ಚಾಮರಾಜನಗರ: ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡುವ ಯೋಚನೆ ಸದ್ಯಕ್ಕೆ ಇಲ್ಲ. ಶಾಲೆಗಳಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಯಾರಿಗೂ ಭಯ ಬೇಡ. ಧೈರ್ಯವಾಗಿ ಮಕ್ಕಳನ್ನು ಕಳುಹಿಸಿ...
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್.ಎನ್.ಮಂಜುನಾಥ್ ಅವರು ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ನೀಡಿದ ಸಲಹೆ ಇದು.
’ಪ್ರಜಾವಾಣಿ‘ಯು ಬುಧವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು, ಪೋಷಕರು ಹಾಗೂ ಮಕ್ಕಳು ಕರೆ ಮಾಡಿ ಕೋವಿಡ್ ಹರಡುತ್ತಿರುವ ಬಗ್ಗೆ ವ್ಯಕ್ತಪಡಿಸಿದ ಆತಂಕ ಹಾಗೂ ಕೇಳಿದ ಪ್ರಶ್ನೆಗಳಿಗೆ ಮಂಜುನಾಥ್ ಅವರು ಸಾವಧಾನದಿಂದ ವಿವರವಾಗಿ ಉತ್ತರಿಸಿದರು.
ಒಂದು ಗಂಟೆಯ ಅವಧಿಯ ಕಾರ್ಯಕ್ರಮದಲ್ಲಿ 17ಕ್ಕೂ ಹೆಚ್ಚು ಕರೆಗಳು ಬಂದವು. 10ಕ್ಕಿಂತಲೂ ಹೆಚ್ಚು ಕರೆಗಳು, ಕೋವಿಡ್ ತಡೆಯಲು ಶಾಲೆಗಳಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಶಾಲೆಯನ್ನು ಮುಚ್ಚಲಾಗುತ್ತಿದೆಯೇ ಎಂಬ ಬಗ್ಗೆಯೇ ಇತ್ತು. ವಿದ್ಯಾರ್ಥಿಗಳು ಸಹಿತ ಹಲವರು ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಬೇಡಿ ಎಂಬ ಸಲಹೆಯನ್ನೂ ನೀಡಿದರು!
ಮುನ್ನೆಚ್ಚರಿಕೆ ಕೈಗೊಳ್ಳಿ
ಕೊಳ್ಳೇಗಾಲದಿಂದ ಕರೆ ಮಾಡಿದ್ದ ಶಿವಣ್ಣ, ಗುಂಡ್ಲುಪೇಟೆಯ ಅಬ್ದುಲ್ ಮಲಿಕ್, ಮುಬಾರಕ್, ಯಳಂದೂರಿನ ಹೊನ್ನೂರಿನ ವಿದ್ಯಾರ್ಥಿನಿ ಪದ್ಮಶ್ರೀ ಅವರು ಮಕ್ಕಳಲ್ಲಿ ಕೋವಿಡ್ ಹರಡುತ್ತಿರುವ ಬಗ್ಗೆ ಭಯ ವ್ಯಕ್ತಪಡಿಸಿದರು. ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮನವಿ ಮಾಡಿದರು.
ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ ಮಂಜುನಾಥ್ ಅವರು, ’ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರೂ, ಶಾಲಾ ಮಕ್ಕಳಲ್ಲಿ ಹೆಚ್ಚು ಕಂಡು ಬಂದಿಲ್ಲ. ಇದುವರೆಗೆ 41 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ‘ ಎಂದರು.
’ಶಾಲೆಗಳನ್ನು ಪ್ರವೇಶಿಸುವ ಮೊದಲು ಮಕ್ಕಳ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜ್ವರ ಶೀತ ರೋಗ ಲಕ್ಷಣ ಕಂಡು ಬಂದ ತಕ್ಷಣ ಪೋಷಕರನ್ನು ಕರೆಸಿ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚಿಸುತ್ತಿದ್ದೇವೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಕ್ರಮವಹಿಸಲಾಗಿದೆ. ಒಂದು ಶಾಲೆಯಲ್ಲಿ 10ಕ್ಕಿಂತ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದರೆ ಆ ಶಾಲೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ‘ ಎಂದು ವಿವರಿಸಿದರು.
’ಕೋವಿಡ್ ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿಲ್ಲ. ಜ್ವರ, ಶೀತದ ರೋಗ ಲಕ್ಷಣ ಮಾತ್ರ ಕಂಡು ಬಂದಿದೆ. ಮಕ್ಕಳು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿಗಳ ಸಹಕಾರ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ‘ ಎಂದರು.
