ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರು; ಸಿ.ಎಂ ಜತೆ ಚರ್ಚೆ

99 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 15:12 IST
Last Updated 11 ಅಕ್ಟೋಬರ್ 2021, 15:12 IST
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸಚಿವ ಡಾ.ಕೆ.ಸುಧಾಕರ್ ಆದೇಶ ಪತ್ರ ನೀಡಿದರು. ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ ಹಾಗೂ ಮುಖಂಡರು ಇದ್ದರು
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸಚಿವ ಡಾ.ಕೆ.ಸುಧಾಕರ್ ಆದೇಶ ಪತ್ರ ನೀಡಿದರು. ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ ಹಾಗೂ ಮುಖಂಡರು ಇದ್ದರು   

ಚಿಕ್ಕಬಳ್ಳಾಪುರ: ಜಿಲ್ಲೆಗೆ ಕೃಷ್ಣಾ ನದಿ ನೀರು ತರುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು. 

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 2018–19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ 99 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು. 

ನೀರಿನ ಸಮಸ್ಯೆ ಬಹಳಷ್ಟು ದಿನಗಳಿಂದ ನಮ್ಮನ್ನು ಬಾಧಿಸಿತ್ತು. ನಮ್ಮಲ್ಲಿ ಬಹಳಷ್ಟು ರೈತರು ಕೃಷಿಯನ್ನು ನಂಬಿಕೊಂಡಿದ್ದಾರೆ. ಜಮೀನು ಇದ್ದವರಿಗೆ ನೀರು ಬೇಕು. ಎಚ್‌.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆ ರೂಪಿಸುವಾಗ ಕೆಲವರು ವಿರೋಧಿಸಿದರು. ನನ್ನ ಜತೆ ಇದ್ದವರು ಕೋಲಾರದ ಮಾಜಿ ಸಂಸದ ಮುನಿಯಪ್ಪ ಮಾತ್ರ. ಈಗ ಕೆ.ಆರ್.ರಮೇಶ್ ಕುಮಾರ್ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೂ ಈ ಯೋಜನೆಗಳಿಗೂ ಸಂಬಂಧವೇ ಇಲ್ಲ ಎಂದರು.

ADVERTISEMENT

ಎಚ್‌.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ನೀರು ಬರಬಾರದು. ಆ ನೀರು ಬಂದರೆ ಜನರಿಗೆ ಕ್ಯಾನ್ಸರ್ ಬರುತ್ತದೆ, ಸತ್ತು ಹೋಗುವರು ಎಂದು ಬಹಳ ಜನರು ಹೇಳಿದರು. ಮೂರು ಹಂತದಲ್ಲಿ ಸಂಸ್ಕರಣೆ ಮಾಡುವುದು ಕಷ್ಟ. ಇದಕ್ಕೆ ಪ್ರತಿ ವರ್ಷ ಸಾವಿರಾರೂ ಕೋಟಿ ಬೇಕಾಗುತ್ತದೆ ಎಂದರು.

ಎಚ್‌.ಎನ್.ವ್ಯಾಲಿ ರೂಪಿಸುವಾಗ ಕೃಷ್ಣಬೈರೇಗೌಡರು ಸಚಿವರಾಗಿದ್ದರು. ಅವರ ಕ್ಷೇತ್ರದ ಜಾಲ ಹೋಬಳಿ ಹಾಗೂ ದೇವನಹಳ್ಳಿಗೂ ನೀರು ಹರಿಯಿತು. ಅವರು ಸಚಿವರಾಗಿದ್ದವರು ತಮ್ಮ ಕ್ಷೇತ್ರದ ಜನರಿಗೆ ಕಾವೇರಿ ನೀರನ್ನೇ ಕೊಡಬಹುದಿತ್ತು ಎಂದು ಹೇಳಿದರು.

ರೈತರಿಗೆ ನೀರು ತಂದುಕೊಟ್ಟ ಆತ್ಮತೃಪ್ತಿ ನನಗೆ ಇದೆ. ಎಚ್‌.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ತಕ್ಷಣಕ್ಕೆ ರೂಪಿಸಿರುವ ಯೋಜನೆ. ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಸಿಹಿ ನೀರು ನೀಡಬೇಕು ಎನ್ನುವುದು ನನ್ನ ಉದ್ದೇಶ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು.

ಕೋಚಿಮುಲ್ ವಿಭಜನೆಗೆ ನಮ್ಮ ಜಿಲ್ಲೆಯ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಮಂತ್ರಿ ಆಗಿದ್ದವರು ಕೋಲಾರದಲ್ಲಿಯೇ ಇರಲಿ ಎನ್ನುತ್ತಿದ್ದಾರೆ. ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ವಿಭಜನೆ ಆಗುತ್ತದೆ. ನಮ್ಮ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು.

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರು ತರುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.