ADVERTISEMENT

ಬಸವನಹಳ್ಳಿ, ಕೋಟೆ ಕೆರೆ ದುಃಸ್ಥಿತಿ

ಜೊಂಡು, ಹೂಳು, ಗಲೀಜುಮಯ

ಬಿ.ಜಿ ಧನ್ಯಪ್ರಸಾದ್
Published 18 ಅಕ್ಟೋಬರ್ 2021, 7:10 IST
Last Updated 18 ಅಕ್ಟೋಬರ್ 2021, 7:10 IST
ಬಸವನಹಳ್ಳಿ ಕೆರೆಯೊಳಗಿನ ದಿಬ್ಬದ ದುಃಸ್ಥಿತಿ. ಪ್ರಜಾವಾಣಿ ಚಿತ್ರ ಎ.ಎನ್‌.ಮೂರ್ತಿ
ಬಸವನಹಳ್ಳಿ ಕೆರೆಯೊಳಗಿನ ದಿಬ್ಬದ ದುಃಸ್ಥಿತಿ. ಪ್ರಜಾವಾಣಿ ಚಿತ್ರ ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ನಗರದ ಬಸವನಹಳ್ಳಿ – ದಂಟರಮಕ್ಕಿ ಕೆರೆಯು ಗಲೀಜುಮಯವಾಗಿದೆ, ಕೋಟೆ ತಾವರೆಕೆರೆಯಲ್ಲಿ ಜೊಂಡು, ಹೂಳು ಆವರಿಸಿದೆ. ಎರಡೂ ಕೆರೆಗಳು ದುಃಸ್ಥಿತಿಯಲ್ಲಿವೆ.

ಮೋರಿಗಳು, ರಾಜಕಾಲುವೆಗಳ ತ್ಯಾಜ್ಯ ಈ ಕೆರೆಗಳ ಒಡಲು ಸೇರುತ್ತಿದೆ. ನೀರು ಮಲೀನವಾಗಿದೆ. ಕೊಳಚೆ, ತ್ಯಾಜ್ಯ ರಾಶಿಯ ದುರ್ನಾತದ ತಾಣಗಳಾಗಿವೆ. ಕೆರೆಗಳ ಪ್ರದಕ್ಷಿಣೆ ಹಾಕಿದರೆ ದುಃಸ್ಥಿತಿ ದರ್ಶನವಾಗುತ್ತದೆ.

ಬಸವನಹಳ್ಳಿ ಕೆರೆಯ ಸಂಗ್ರಹ ಸಾಮರ್ಥ್ಯ 49.92 ಮೆಟ್ರಿಕ್‌ ಅಡಿ, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ 310 ಹೆಕ್ಟೇರ್‌ ಹಾಗೂ ಕೋಟೆ ತಾವರೆಕೆರೆಯ ಸಂಗ್ರಹ ಸಾಮರ್ಥ್ಯ 7.54 ಮೆಟ್ರಿಕ್‌ ಅಡಿ, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ 65.86 ಹೆಕ್ಟೇರ್‌ ಇದೆ.
ನಗರೀಕರಣದ ಭರಾಟೆಯಲ್ಲಿ ಈ ಕೆರೆಗಳ ನೈಸರ್ಗಿಕ ಜಲಮೂಲಗಳು ಮುಚ್ಚಿ (ಮಾಯ) ಹೋಗಿವೆ. ಒತ್ತುವರಿಯಿಂದಾಗಿ ಸಂಗ್ರಹ ಸಾಮರ್ಥ್ಯವೂ ಕಡಿಮೆಯಾಗಿದೆ. ಚರಂಡಿ ಕೊಳಚೆ ನೀರು ಕೆರೆಗಳಿಗೆ ಹರಿಯುತ್ತಿದೆ.