ಲಾಕ್‌ಡೌನ್ ಬೇಡ
ಯಳಂದೂರಿನ ಹೊನ್ನೂರಿನ ಭೀಮರಾವ್ ಅಂಬೇಡ್ಕರ್ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮಹೇಶ್ವರಿ ಕರೆ ಮಾಡಿ, ’ಕೋವಿಡ್ ಜಾಸ್ತಿ ಆಗುತ್ತಿದೆ ಅಂತ ಲಾಕ್‌ಡೌನ್ ಮಾಡ್ತೀರಾ? ದಯವಿಟ್ಟು ಮಾಡಬೇಡಿ. ನಮಗೆ ಮನೆಯಲ್ಲಿ ಫೋನ್ ಇಲ್ಲ. ಆನ್‌ಲೈನ್ ಪಾಠ ಕೇಳುವುದಕ್ಕೆ ಆಗುವುದಿಲ್ಲ‘ ಎಂದು ಮನವಿ ಮಾಡಿದರು.
ಗುಂಡ್ಲುಪೇಟೆಯಿಂದ ಕರೆ ಮಾಡಿದ್ದ ಇಮ್ರಾನ್ ಖಾನ್ ಅವರು, ’ಸರ್ಕಾರವೇ ಕೋವಿಡ್ ಭಯವನ್ನು ಹುಟ್ಟಿಸುತ್ತಿದೆ. ಪೋಷಕರು ಕಷ್ಟಪಟ್ಟು ಈ ವರ್ಷದ ಶಾಲಾ ಶುಲ್ಕ ಪಾವತಿಸಿದ್ದಾರೆ. ಈಗ ಶಾಲೆ ಬಂದ್ ಮಾಡಿದರೆ ಎಲ್ಲರಿಗೂ ತೊಂದರೆಯಾಗುತ್ತದೆ. ಹಾಗಾಗಿ, ರಜೆ ಘೋಷಿಸಬಾರದು‘ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್ ಅವರು, ’ಶಾಲೆಗಳನ್ನು ಮುಚ್ಚುವ ಯೋಚನೆ ಇಲ್ಲ. ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಇಲ್ಲ‘ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೆಯೇ?
ಯಳಂದೂರು ಪಟ್ಟಣ ಹಾಗೂ ತಾಲ್ಲೂಕಿನ ಹೊನ್ನೂರು ಹಾಗೂ ಸಂತೇಮರಹಳ್ಳಿಯಿಂದ ಕರೆ ಮಾಡಿದ್ದ ವಿದ್ಯಾರ್ಥಿಗಳಾದ ಮಹೇಶ್ವರಿ, ವೀಣಾ, ಮಹೇಶ್ವರಿ, ಹಾಗೂ ಆನಂದ್ ಅವರ ಪ್ರಶ್ನೆ, ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೇಗಿರುತ್ತದೆ ಎಂಬುದಾಗಿತ್ತು.
ಇದಕ್ಕೆ ಉತ್ತರಿಸಿದ ಡಿಡಿಪಿಐ ಅವರು, ’ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಖಂಡಿತವಾಗಿಯೂ ನಡೆಯಲಿದೆ. ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟವಾಗಿದೆ. ಇದು ಅಂತಿಮ ವೇಳಾಪಟ್ಟಿ ಅಲ್ಲ. ಅದೇ ಸಮಯಕ್ಕೆ ಆಗಬಹುದು ಅಥವಾ ಮುಂದೂಡಿಕೆ ಆಗಬಹುದು. ಆದರೆ, ಪರೀಕ್ಷೆ ನಡೆಯಲಿದೆ. ಈ ಬಾರಿ ಬಹು ಆಯ್ಕೆಯ ಪ್ರಶ್ನೆಗಳಿರುವುದಿಲ್ಲ. ಹಿಂದೆ ಇದ್ದಂತೆ ಪ್ರಶ್ನೆಗಳಿಗೆ ವಿವರಿಸಿ ಬರೆಯುವ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ‘ ಎಂದರು.
ಲಸಿಕೆ ಹಾಕಿಸಿಕೊಂಡರೆ ತೊಂದರೆಯಾಗುತ್ತದೆಯೇ?
ಯಳಂದೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪಾರ್ವತಿ ವೈ.ಎಸ್. ಕರೆ ಮಾಡಿ, ‘ನಾನು ಶಾಲೆಯಲ್ಲಿ ಲಸಿಕೆ ತೆಗೆದುಕೊಂಡಿದ್ದೇನೆ. ಮನೆಯಲ್ಲಿ ಬೇಡ ಅಂತಿದ್ದರು. ಲಸಿಕೆಯಿಂದ ಏನಾದರೂ ತೊಂದರೆಯಾಗುತ್ತದೆಯೇ‘ ಎಂದು ಪ್ರಶ್ನಿಸಿದರು.
