ADVERTISEMENT

ಎಟಿಎಂ ನಿರ್ವಹಣೆ ಕೊರತೆ; ಸಮಸ್ಯೆ ಸರಮಾಲೆ

ಕಾಫಿನಾಡಿನ ವಿವಿಧೆಡೆ 200ಕ್ಕೂ ಹೆಚ್ಚು ಎಟಿಎಂಗಳು

ಬಿ.ಜಿ ಧನ್ಯಪ್ರಸಾದ್
Published 17 ಜನವರಿ 2022, 5:23 IST
Last Updated 17 ಜನವರಿ 2022, 5:23 IST
ಅಜ್ಜಂಪುರ ತಾಲ್ಲೂಕಿನ ಶಿವನಿಯಲ್ಲಿನ ಎಟಿಎಂ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ.
ಅಜ್ಜಂಪುರ ತಾಲ್ಲೂಕಿನ ಶಿವನಿಯಲ್ಲಿನ ಎಟಿಎಂ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ.   

ಚಿಕ್ಕಮಗಳೂರು: ತಾಂತ್ರಿಕ ತೊಂದರೆ, ನಗದು ಖಾಲಿ, ಯಂತ್ರ ನ್ಯೂನತೆ ಮೊದಲಾದ ಸಮಸ್ಯೆಗಳಾಗಿ ಕೆಲವೆಡೆ ಎಟಿಎಂಗಳು ಆಗಾಗ್ಗೆ ಕೈಕೊಡುವುದು ಸಾಮಾನ್ಯವಾಗಿದೆ. ಗ್ರಾಹಕರು ಬ್ಯಾಂಕ್‌ನವರನ್ನು ಶಪಿಸುವಂತಾಗಿದೆ.

ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 200ಕ್ಕೂ ಹೆಚ್ಚು ಎಟಿಎಂಗಳು ಇವೆ. ನಿರ್ವಹಣೆ ಕೊರತೆಯಿಂದಾಗಿ ಕೆಲವೆಡೆ ಎಟಿಎಂಗಳು ಇದ್ದೂ ಇಲ್ಲದಂತಾಗಿವೆ.

ಒಂದು ಎಟಿಎಂ ಮಾತ್ರ ಇರುವ ಪ್ರದೇಶ, ಊರುಗಳ ಯಂತ್ರ ಕೈಕೊಟ್ಟರೆ ಎಟಿಎಂ ಇರುವ ಪಕ್ಕದ ಗ್ರಾಮ, ಜಾಗಕ್ಕೆ ಹೋಗಬೇಕು. ಅಲ್ಲೂ ಅದೇ ಸ್ಥಿತಿ ಇದ್ದರೆ ಮತ್ತೊಂದು ಎಟಿಎಂ ಹುಡುಕಿಕೊಂಡು ಹೋಗಬೇಕು.

ADVERTISEMENT

ನಗರ, ಪಟ್ಟಣದ ಪ್ರದೇಶಗಳಲ್ಲಿ ಹಲವು ಎಟಿಎಂಗಳು ಇರುತ್ತವೆ. ಹೀಗಾಗಿ, ಗ್ರಾಹಕರು ಒಂದು ಸರಿ ಇರದಿದ್ದರೆ ಮತ್ತೊಂದನ್ನು ಬಳಕೆ ಮಾಡಿಕೊಳ್ಳಲು ಅನುಕೂಲ ಇದೆ. ಗ್ರಾಮೀಣ ಭಾಗದಲ್ಲಿ ಹೋಬಳಿ ಕೇಂದ್ರ, ದೊಡ್ಡ ಊರುಗಳಲ್ಲಿ ಮಾತ್ರ ಎಟಿಎಂ ಇರುತ್ತವೆ. ಇಂಥ ಕಡೆ ಸಾಮಾನ್ಯವಾಗಿ ಒಂದು ಎಟಿಎಂ ಇರುತ್ತದೆ. ಇಂಥ ಕಡೆ ಎಟಿಎಂ ಸಮಸ್ಯೆ ಇದ್ದರೆ ಗ್ರಾಹಕರಿಗೆ ಪಡಿಪಾಟಲು.