ADVERTISEMENT

ಅಕ್ರಮ ಚಟುವಟಿಕೆಗಳ ಅಡ್ಡೆ: ಬಸವನಹಳ್ಳಿ ಕೆರೆ ಅಂಗಳದೊಳಗೆ ನಿರ್ಮಿಸಿರುವ ದಿಬ್ಬವು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ. ಪ್ರಣಯ ಪಕ್ಷಿಗಳು, ಪಡ್ಡೆ ಹುಡುಗರು, ಮದ್ಯವ್ಯಸನಿಗಳು, ಜೂಜುಕೋರರ ಚಟುವಟಿಕೆಗಳಿಗೆ ಪೂರಕ ತಾಣವಾಗಿದೆ.

ದಿಬ್ಬದಲ್ಲಿ ನಿರ್ಮಿಸಿದ್ದ ಮಂಟಪ, ನಡಿಗೆ ಪಥ, ‘ಆ್ಯಂಪಿ ಥಿಯೇಟರ್‌’ ಎಲ್ಲವೂ ಹಳ್ಳ ಹಿಡಿದಿವೆ. ಪಾರ್ಥೆನಿಯಂ, ಕಳೆ ಗಿಡ, ಮುಳ್ಳಿನ ಗಿಡಗಳು ಬೆಳೆದಿವೆ. ಮದ್ಯದ ಖಾಲಿ ಬಾಟಲಿಗಳು, ಸಿಗರೇಟು–ಗುಟ್ಕಾ ಪೊಟ್ಟಣಗಳು ಎಲ್ಲೆಂದರಲ್ಲಿ ಬಿದ್ದಿವೆ.
ಪ್ರಣಯ ಪಕ್ಷಿಗಳು ಕಾಲೇಜಿಗೆ ಬಂಕ್‌ ಹಾಕಿ ಇಲ್ಲಿಗೆ ಬರುತ್ತಾರೆ. ಪಡ್ಡೆ ಹುಡುಗರ ಮದ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಾರೆ. ಕಾವಲು ವ್ಯವಸ್ಥೆ ಇಲ್ಲದಿರುವುದು ಅನುಕೂಲವಾಗಿ ಪರಿಣಮಿಸಿದೆ.

‘ಮದ್ಯ ಸೇವಿಸಿ ಅಮಲಿನಲ್ಲಿ ತೇಲಾಡುತ್ತಾರೆ. ಗದರಿಸಿದರೆ ನಮಗೆ ಜೋರು ಮಾಡುತ್ತಾರೆ. ‘ಜೋಡಿಹಕ್ಕಿಗಳು’ ಇಲ್ಲಿ ಬಂದು ಕೂರುತ್ತಾರೆ. ಸಂಜೆ ನಂತರ ಅನೈತಿಕ ಚಟುವಟಿಕೆಗಳು ನಡೆಯುತ್ತವೆ’ ಎಂದು ಮೀನುಗಾರ ರಾಮಾಂಜನೇಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬಸವನಹಳ್ಳಿ ಕೆರೆ ಸುತ್ತ ನಿರ್ಮಿಸಿರುವ ನಡಿಗೆ ಪಥ ಅಧ್ವಾನವಾಗಿದೆ. ಕೆಲವೆಡೆ ಪಾರ್ಥೆನಿಯಂ, ಮುಳ್ಳಿನ ಗಿಡ ಬೆಳೆದು ಮುಚ್ಚಿ ಹೋಗಿದೆ. ಕೆರೆಯಲ್ಲಿ ಜೊಂಡು ಬೆಳೆದಿದೆ. ನಗರ ಮನೆ, ಅಂಗಡಿ, ಹೋಟೆಲ್‌ಗಳಲ್ಲಿ ಸಂಗ್ರಹಿಸಿದ ಕಸ ವಾಹನಗಳಲ್ಲಿ ಒಯ್ದು ಕೆರೆಯ ದಂಡೆಯಲ್ಲಿ (ಜ್ಯೋತಿನಗರ ಭಾಗ) ವಿಂಗಡಣೆ ಮಾಡುತ್ತಾರೆ. ಕೆರೆ ಸುತ್ತಮುತ್ತಲಿನ ಪ್ರದೇಶಗಳ ಹಲವು ನಿವಾಸಿಗಳು ಕಸವನ್ನು ತಂದು ಕೆರೆಯ ಬದಿಯಲ್ಲೇ ಎಸೆಯುತ್ತಾರೆ.

