ADVERTISEMENT

ಶರಣ ಸಂಸ್ಕೃತಿ ಉತ್ಸವದಲ್ಲಿ ಭಜನೆ: ಹಾವೇರಿ ಜಿಲ್ಲೆ ಪ್ರಥಮ

ಶರಣ ಸಂಸ್ಕೃತಿ ಉತ್ಸವದಲ್ಲಿ ಭಜನೆಗೆ ಪರವಶರಾದ ಬಸವ ಅನುಯಾಯಿಗಳು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 7:15 IST
Last Updated 11 ಅಕ್ಟೋಬರ್ 2021, 7:15 IST
ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಭಾನುವಾರ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಹಾವೇರಿಯ ಚನ್ನೆಗೌಡ ಮತ್ತು ಸಂಗಡಿಗರು ಉತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಪಡೆದುಕೊಂಡರು
ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಭಾನುವಾರ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಹಾವೇರಿಯ ಚನ್ನೆಗೌಡ ಮತ್ತು ಸಂಗಡಿಗರು ಉತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಪಡೆದುಕೊಂಡರು   

ಚಿತ್ರದುರ್ಗ: ಭಕ್ತಿ ಎಂಬ ಲೋಕಕ್ಕೆ ಕರೆದೊಯ್ಯುವ ಭಜನೆ ಕೆಲ ಕ್ಷಣ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದೇ ರೀತಿ ಎರಡು ಗಂಟೆವರೆಗೂ ಬಸವ ಅನುಯಾಯಿಗಳನ್ನು ಭಜನಾ ತಂಡಗಳು ಪರವಶ ಮಾಡಿಕೊಂಡವು.

ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಗಿಯ ಶಾಂತವೀರಸ್ವಾಮಿ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಭಜನಾ ಸ್ಪರ್ಧೆ’ ನೆರೆದಿದ್ದವರನ್ನು ಸೆಳೆಯುವಲ್ಲಿ ಸಫಲವಾಯಿತು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿಯ ಬಸವೇಶ್ವರ ಭಜನಾ ಕಲಾ ತಂಡದ ಚನ್ನೆಗೌಡ ಮತ್ತು ಸಂಗಡಿಗರು ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ
₹ 15 ಸಾವಿರ ನಗದು, ಪಾರಿತೋಷಕದೊಂದಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡರು.

ADVERTISEMENT

ಭಜನೆಯಿಂದ ಶಾಂತಿ, ನೆಮ್ಮದಿ: ನೇತೃತ್ವವಹಿಸಿದ್ದ ಚಿಗರಹಳ್ಳಿ ಮರುಳಶಂಕರದೇವರ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ, ‘ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಮನಸು ಶುದ್ಧೀಕರಿಸಿಕೊಳ್ಳಲು ಭಜನೆಯಿಂದ ಸಾಧ್ಯವಿದೆ. ಭಜನೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಕಲೆ ಉಳಿಯಲು ಮುರುಘಾಮಠ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಚಾರ’ ಎಂದರು.

‘ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ ಎಂಬುದಕ್ಕೆ ಇಂತಹ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದ ಅವರು, ಪ್ರಸ್ತುತ ದಿನಗಳಲ್ಲಿ ಭಜನೆ ಕುರಿತು ಆಸಕ್ತಿ ಕಡಿಮೆ ಆಗುತ್ತಿದೆ. ಈ ಕಲೆಯ ಪುನಶ್ಚೇತನಕ್ಕೆ ಪ್ರೋತ್ಸಾಹದ ಅಗತ್ಯ ತುಂಬಾ ಇದೆ’ ಎಂದು ಅಭಿಪ್ರಾಯಪಟ್ಟರು.

ಅಸಿಸ್ಟೆಂಟ್ ಕಮಿಷನರ್ ಚಂದ್ರಯ್ಯ, ‘ಭಜನೆ ದೇವರನ್ನು ಸ್ಮರಿಸುವ ಕಲೆಯಾಗಿ ಹಳ್ಳಿಗಳಲ್ಲಿ ಹಿಂದೆಲ್ಲಾ
ಪ್ರಚಲಿತದಲ್ಲಿತ್ತು. ಆದರೆ, ಕಾಲಕ್ರಮೇಣ ನಗರ, ಪಟ್ಟಣಕ್ಕೂ ವಿಸ್ತಾರವಾಯಿತು. ಇಂತಹ ಕಲೆಯನ್ನು ಪೋಷಿಸಿ, ಬೆಳೆಸಿದಾಗ ಮಾತ್ರ ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಯಲು ಸಾಧ್ಯ’ ಎಂದರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ಇದ್ದರು.

ಸಾರಾಂಶ

ಚಿತ್ರದುರ್ಗ: ಭಕ್ತಿ ಎಂಬ ಲೋಕಕ್ಕೆ ಕರೆದೊಯ್ಯುವ ಭಜನೆ ಕೆಲ ಕ್ಷಣ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದೇ ರೀತಿ ಎರಡು ಗಂಟೆವರೆಗೂ ಬಸವ ಅನುಯಾಯಿಗಳನ್ನು ಭಜನಾ ತಂಡಗಳು ಪರವಶ ಮಾಡಿಕೊಂಡವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.