‘ಶಿವನಿ ಹೋಬಳಿ ಕೇಂದ್ರದಲ್ಲಿನ ಎಟಿಎಂ ನಿಷ್ಕ್ರಿಯವಾಗಿ ಎಷ್ಟೋ ತಿಂಗಳಾಗಿದೆ. ಎಟಿಎಂ ಇದ್ದರೂ ಪ್ರಯೋಜನ ಇಲ್ಲ. ಬ್ಯಾಂಕ್‌ನ ಅಧಿಕಾರಿಗಳ ಗಮನ ಸೆಳೆದರೂ ಸರಿಪಡಿಸಲು ಕ್ರಮ ವಹಿಸಿಲ್ಲ’ ಎಂದು ಅಜ್ಜಂಪುರ ತಾಲ್ಲೂಕಿನ ಅನುವನಹಳ್ಳಿಯ ಎ.ಎಂ.ಪ್ರಶಾಂತ್‌ ಸಂಕಷ್ಟ ತೋಡಿಕೊಂಡರು.

ಸ್ವಚ್ಛತೆ ಕೊರತೆ: ಹಲವು ಎಟಿಎಂಗಳಲ್ಲಿ ಸ್ವಚ್ಛತೆ ‘ಮಾಯ’ವಾಗಿದೆ. ಕಿಯೋಸ್ಕ್‌ಗಳು ಕಸ, ದೂಳು ಬಡಿದ ಸ್ಥಿತಿಯಲ್ಲಿರುತ್ತವೆ. ಎಟಿಎಂ ರಸೀತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.

ಕೆಲವು ಕಿಯೋಸ್ಕ್‌ಗಳ ಸ್ಥಿತಿ ಹೇಳತೀರದು. ಕಿಯೋಸ್ಕ್‌ನಲ್ಲಿನ ಸಿಸಿ ಟಿವಿ ಕ್ಯಾಮೆರಾ, ಎ.ಸಿ ಉಪಕರಣಗಳು, ನಗದು ಪಾವತಿ ಯಂತ್ರಕ್ಕೆ ದೂಳು ಮೆತ್ತಿಕೊಂಡಿದೆ. ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ.

ಕೆಲವು ಎಟಿಎಂಗಳಲ್ಲಿ ವಿದ್ಯುತ್‌ ದೀಪಗಳು ಹಾಳಾಗಿವೆ. ಕೆಲವರಲ್ಲಿ ಬಾಗಿಲುಗಳು ಮುರಿದಿವೆ. ಕೆಲವೆಡೆ ಬಾಗಿಲಲ್ಲಿ ನಾಯಿಗಳು, ಬಿಡಾಡಿಗಳು ಪವಡಿಸಿರುತ್ತವೆ.

‘ಮಲೆನಾಡು ಭಾಗದಲ್ಲಿ ಬ್ಯಾಂಕ್‌ಗಳು ಕಡಿಮೆ. ಎಟಿಎಂ ಅಲ್ಲೊಂದು, ಇಲ್ಲೊಂದು ಇವೆ. ಅದು ಸಮಸ್ಯೆಯಾಗಿ ಬಾಗಿಲು ಮುಚ್ಚಿದರೆ ವಾರಗಟ್ಟಲೆ ತೆರೆಯಲ್ಲ. ಬ್ಯಾಂಕ್‌ಗೆ ಹೋಗಿ ಹಣ ಬಿಡಿಸಿಕೊಳ್ಳಬೇಕು’ ಎಂದು ಮೂಡಿಗೆರೆ ತಾಲ್ಲೂಕಿನ ಹೊಸಳ್ಳಿಯ ರಮೇಶ್‌ ಗೋಳು ತೋಡಿಕೊಂಡರು.

ಎಟಿಎಂಗಳಲ್ಲಿ ಕಣ್ಗಾವಲಿಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಹುತೇಕ ಯಾವ ಎಟಿಎಂ ಕಾವಲಿಗೂ ಭದ್ರತಾ ಸಿಬ್ಬಂದಿ ಇಲ್ಲ. ಕೆಲವು ಕಡೆ ಈ ಸಿಸಿ ಕ್ಯಾಮೆರಾಗಳೂ ಸರಿ ಇಲ್ಲ ಎಂಬ ದೂರುಗಳು ಇವೆ.