ಕೋಟೆ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕೆರೆ ಅಭಿವೃದ್ಧಿಗೆ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅವರು ₹ 1.30 ಕೋಟಿ ಅನುದಾನ ಒದಗಿಸಿದ್ದಾರೆ. ಕೆರೆಗೆ ಗಲೀಜು ಹರಿಯುವದನ್ನು ತಪ್ಪಿಸುವ ನಿಟ್ಟಿನಲ್ಲಿ ಫಿಲ್ಟರ್‌ ಬೆಡ್‌ ನಿರ್ಮಿಸಲಾಗಿದೆ. ಅಲ್ಲದೇ ರಾಜಕಾಲುವೆ ಕೊಳಕು ನೀರು ಪ್ರತ್ಯೇಕವಾಗಿ ಹರಿಯಲು ಮೋರಿ ನಿರ್ಮಿಸಲಾಗಿದೆ. ಫಿಲ್ಟರ್‌ ಸಮೀಪದಲ್ಲಿ ಅಪಾರ ಪ್ಲಾಸ್ಟಿಕ್‌, ತ್ಯಾಜ್ಯ ಸಂಗ್ರಹವಾಗಿದೆ.

ಕೆರೆಯಲ್ಲಿ ನಡಿಗೆ ಪಥ ನಿರ್ಮಿಸಲಾಗಿದೆ. ಈ ಪಥದ ಉದ್ದಕ್ಕೂ ಇಕ್ಕೆಲದಲ್ಲಿ ಕಳೆ ಗಿಡಗಳು ಬೆಳೆದಿವೆ. ಬದಿಗಳಲ್ಲಿ ಕಸ, ಪ್ಲಾಸ್ಟಿಕ್‌ಗಳು ಬಿದ್ದಿವೆ. ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ತೂಬಿನ ಭಾಗದಲ್ಲಿ ಜೊಂಡು ಹೆಚ್ಚು ಬೆಳೆದಿದೆ. ಕೆರೆ ಅಭಿವೃದ್ಧಿ ನಿಟ್ಟಿನಲ್ಲಿ ಕಾಮಗಾರಿ ಮಾಡಲಾಗಿದೆ. ಆದರೆ, ನಿರ್ವಹಣೆ ಸಮಸ್ಯೆಯಿಂದಾಗಿ ದುಃಸ್ಥಿತಿಗೆ ತಲುಪುತ್ತಿದೆ ಎಂದು ಸ್ಥಳೀಯರ ಹೇಳುತ್ತಾರೆ.

‘ತ್ಯಾಜ್ಯ ಕೆರೆಗೆ ಸೇರುತ್ತದೆ. ಕೆರೆ ಮುಗ್ಗಲಿನ ಬಡಾವಣೆಯವರಿಗೆ (ಗಾಂಧಿನಗರ) ದುರ್ನಾತದ ‘ಶಿಕ್ಷೆ’, ಸೊಳ್ಳೆ, ಕ್ರಿಮಿಕೀಟಗಳ ಕಾಟ ಅನುಭವಿಸಲೇಬೇಕು. ಗಿಡಗಂಟಿಗಳಲ್ಲಿ ಹಾವು ಹುಳಹುಪ್ಪಟೆಗಳು ಇವೆ. ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು

ನಾಲ್ಕು ವರ್ಷವಾಗಿದೆ, ಇನ್ನು ಮುಗಿಸಿಲ್ಲ’ ಎಂದು ದೋಣಿಖಣ ನಿವಾಸಿ ಮೋಹನಕುಮಾರ್ ತಿಳಿಸಿದರು.

