿಯಲ್ಲಿ ಗಡಿ ತಾಲ್ಲೂಕಿನ ಆರೋಗ್ಯ ಸ್ಥಿತಿ ಶೋಚನೀಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.