ಕೆಲ ತಿಂಗಳ ಹಿಂದೆ ಯಂತ್ರಗಳನ್ನು ಅಪ್ಡೇಟ್‌ ಮಾಡಲಾಗಿದೆ. ಬ್ಯಾಂಕ್‌ನಿಂದ ನವೀಕೃತ ಕಾರ್ಡ್‌ ಪಡೆದು ಬಳಸಬೇಕಿದೆ. ಯಂತ್ರವು ಹಳೆಯ ಕಾರ್ಡ್‌ ರೀಡ್‌ ಮಾಡಲ್ಲ.

‘ಈಗ ಹಳೆಯ ಕಾರ್ಡ್‌ ಉಪಯೋಗಿಸಲು ಆಗಲ್ಲ. ನವೀಕೃತ ಕಾರ್ಡ್ ಇದ್ದರೆ ಮಾತ್ರ ವ್ಯವಹಾರ ಮಾಡಬಹುದು. ಕೆಲವು ಬಾರಿ ತಾಂತ್ರಿಕ ಸಮಸ್ಯೆಯಿಂದ ಹಣವೇ ಬರಲ್ಲ. ಸಮಸ್ಯೆಯನ್ನು ಯಾರಿಗೆ ಹೇಳುವುದು।?’ ಎನ್ನುತ್ತಾರೆ ಔಷಧ ವ್ಯಾಪಾರಿ ವಿಜಯಕುಮಾರ್‌.

ಸಾಲು ರಜೆಗಳಿದ್ದಾಗ ಎಟಿಎಂಗಳಲ್ಲಿ ನಗದು ಖಾಲಿಯಾಗುವುದು ಮಾಮೂಲಿಯಾಗಿದೆ. ಪ್ರವಾಸಿ ತಾಣ, ಆ ಮಾರ್ಗಗಳ ಎಟಿಎಂಗಳು ಬರಿದಾಗಿರುವುದೇ ಜಾಸ್ತಿ.

‘ಎಟಿಎಂ ಡಿಜಿಟಲ್‌ ವ್ಯವಸ್ಥೆಯು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜನರೇಟರ್‌ ಇಲ್ಲದ ಟವರ್‌ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಾದಾಗ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತವೆ. ಮಲೆನಾಡು ಭಾಗದಲ್ಲಿ ಈ ಸಮಸ್ಯೆಗಳು ಹೆಚ್ಚು. ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಬ್ಯಾಂಕ್‌ ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ವಹಣೆಗೆ ಕ್ರಮಕ್ಕೆ ಸೂಚನೆ

‘ಎಟಿಎಂಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ನಿಗಾ ವಹಿಸಬೇಕು, ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಮುಖ್ಯವ್ಯವಸ್ಥಾಪಕ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಟಿಎಂನಲ್ಲಿ ತಾಂತ್ರಿಕ ದೋಷ ಮೊದಲಾದ ತೊಂದರೆಗಳಿದ್ದರೆ ತಕ್ಷಣವೇ ಗಮಕ್ಕೆ ತರಬೇಕು ಎಂದು ತಿಳಿಸಿದ್ದೇನೆ. ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುತ್ತೇನೆ’ ಎಂದು ಅವರು ತಿಳಿಸಿದರು.

ಸಾರಾಂಶ

ತಾಂತ್ರಿಕ ತೊಂದರೆ, ನಗದು ಖಾಲಿ, ಯಂತ್ರ ನ್ಯೂನತೆ ಮೊದಲಾದ ಸಮಸ್ಯೆಗಳಾಗಿ ಕೆಲವೆಡೆ ಎಟಿಎಂಗಳು ಆಗಾಗ್ಗೆ ಕೈಕೊಡುವುದು ಸಾಮಾನ್ಯವಾಗಿದೆ. ಗ್ರಾಹಕರು ಬ್ಯಾಂಕ್‌ನವರನ್ನು ಶಪಿಸುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.