’ಲಸಿಕೆ ಸುರಕ್ಷಿತವಾಗಿದೆ. ಪಡೆಯುವುದರಿಂದ ಏನೂ ತೊಂದರೆ ಇಲ್ಲ. 15ರಿಂದ 18 ವರ್ಷದೊಳಗಿನ ಶೇ 75 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಇನ್ನು ಕೆಲವು ದಿನಗಳಲ್ಲಿ ಎರಡನೇ ಡೋಸ್ ನೀಡಲೂ ಕ್ರಮ ಕೈಗೊಳ್ಳಲಾಗುವುದು‘ ಎಂದು ಮಂಜುನಾಥ್ ಅವರು ಉತ್ತರಿಸಿದರು.
ಶಿಕ್ಷಕರನ್ನು ನೇಮಿಸಿ: ಚಾಮರಾಜನಗರದ ಸರ್ಕಾರಿ ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶೇಖ್ ಅಬ್ದುಲ್ಲಾ ಅವರು ಕರೆ ಮಾಡಿ, ’ನಮ್ಮ ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದಾರೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇನ್ನೊಬ್ಬರನ್ನು ನೇಮಿಸಲು ಕ್ರಮವಹಿಸಿ‘ ಎಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅವರೊಂದಿಗೆ ಮಾತನಾಡಿ, ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಡಿಡಿಪಿಐ ಅವರು ಭರವಸೆ ನೀಡಿದರು.
ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ಪಿ.ಮಂಜುನಾಥ್, ಲಕ್ಷ್ಮಿಪತಿ ಇದ್ದರು.
ಇನ್ನಷ್ಟು ಜಾಗೃತಿ ಮೂಡಿಸಬೇಕು
ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಗಂಗಾಧರ್ ಅವರು ಕರೆ ಮಾಡಿ, ‘ಖಾಸಗಿ ಶಾಲೆಗಳಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸಲು ಕ್ರಮ ವಹಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಸಹಕಾರ ಚೆನ್ನಾಗಿದೆ. ಆದರೆ, ವೈದ್ಯಕೀಯ ಇಲಾಖೆ ನಮಗೆ ಇನ್ನಷ್ಟು ಸಹಕರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಸಂಚಾರ ವಾಹನವೊಂದನ್ನು ಮಾಡಿದರೆ ಅನುಕೂಲವಾಗುತ್ತದೆ. ಅಲ್ಲದೇ ನರ್ಸ್‌ಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳು, ಶಿಕ್ಷಕರ ತಪಾಸಣೆ, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕು‘ ಎಂದು ಸಲಹೆ ನೀಡಿದರು.
ಮಂಜುನಾಥ್ ಅವರು ಪ್ರತಿಕ್ರಿಯಿಸಿ, ’ಖಾಸಗಿ ಶಾಲೆಗಳಲ್ಲಿ ಮಕ್ಕಳಲ್ಲಿ ರೋಗ ಲಕ್ಷಣ ಅಥವಾ ಸೋಂಕು ಕಂಡು ಬಂದರೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕರೆ ಮಾಡಿದರೆ, ಅವರು ತಾಲ್ಲೂಕು ಆರೋಗ್ಯಧಿಕಾರಿ ಅವರನ್ನು ಸಂಪರ್ಕಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತಾರೆ. ಶಾಲೆಗಳಿಗೆ ನರ್ಸ್‌ಗಳನ್ನು ಕಳುಹಿಸಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಿಎಚ್‌ಒ ಅವರೊಂದಿಗೆ ಮಾತನಾಡುತ್ತೇನೆ‘ ಎಂದು ಭರವಸೆ ನೀಡಿದರು.
ಹನೂರಿನ ಗೌತಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಅವರು, ’ಶಾಲೆಯಲ್ಲಿ ಈಗಾಗಲೇ ಅರ್ಧದಷ್ಟು ಮಕ್ಕಳು ಬರುತ್ತಿಲ್ಲ. ಶಾಲೆಯಲ್ಲಿ ಪಾಳಿ ವ್ಯವಸ್ಥೆಯಲ್ಲಿ ಪಾಠ ಮಾಡುವಂತೆ ಬಿಇಒ ಅವರು ಹೇಳುತ್ತಿದ್ದಾರೆ. ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಇರುವಾಗ ಪಾಳಿ ವ್ಯವಸ್ಥೆ ಅಗತ್ಯವಿದೆಯೇ‘ ಎಂದು ಪ್ರಶ್ನಿಸಿದರು.