ತುಕ್ಕು ಹಿಡಿದ ಮೆಷ್‌ ಬೇಲಿ: ನಗರದ ಕೋಟೆಯ ಕೆರೆಯ ಸುತ್ತಲೂ ಮೆಷ್‌ ಬೇಲಿ ಅಳವಡಿಸಲಾಗಿದೆ. ಈ ಬೇಲಿಯ ಬಹಳಷ್ಟು ಕಡೆ ತುಕ್ಕು ಹಿಡಿದು ಹಾಳಾಗಿದೆ.

ಫಿಲ್ಟರ್‌ ಬೆಡ್‌ ನಿರ್ಮಿಸಿರುವ ಭಾಗ ಸಮೀಪದಲ್ಲಿ ಮೆಷ್‌ ಬೇಲಿ ಮೇಲೆ ಗಿಡಗಂಟಿ, ಬಳ್ಳಿಗಳು ಹಬ್ಬಿವೆ. ಬೇಲಿಯೇ ಕಾಣದಂತಾಗಿದೆ. ಬೇಲಿಯೂ ವಾಲಿದೆ. ಕೆರೆಯ ದಂಡೆಯಲ್ಲಿ ಸ್ವಾಗತ ಕಮಾನು, ಮಕ್ಕಳ ಆಟಕ್ಕೆ ಪುಟ್ಟಅಂಗಳ ನಿರ್ಮಾಣ ಮಾಡಲಾಗುತ್ತಿದೆ.

ಈ ಕೆರೆ ಭಾಗದಲ್ಲೂ ಸಂಜೆ ಹೊತ್ತಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಪಡ್ಡೆ ಹುಡುಗರು ಮದ್ಯ ಸೇವನೆಗೆ ಇಲ್ಲಿಗೆ ಬರುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ನಗರದ ಹೊರವಲಯದ ಹಿರೇಮಗಳೂರು ದೊಡ್ಡ ಕೆರೆಯಲ್ಲಿ ಜೊಂಡು ಬೆಳೆದಿದೆ. ಹಲವು ಕಡೆ ತ್ಯಾಜ್ಯ ಸುರಿಯಲಾಗಿದೆ. ಕೆರೆಯ ಏರಿ ರಸ್ತೆ ಬಿರುಕನ್ನು ದುರಸ್ತಿ ಮಾಡಲಾಗಿದೆ. ಆದರೆ, ಡಾಂಬರೀಕರಣ ಮಾಡಿಲ್ಲ.

ಕೆರೆಯ ಬದಿಯಲ್ಲಿ ಕಸ ಸುರಿಯದಂತೆ ಕಡಿವಾಣ ಹಾಕಬೇಕು, ಏರಿ ರಸ್ತೆ ಬಿರುಕು ರಿಪೇರಿ ಮಾಡಿರುವ ಕಡೆ ಡಾಂಬರು ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹ.

‘ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ₹ 36 ಕೋಟಿ ಅನುದಾನ’

ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ₹ 36 ಕೋಟಿ ಅನುದಾನ ಮೀಸಲಿಡಲಾಗಿದೆ. ದೋಣಿವಿಹಾರ, ನಡಿಗೆ ಪಥ ಮೊದಲಾದವನ್ನು ನಿರ್ಮಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌ ತಿಳಿಸಿದರು.

ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿ ಹಂತದಲ್ಲಿದೆ. ಈ ಕೆರೆ ಅಭಿವೃದ್ಧಿಗೆ ಇಲಾಖೆ ಕ್ರಮವಹಿಸಲಿದೆ ಎಂದು ಮಾಹಿತಿ ನೀಡಿದರು.

ಸಾರಾಂಶ

ನಗರದ ಬಸವನಹಳ್ಳಿ – ದಂಟರಮಕ್ಕಿ ಕೆರೆಯು ಗಲೀಜುಮಯವಾಗಿದೆ, ಕೋಟೆ ತಾವರೆಕೆರೆಯಲ್ಲಿ ಜೊಂಡು, ಹೂಳು ಆವರಿಸಿದೆ. ಎರಡೂ ಕೆರೆಗಳು ದುಃಸ್ಥಿತಿಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.