ADVERTISEMENT

ನಂದಿಗಿರಿಧಾಮ: ಮುರಿದ ಅಟ್ಟಣಿಗೆ, ಮಕ್ಕಳ ಉದ್ಯಾನ ಅಧ್ವಾನ

ನಂದಿಗಿರಿಧಾಮ ಪ್ರವೇಶ ಬಂದ್‌ಗೂ ಮುನ್ನವೇ ಆಕರ್ಷಣೆ ಕಳೆದುಕೊಂಡಿದ್ದ ಉದ್ಯಾನ, ಅಟ್ಟಣಿಗೆ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಅಕ್ಟೋಬರ್ 2021, 2:19 IST
Last Updated 11 ಅಕ್ಟೋಬರ್ 2021, 2:19 IST
ನಂದಿಗಿರಿಧಾಮದಲ್ಲಿ ಮುರಿದಿರುವ ಬಿದಿರು ಅಟ್ಟಣಿಗೆಗಳ
ನಂದಿಗಿರಿಧಾಮದಲ್ಲಿ ಮುರಿದಿರುವ ಬಿದಿರು ಅಟ್ಟಣಿಗೆಗಳ   

ಚಿಕ್ಕಬಳ್ಳಾಪುರ: ಮುರಿದ ಬಿದಿರು ಅಟ್ಟಣಿಗೆಗಳು, ಮಕ್ಕಳ ಉದ್ಯಾನದಲ್ಲಿ ಉರುಳಿರುವ ಆಟದ ಸಲಕರಣೆಗಳು...ಈ ಎರಡು ಚಿತ್ರಣಗಳು ನಂದಿ ಬೆಟ್ಟದಲ್ಲಿನ ಮಕ್ಕಳ ಉದ್ಯಾನ ಮತ್ತು ಗಿರಿಧಾಮದ ಪ್ರವೇಶದಲ್ಲಿ ಕಾಣುವ ಬಿದಿರುವ ಅಟ್ಟಣಿಗೆಗಳಲ್ಲಿ ಕಂಡು ಬರುತ್ತವೆ.

ನಂದಿಗಿರಿಧಾಮದಲ್ಲಿ ದಿಬ್ಬ ಕುಸಿತು ಪ್ರವಾಸಿಗರ ಪ್ರವೇಶ ಪೂರ್ಣ ನಿರ್ಬಂಧವಾಗಿ ಒಂದೂವರೆ ತಿಂಗಳಾ‌ಗಿದೆ. ಆದರೆ ಅದಕ್ಕಿಂತಲೂ ಹಿಂದಿನಿಂದಲೇ ಗಿರಿಧಾಮದಲ್ಲಿ ಮಕ್ಕಳ ಆಟಿಕೆಗಳುಳ್ಳ ಉದ್ಯಾನ ಮತ್ತು ಬಿದಿರು ಅಟ್ಟಣಿಗೆಗಳು ಮುರಿದು ಬಿದ್ದಿವೆ. ಒಂದು ವೇಳೆ ಪ್ರವಾಸಿಗರ ಪ್ರವೇಶವಿದಿದ್ದರೆ ಅಟ್ಟಣಿಗೆಗಳು ಪೂರ್ಣ ನೆಲಕಚ್ಚುತ್ತಿದ್ದವೇನೊ! ಹೀಗೆ ಗಿರಿಧಾಮದಲ್ಲಿ ಇವುಗಳ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.

ಎತ್ತರವಾದ ಬಿದಿರು ಅಟ್ಟಣಿಗೆಗಳು ಸೆಲ್ಪಿ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದ್ದವು. ಬೆಟ್ಟಕ್ಕೆ ಬಂದ ಪ್ರವಾಸಿಗರು, ಯುವ ಪ್ರೇಮಿಗಳು, ಯುವ ಜೋಡಿಗಳಿಗೆ ಈ ಅಟ್ಟಣಿಗೆ ಮುದದ ತಾಣವೂ ಆಗಿತ್ತು. ಆದರೆ ಈ ಅಟ್ಟಣಿಗೆಗಳು ಸೂಕ್ತ ನಿರ್ವಹಣೆ ಇಲ್ಲದೆ ಒಂದೊಂದಾಗಿ ಮೈ ಕಳಚುತ್ತಿವೆ.

