ADVERTISEMENT

ಜಾನುವಾರು ಕಳ್ಳತನ ಅವ್ಯಾಹತ

ನರಸಿಂಹರಾಜಪುರ: ಹಸು ಸಾಕಣೆದಾರರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 11:30 IST
Last Updated 10 ಜೂನ್ 2024, 11:30 IST
<div class="paragraphs"><p>ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದ ಸಮೀಪದ ಸರ್ಕಲ್ ಬಳಿ ರಾತ್ರಿ ವೇಳೆ ಬೀಡು ಬಿಡುವ ದನಗಳು (ಸಂಗ್ರಹ ಚಿತ್ರ)</p></div>

ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದ ಸಮೀಪದ ಸರ್ಕಲ್ ಬಳಿ ರಾತ್ರಿ ವೇಳೆ ಬೀಡು ಬಿಡುವ ದನಗಳು (ಸಂಗ್ರಹ ಚಿತ್ರ)

   

ಕೆ.ವಿ.ನಾಗರಾಜ್

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಜಾನುವಾರುಗಳ ಕಳ್ಳ ಸಾಗಾಣಿಕೆ ಮತ್ತೆ ಹೆಚ್ಚಿದ್ದು, ಹಸು ಸಾಕಣೆದಾರರಲ್ಲಿ ಆತಂಕ  ಹೆಚ್ಚಿದೆ.

ADVERTISEMENT

ರಾತ್ರಿ ವೇಳೆ ಮನೆಗೆ ಹಿಂದಿರುಗದೆ ಪ್ರಮುಖ ಸ್ಥಳಗಳಲ್ಲಿ ಬೀಡು ಬಿಡುವ ದನಗಳನ್ನು ಗುರಿಯಾಗಿಟ್ಟ ಕೊಂಡು ಜಾನುವಾರು ಕಳ್ಳರು, ಅವುಗಳನ್ನು ಕದ್ದು ಸಾಗಿಸುತ್ತಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೀಡಾಡಿ ದನಗಳು ಬೀಡು ಬಿಡುವ ಸ್ಥಳಗಳಾದ ಡಾ.ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಸುಂಕದಕಟ್ಟೆ, ಪ್ರವಾಸಿ ಮಂದಿರ ಸರ್ಕಲ್, ಜೈಲ್ ಬಿಲ್ಡಿಂಗ್ ಮತ್ತಿತರ ಪ್ರದೇಶಗಳಿಂದ ದನಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತದೆ.  ಮಧ್ಯರಾತ್ರಿ 2ರಿಂದ 3ಗಂಟೆಯ ವೇಳೆಯಲ್ಲಿ ವಾಹನಗಳಲ್ಲಿ ಬರುವ ದನಗಳ್ಳರು, ಬೀಡಾಡಿ ದನಗಳಿಗೆ ಮಂಪರು ಬರುವ ಔಷಧಿ ಹಾಕಿರುವ ಬ್ರೆಡ್ ತಿನ್ನಲು ನೀಡುತ್ತಾರೆ. ನಂತರ ಅವುಗಳು ನಿದ್ದೆಗೆ ಜಾರಿದಾಗ ದನಗಳ ಮುಂಗಾಲನ್ನು ಎತ್ತಿ ವಾಹನಕ್ಕೆ ತುಂಬಿಸಿಕೊಂಡು ಹೋಗುತ್ತಾರೆ. ದನಗಳ್ಳರು ವಾಹನದಲ್ಲಿ ಆಯುಧ ಇಟ್ಟುಕೊಂಡಿರುವುದರಿಂದ ಸಾರ್ವಜನಿಕರು ತಡೆಯಲು ಹೋದರೆ ಹಲ್ಲೆ ಮಾಡುವುದಕ್ಕೂ ಕೂಡ ಹಿಂಜರಿಯುವುದಿಲ್ಲ. ಹಾಗಾಗಿ ಏನೂ ಮಾಡದ ಸ್ಥಿತಿಯಿದೆ ಎನ್ನುತ್ತಾರೆ ಸ್ಥಳೀಯರು.

ಈಚೆಗೆ  ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 4ಗಂಟೆ ವೇಳೆಗೆ ಮುಖ್ಯರಸ್ತೆಯಲ್ಲಿದ್ದ ಎರಡು ದನಗಳಲ್ಲಿ ಒಂದನ್ನು ವಾಹನಕ್ಕೆ ತುಂಬಿಸಿದರು. ಇನ್ನೊಂದನ್ನು ತುಂಬುವ ವೇಳೆಗೆ ದನ ಕೂಗಿಕೊಂಡಿದ್ದರಿಂದ ಬಿಟ್ಟು ಹೋದರು ಎಂದು ದನವನ್ನು ತುಂಬಿಸಿಕೊಂಡು ಹೋಗಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಪತ್ರಿಕೆಗೆ ತಿಳಿಸಿದರು.

ಪಟ್ಟಣವು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ದನಗಳ ಕಳ್ಳಸಾಗಣೆ ಅವ್ಯಾತವಾಗಿ ನಡೆಯುತ್ತಿದೆ. ಹಲವು ದನಗಳು ಇದ್ದಕ್ಕಿದ್ದಂತೆ ಕಣ್ಮೆರೆಯಾಗುತ್ತಿದೆ. ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಕೂಡ ಈ ರೀತಿ ಕದ್ದು ಸಾಗಿಸಿದ ದನಗಳ ಮಾಂಸವನ್ನು ಮಾರಾಟ ಮಾಡುವ ವ್ಯವಸ್ಥಿತ ಜಾಲ ಇದೆ ಎನ್ನುತ್ತದೆ ಖಚಿತ ಮೂಲಗಳು. ದನಗಳನ್ನು ಕಳ್ಳಸಾಕಾಣಿಕೆ ಮಾಡಿದರೂ ಇದರ ಬಗ್ಗೆ ದನಗಳ ಮಾಲೀಕರನ್ನು ಹೊರತುಪಡಿಸಿದರೆ ಬೇರೆಯವರಿಗೆ ಗೊತ್ತಾಗುವುದಿಲ್ಲ. ಹಾಗಾಗಿ ದನದ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗುವುದು ಇಲ್ಲ. ಕೆಲವು ಕಡೆ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳನ್ನು ಬಿಚ್ಚಿಕೊಂಡು ಹೋದ ನಿದರ್ಶನಗಳೂ ಸಹ ಇವೆ.

Cut-off box - ‘ಜಾಗೃತಿ ಮೂಡಿಸಲಾಗುವುದು’ ದನಗಳ ಕಳ್ಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಾಲೇ ಬೆಳಗ್ಗಿನ ಜಾವ ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗಿದೆ. ದನಗಳನ್ನು ಅದರ ಮಾಲೀಕರು ಹಿಡಿದು ಕಟ್ಟುವಂತೆ ಧ್ವನಿವರ್ಧಕದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ಜತೆಗೆ ಬೀಡಾಡಿ ದನಗಳನ್ನು ದೊಡ್ಡಿಗೆ ಕಳಿಸುವ ನಿಟ್ಟಿನಲ್ಲೂ ಪಟ್ಟಣ ಪಂಚಾಯಿತಿಗೆ ಪತ್ರ ಬರೆಯಲಾಗುವುದು ಎಂದು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ನಿರಂಜನಗೌಡ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.