ADVERTISEMENT

ಚಿಕ್ಕಮಗಳೂರು | ಮೊಬೈಲ್‌ ಟವರ್‌ ಅಳವಡಿಕೆ; ನಂಬಿಸಿ ವಂಚನೆ

₹ 1 ಲಕ್ಷ ಜಮೆ: ಸಿಇಎನ್‌ ಠಾಣೆಯಲ್ಲಿ ದೂರು ದಾಖಲು

ಕ್ಯಾಂಪಸ್‌ ಕಲರವ
Published 10 ಅಕ್ಟೋಬರ್ 2021, 7:17 IST
Last Updated 10 ಅಕ್ಟೋಬರ್ 2021, 7:17 IST
ಟವರ್
ಟವರ್   

ಚಿಕ್ಕಮಗಳೂರು: ತಾಲ್ಲೂಕಿನ ದುಂಬಿಗೆರೆ ಗ್ರಾಮಸ್ಥರೊಬ್ಬರ ಜಾಗದಲ್ಲಿ ಮೊಬೈಲ್‌ ಟವರ್‌ ಅಳವಡಿಸುವುದಾಗಿ ನಂಬಿಸಿ, ಶುಲ್ಕ ರೂಪದಲ್ಲಿ ₹ 1 ಲಕ್ಷ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಲಾಗಿದೆ.

ನಗರದ ಸಿಇಎನ್‌ (ಸೈಬರ್‌, ಆರ್ಥಿಕ ಹಾಗೂ ಮಾದಕ ವಸ್ತು) ಠಾಣೆಯಲ್ಲಿ ದುಂಬಿಗೆರೆಯ ಗ್ರಾಮದ ಯುವಕ ವಂಚನೆ ದೂರು ದಾಖಲಿಸಿದ್ದಾರೆ.

ಯುವಕನೊಬ್ಬ ಮನೆಯ ಪಕ್ಕದ ಜಾಗದಲ್ಲಿ (ಯುವಕನ ತಂದೆ ಹೆಸರಿನಲ್ಲಿ ಜಾಗ ಇದೆ) ಮೊಬೈಲ್‌ ಟವರ್‌ ಅಳವಡಿಸಲು ಯೋಚಿಸಿ, ಅಂತರ್ಜಾಲದಲ್ಲಿ ಮಾಹಿತಿ ಹುಡುಕಿದ್ದಾರೆ. ವೆಬ್‌ನಲ್ಲಿದ್ದ ‘ಎಬಿಜಿ ಟವರ್ಸ್‌ ಪ್ರೈವೇಟ್‌ ಲಿಮಿಟೆಡ್‌’ಗೆ ಅರ್ಜಿ ಅಪ್‌ಲೋಡ್‌ ಮಾಡಿದ್ದಾರೆ.

ADVERTISEMENT

ಅರ್ಜಿ ಅಪ್‌ಲೋಡ್‌ ಮಾಡಿದ ದಿನ ವೇ ಯುವಕನಿಗೆ ಮೂರು ವಿವಿಧ ಮೊಬೈಲ್‌ ನಂಬರ್‌ಗಳಿಂದ ಫೋನ್‌ ಕರೆ ಬಂದಿವೆ. ಟವರ್‌ ಅಳವಡಿಸುವುದಾಗಿ ಯುವಕನಿಗೆ ಕರೆ ಮಾಡಿದವರು ತಿಳಿಸಿದ್ದಾರೆ.

ಅದಕ್ಕಾಗಿ ಕರಾರು ಶುಲ್ಕ, ಪರವಾನಗಿ ಶುಲ್ಕ, ಟಿಡಿಎಸ್‌, ಜಿಎಸ್‌ಟಿ, ಮುಂಗಡ ಹಣ ಕಟ್ಟಬೇಕು ಎಂದು ನಂಬಿಸಿದ್ದಾರೆ.
ಯುವಕನು ತಂದೆಯ ಖಾತೆಯಿಂದ ₹ 2,450, ಸಹೋದರನ ಖಾತೆಯಿಂದ ₹ 69,000 ಹಾಗೂ ಇನ್ನೊಂದು ಖಾತೆಯಿಂದ ₹ 30,000 ಒಟ್ಟು ₹ 1,01450 ಅನ್ನು ಗೂಗಲ್‌ ಪೇ ಮತ್ತು ಫೋನ್‌ ಪೇ ಮೂಲಕ ಜಮೆ ಮಾಡಿದ್ದಾರೆ.

ಹಣ ಜಮೆ ಮಾಡಿದ ನಂತರ ಯುವಕ ಟವರ್‌ ಅಳವಡಿಸುವುದು ಯಾವಾಗ ಎಂದು ಫೋನ್‌ ಮಾಡಿದಾಗ ಅವರು ಕರೆ ಸ್ವೀಕರಿಸಿಲ್ಲ. ತಾನು ಮೋಸ ಹೋಗಿರುವುದು ಯುವಕನಿಗೆ ಗೊತ್ತಾಗಿದೆ.

‘ಫೋನ್‌ ಸಂಖ್ಯೆ, ಖಾತೆ ಸಂಖ್ಯೆ ಆಧರಿಸಿ ಪತ್ತೆ ಮಾಡಬೇಕಿದೆ. ಹೊರ ರಾಜ್ಯದ ಜಾಲ ಇರಬಹುದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನ್‌ಲೈನ್‌ ವಂಚನೆಗಳು ಹೆಚ್ಚುತ್ತಿವೆ. ಕೆವೈಸಿ ಪರಿಶೀಲನೆ ಸೋಗಿನಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಎಟಿಎಂ ಕಾರ್ಡ್‌ ಸಂಖ್ಯೆ, ಒಟಿಪಿ ಸಂಖ್ಯೆ ಪಡೆದು ವಂಚಿಸುತ್ತಾರೆ. ಜಾಲಗಳು ವ್ಯವಸ್ಥಿತವಾಗಿ ಸಂಚು ರೂಪಿಸಿ ಮೋಸ ಮಾಡುತ್ತಾರೆ. ವಂಚನೆಗೆ ಒಳಗಾದವರ ಸಹಕಾರವಿಲ್ಲದೆ ಆನ್‌ಲೈನ್‌ನಲ್ಲಿ ವಂಚನೆ ಮಾಡಲು ಸಾಧ್ಯ ಇಲ್ಲ. ಹೀಗಾಗಿ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು’ ಎಂದು ಪೊಲೀಸರು ತಿಳಿಸಿದರು.

ಸಾರಾಂಶ

ಚಿಕ್ಕಮಗಳೂರು ತಾಲ್ಲೂಕಿನ ದುಂಬಿಗೆರೆ ಗ್ರಾಮಸ್ಥರೊಬ್ಬರ ಜಾಗದಲ್ಲಿ ಮೊಬೈಲ್‌ ಟವರ್‌ ಅಳವಡಿಸುವುದಾಗಿ ನಂಬಿಸಿ, ಶುಲ್ಕ ರೂಪದಲ್ಲಿ ₹ 1 ಲಕ್ಷ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.