’ಪಾಳಿ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಾಠ ಮಾಡಿದರೆ, ಸೋಂಕು ಹರಡುವಿಕೆ ತಡೆಯಲು ಸಾಧ್ಯವಾಗುತ್ತದೆ‘ ಎಂದು ಡಿಡಿಪಿಐ ಹೇಳಿದರು.
ಮಕ್ಕಳಿಗೆ ಧೈರ್ಯ ತುಂಬಿ
ಗುಂಡ್ಲುಪೇಟೆಯಿಂದ ಯೋಗೇಶ್ ಅವರು ಮಾತನಾಡಿ, ‘ಕೋವಿಡ್ ಕಾರಣಕ್ಕೆ ಮಕ್ಕಳಿಗೆ ನಿರಂತರವಾಗಿ ರಜೆ ಇದ್ದುದರಿಂದ ಅವರ ಬೌದ್ಧಿಕ ಶಕ್ತಿ ಕುಸಿದಿದೆ. ಅದನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಕೊಳ್ಳೇಗಾಲದ ಹೊಸ ಅಣಗಳ್ಳಿಯಿಂದ ಕರೆ ಮಾಡಿದ್ದ ಪ್ರಸನ್ನ ಕುಮಾರ್ ಅವರು, ‘ಪೋಷಕರಿಗೆ ಲಸಿಕೆ ವಿತರಿಸಲಾಗಿದೆ. 15ರಿಂದ 18 ವರ್ಷದ ಮಕ್ಕಳಿಗೂ ನೀಡಲಾಗುತ್ತಿದೆ. ಉಳಿದ ಮಕ್ಕಳಿಗೆ ಯಾವಾಗ ಕೊಡುತ್ತೀರಿ’ ಎಂದು ಪ್ರಶ್ನಿಸಿದರು.
ಕೊಳ್ಳೇಗಾಲದ ಜಯಶಂಕರ್ ಅವರು ಕರೆ ಮಾಡಿ, ‘ಶಾಲಾ ಮಕ್ಕಳಲ್ಲಿ ಈಗ ಕೋವಿಡ್ ಭಯ ಆವರಿಸಿದೆ. ವಿದ್ಯಾರ್ಥಿಯೊಬ್ಬನಿಗೆ ಕೆಮ್ಮು ನೆಗಡಿ ಇದ್ದರೆ, ಉಳಿದವರು ಆತನ ಹತ್ತಿರ ಹೋಗುತ್ತಿಲ್ಲ. ಮಕ್ಕಳು ಭಯಮುಕ್ತ ವಾತಾವರಣದಲ್ಲಿ ಓದಲು ಇಲಾಖೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ಅವರಲ್ಲಿ ಧೈರ್ಯ ತುಂಬಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರದಂತಹ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಮನವಿ ಮಾಡಿದರು.
ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ ಮಂಜುನಾಥ್ ಅವರು, ‘ಮಕ್ಕಳಲ್ಲಿ ಬೌದ್ಧಿಕ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. 4ರಿಂದ 5ನೇ ತರಗತಿ ಮಕ್ಕಳಿಗಾಗಿ ಓದು ಕರ್ನಾಟಕ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. 12ರಿಂದ 14 ವರ್ಷದ ಮಕ್ಕಳಿಗೆ ಶೀಘ್ರದಲ್ಲಿ ಲಸಿಕೆ ವಿತರಿಸುವ ಸಾಧ್ಯತೆ ಇದೆ. ಮಕ್ಕಳಲ್ಲಿರುವ ಕೋವಿಡ್ ಭಯ ಹೋಗಲಾಡಿಸಲು ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸಲು ಕ್ರಮ ವಹಿಸಲಾಗುವುದು’ ಎಂದರು.
ನಿರ್ವಹಣೆ: ಸೂರ್ಯನಾರಾಯಣ ವಿ., ಫೋಟೊ– ಸಿ.ಆರ್.ವೆಂಟರಾಮು
’ಪ್ರಜಾವಾಣಿ‘ಯು ಬುಧವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು, ಪೋಷಕರು ಹಾಗೂ ಮಕ್ಕಳು ಕರೆ ಮಾಡಿ ಕೋವಿಡ್ ಹರಡುತ್ತಿರುವ ಬಗ್ಗೆ ವ್ಯಕ್ತಪಡಿಸಿದ ಆತಂಕ ಹಾಗೂ ಕೇಳಿದ ಪ್ರಶ್ನೆಗಳಿಗೆ ಮಂಜುನಾಥ್ ಅವರು ಸಾವಧಾನದಿಂದ ವಿವರವಾಗಿ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.