ADVERTISEMENT

ಕಾಂಗ್ರೆಸ್‌ನವರದ್ದು ಮೊಸಳೆ ಕಣ್ಣೀರು: ಸಿ.ಟಿ.ರವಿ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:54 IST
Last Updated 21 ಜನವರಿ 2022, 16:54 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಜಿಲ್ಲೆಗೆ ವೈದ್ಯಕೀಯವಿಜ್ಞಾನ ಕಾಲೇಜು ಮಂಜೂರು ಮಾಡಿದ್ದು ಬಿಜೆಪಿ ‘ಡಬಲ್‌ ಎಂಜಿನ್‌’ (ಕೇಂದ್ರ, ರಾಜ್ಯ) ಸರ್ಕಾರ. ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರ ಕಾಲೇಜು ಮಂಜೂರಾತಿ ಬೇಡಿಕೆಗೆ ಸ್ಪಂದಿಸಿರಲಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಕುಟುಕಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವೈದ್ಯಕೀಯವಿಜ್ಞಾನ ಕಾಲೇಜು ಪ್ರವೇಶಾತಿ ಆರಂಭವಾಗಿಲ್ಲ ಎಂದು ಕಾಂಗ್ರೆಸ್‌ನವರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಕಾಲೇಜು ಕಟ್ಟಡ ನಿರ್ಮಾಣ ಆರಂಭವಾಗಿದೆ. ಬೋಧಕರ ನೇಮಕಾತಿ ಸಂದರ್ಶನ ಮುಗಿದಿದೆ. ಪ್ರವೇಶಾತಿ ಆರಂಭ ಒಂದು ವರ್ಷ ತಡವಾಗಬಹುದು, ಮುಂದಿನ ವರ್ಷ ಆಗುತ್ತದೆ’ ಎಂದು ಉತ್ತರಿಸಿದರು.

‘ವೈದ್ಯಕೀಯವಿಜ್ಞಾನ ಕಾಲೇಜು ಮಂಜೂರು ಮಾಡುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮನವಿ ಸಲ್ಲಿಸಲಾಗಿತ್ತು. ಅವರು ಸ್ಪಂದಿಸಿರಲಿಲ್ಲ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಬಿಜೆಪಿ ಟೀಕಿಸುವ ಮುನ್ನ ಜಿಲ್ಲೆಗೆ ಕಾಂಗ್ರೆಸ್‌ ಕೊಡುಗೆ ಏನು ಎಂಬುದನ್ನು ತಿಳಿಸಬೇಕು’ ಎಂದರು.

ADVERTISEMENT

‘ಸ್ತಬ್ಧಚಿತ್ರ ಆಯ್ಕೆಗೆ ತಾಂತ್ರಿಕ ಸಮಿತಿಯು ಮಾನದಂಡಗಳನ್ನು ನಿಗದಿಪಡಿಸಿದೆ. ಮಾನದಂಡದಲ್ಲಿನ ಅಂಶಗಳನ್ನು ಪೂರ್ಣಗೊಳಿಸದ ಸ್ತಬ್ಧಚಿತ್ರವನ್ನು ಸಮಿತಿ ಪರಿಗಣಿಸಲ್ಲ. ಕೇರಳದ ಸ್ತಬ್ಧ ಚಿತ್ರವನ್ನು ಮಾನದಂಡ ಅಂಶಗಳ ಆಧಾರದಲ್ಲಿ ಸಮಿತಿ ಕೈಬಿಟ್ಟಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ. ಆದರೆ, ಕೆಲವರು ಸ್ತಬ್ಧಚಿತ್ರ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಛೇಡಿಸಿದರು.

‘ಇಂಥವರ (ಶಂಕರಾಚಾರ್ಯ, ನಾರಾಯಣಗುರು) ಸ್ತಬ್ಧಚಿತ್ರ ಕಳಿಸುವಂತೆ ಕೇಂದ್ರ ಸರ್ಕಾರ ಹೇಳಿಲ್ಲ. ಇಬ್ಬರನ್ನೂ ನಾವು ಸಮಾನವಾಗಿ ನೋಡುತ್ತೇವೆ. ಸ್ತಬ್ಧಚಿತ್ರದ ಪರಿಕಲ್ಪನೆಯನ್ನು ನಿರ್ಧರಿಸುವುದು ರಾಜ್ಯ ಸರ್ಕಾರ. ಕೇರಳ ಮಾತ್ರವಲ್ಲ, ತಮಿಳುನಾಡು, ತೆಲಂಗಾಣ, ಪಶ್ಚಿಮಬಂಗಾಳ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಸಮಿತಿ ಆಯ್ಕೆ ಮಾಡಿಲ್ಲ’ ಎಂದರು.

‘ಮನೋಹರ್‌ ಪರಿಕ್ಕರ್‌ ಬದುಕಿದ್ದಾಗ ಅವರಿಗೆ ಆಮ್‌ ಆದ್ಮಿ ಪಕ್ಷ ಅವಮಾನ ಮಾಡಿದೆ. ಅರವಿಂದ ಕೇಜ್ರಿವಾಲ್‌ ಅವರಿಗೆ ‘ಯೂಸ್‌ ಅಂಡ್‌ ಥ್ರೋ’ (ಬಳಸಿ, ಬಿಸಾಕು) ಚೆನ್ನಾಗಿ ಗೊತ್ತಿದೆ. ಅವರು ಮುಖ್ಯಮಂತ್ರಿಯಾಗುವ ಮುನ್ನ ಅವರ ಜತೆಗಿದ್ದವರು (ಪ್ರಶಾಂತ್‌ಭೂಷಣ್‌, ನಾಗೇಂದ್ರ ಯಾದವ್‌...) ಈಗ ಅವರ ಜತೆ ಇಲ್ಲ. ಪರಿಕ್ಕರ್‌ ಅವರಿಗೆ ಬಿಜೆಪಿ ಎಲ್ಲ ಗೌರವ ನೀಡಿತ್ತು’ ಎಂದು ಉತ್ತರಿಸಿದರು.

ಸಾರಾಂಶ

‘ಜಿಲ್ಲೆಗೆ ವೈದ್ಯಕೀಯವಿಜ್ಞಾನ ಕಾಲೇಜು ಮಂಜೂರು ಮಾಡಿದ್ದು ಬಿಜೆಪಿ ‘ಡಬಲ್‌ ಎಂಜಿನ್‌’ (ಕೇಂದ್ರ, ರಾಜ್ಯ) ಸರ್ಕಾರ. ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರ ಕಾಲೇಜು ಮಂಜೂರಾತಿ ಬೇಡಿಕೆಗೆ ಸ್ಪಂದಿಸಿರಲಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.