ADVERTISEMENT

ಮಕ್ಕಳ ಉದ್ಯಾನವೂ ಗಿರಿಧಾಮದ ಪ್ರಮುಖ ಆಕರ್ಷಣೆ. ಪೋಷಕರ ಜತೆ ಇಲ್ಲಿಗೆ ಬರುವ ಮಕ್ಕಳು ಆಟವಾಡಲು ಇಲ್ಲಿ ನಾನಾ ನಮೂನೆಯ ಆಟಿಕೆಗಳಿವೆ. ಆದರೆ ನಿರ್ವಹಣೆಯ ಕೊರತೆಯಿಂದ ಉದ್ಯಾನವು ಅವ್ಯವಸ್ಥೆಯತ್ತ ಸಾಗಿದೆ. ಕೆಲವು ಆಟದ ಸಲಕರಣೆಗಳು ಮುರಿದು ಬಿದ್ದಿವೆ.  ನಾಲ್ಕಾರು ಆಟೋಪಕರಣಗಳು ಮಾತ್ರ ದುಸ್ಥಿತಿಯಲ್ಲಿವೆ. ಉಳಿದಂತೆ ಇದೇನೊ ಉದ್ಯಾನವೊ ಅಥವಾ ಗಿಡಗಂಟಿಗಳ ತಾಣವೊ ಎನಿಸುತ್ತದೆ. ಕನಿಷ್ಠ ನಿರ್ವಹಣೆಯೂ ಇಲ್ಲಿ ಇಲ್ಲದಾಗಿದೆ.

ಉದ್ಯಾನದಲ್ಲಿ ಕುಳಿತುಕೊಳ್ಳಲು ಅಳವಡಿಸಿರುವ ಬೆಂಜುಗಳು ಸಹ ವ್ಯವಸ್ಥಿತವಾಗಿಲ್ಲ. ಬೆಂಜುಗಳ ಕಾಲು ಮುರಿದಿವೆ.  

‘ನಂದಿಗಿರಿಧಾಮದಲ್ಲಿ ದಿಬ್ಬ ಕುಸಿದು ಪ್ರವೇಶ ಬಂದ್ ಆಗುವ ಮುಂಚೆಯಿಂದಲೂ ಮಕ್ಕಳ ಉದ್ಯಾನ ಅವ್ಯವಸ್ಥೆಯಿಂದ ಕೂಡಿತ್ತು. ಮಕ್ಕಳನ್ನು ಇಲ್ಲಿ ಆಟವಾಡಿಸಲು ಭಯವಾಗುತ್ತದೆ. ಕನಿಷ್ಠ ಸೌಲಭ್ಯಗಳೂ ಇಲ್ಲ. ಕೆಲವು ಆಟೋಪಕರಣಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದವು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೆಲವು ಮುರಿದು ಬಿದ್ದಿವೆ’ ಎಂದು ಚಿಕ್ಕಬಳ್ಳಾಪುರದ ವೆಂಕಟೇಶ್ ಬೇಸರ ವ್ಯಕ್ತಪಡಿಸುವರು.

‘ಪ್ರವಾಸೋದ್ಯಮ ತಾಣಗಳಲ್ಲಿ ಮಕ್ಕಳಿಗೆ ಸೂಕ್ತವಾದ ಉದ್ಯಾನ ಇಲ್ಲದಿದ್ದರೆ ಹೇಗೆ? ಮತ್ತೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡುವಷ್ಟರಲ್ಲಿ ಇವುಗಳನ್ನು ಸರಿಪಡಿಸಬೇಕು. ಇನ್ನಾದರೂ ಸಂಬಂಧಿಸಿದವರು ಈ ಬಗ್ಗೆ ಕ್ರಮವಹಿಸಬೇಕು. ಅವ್ಯವಸ್ಥೆಗಳನ್ನು ಸರಿಪಡಿಸಬೇಕು’ ಎಂದು ಹೇಳಿದರು.

ಸಾರಾಂಶ

ಚಿಕ್ಕಬಳ್ಳಾಪುರ: ಮುರಿದ ಬಿದಿರು ಅಟ್ಟಣಿಗೆಗಳು, ಮಕ್ಕಳ ಉದ್ಯಾನದಲ್ಲಿ ಉರುಳಿರುವ ಆಟದ ಸಲಕರಣೆಗಳು...ಈ ಎರಡು ಚಿತ್ರಣಗಳು ನಂದಿ ಬೆಟ್ಟದಲ್ಲಿನ ಮಕ್ಕಳ ಉದ್ಯಾನ ಮತ್ತು ಗಿರಿಧಾಮದ ಪ್ರವೇಶದಲ್ಲಿ ಕಾಣುವ ಬಿದಿರುವ ಅಟ್ಟಣಿಗೆಗಳಲ್ಲಿ ಕಂಡು ಬರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.