ADVERTISEMENT

ಚಾಮರಾಜನಗರ: ಏರಿಕೆ ಕಂಡ ಕೋವಿಡ್‌, 146 ಪ್ರಕರಣ

ಮುಂದುವರಿದ ವಾರಾಂತ್ಯ ಕರ್ಫ್ಯೂ, ನಗರ, ಪಟ್ಟಣಗಳಲ್ಲಿ ಜನ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 16:38 IST
Last Updated 16 ಜನವರಿ 2022, 16:38 IST
ವಾರಾಂತ್ಯ ಕರ್ಫ್ಯೂವಿನ ಕಾರಣಕ್ಕೆ ಚಾಮರಾಜನಗರದ ಡೀವಿಯೇಷನ್‌ ರಸ್ತೆಯು ಭಾನುವಾರ ವಾಹನಗಳ ಸಂಚಾರವಿಲ್ಲದೆ ಬಿಕೊ ಎನ್ನುತ್ತಿತ್ತು
ವಾರಾಂತ್ಯ ಕರ್ಫ್ಯೂವಿನ ಕಾರಣಕ್ಕೆ ಚಾಮರಾಜನಗರದ ಡೀವಿಯೇಷನ್‌ ರಸ್ತೆಯು ಭಾನುವಾರ ವಾಹನಗಳ ಸಂಚಾರವಿಲ್ಲದೆ ಬಿಕೊ ಎನ್ನುತ್ತಿತ್ತು   

ಚಾಮರಾಜನಗರ: ಎರಡು ದಿನಗಳಿಂದ ಇಳಿಮುಖವಾಗಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾನುವಾರ ಏರಿಕೆ ಕಂಡು ಬಂದಿವೆ. 

3,010 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 144 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇಬ್ಬರಿಗೆ ಮೈಸೂರಿನಲ್ಲಿ ಸೋಂಕು ಇರುವುದು ಖಚಿತವಾಗಿದ್ದು, ಜಿಲ್ಲೆಯಲ್ಲಿ 146 ಪ್ರಕರಣಗಳು ದೃಢಪಟ್ಟಂತಾಗಿದೆ. 

ಭಾನುವಾರ 22 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 736ಕ್ಕೆ ಏರಿದೆ. ಈ ಪೈಕಿ 296 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಭಾನುವಾರ 65 ಮಂದಿಯನ್ನು ಹೋಂ ಐಸೊಲೇಷನ್‌ಗೆ ಕಳುಹಿಸಲಾಗಿದೆ. ಐಸಿಯುನಲ್ಲಿ ಯಾರೂ ಇಲ್ಲ. 

ADVERTISEMENT

ಭಾನುವಾರ ದೃಢಪಟ್ಟ 146 ಮಂದಿಯಲ್ಲಿ ಒಂಬತ್ತು ಮಕ್ಕಳು. ಗ್ರಾಮೀಣ ಭಾಗದಲ್ಲಿ ಕೋವಿಡ್‌ನ ಓಟ ಮುಂದುವರಿದೆ. 146 ಪ್ರಕರಣಗಳ ಪೈಕಿ 32 ಅನ್ನು ಬಿಟ್ಟು ಉಳಿದೆಲ್ಲವೂ ಗ್ರಾಮೀಣ ಭಾಗಕ್ಕೆ ಸೇರಿದವು. 

ತಾಲ್ಲೂಕುವಾರು ಪ್ರಕರಣ: ಭಾನುವಾರ ಅತಿ ಹೆಚ್ಚು ಪ್ರಕರಣಗಳು (41) ಕೊಳ್ಳೇಗಾಲ ತಾಲ್ಲೂಕಿನಲ್ಲಿ ವರದಿಯಾಗಿವೆ. ಚಾಮರಾಜನಗರದಲ್ಲಿ 39, ಹನೂರಿನಲ್ಲಿ 32, ಗುಂಡ್ಲುಪೇಟೆಯಲ್ಲಿ 23 ಹಾಗೂ ಯಳಂದೂರಿನಲ್ಲಿ 10 ಪ್ರಕರಣ ದೃಢಪಟ್ಟಿವೆ. ಒಂದು ಪ್ರಕರಣ ಹೊರ ಜಿಲ್ಲೆಗೆ ಸೇರಿದೆ. 

ವಾರಾಂತ್ಯ ಕರ್ಫ್ಯೂ ಮುಂದುವರಿಕೆ

ಈ ಮಧ್ಯೆ, ಕೋವಿಡ್‌ ಹರಡುವಿಕೆ ತಡೆಗೆ ವಾರಾಂತ್ಯ ಕರ್ಫ್ಯೂ ಜಿಲ್ಲೆಯಾದ್ಯಂತ ಭಾನುವಾರವೂ ಮುಂದುವರಿಯಿತು.

ಜಿಲ್ಲಾ ಕೇಂದ್ರ ಸೇರಿದಂತೆ ನಗರ, ಪಟ್ಟಣಗಳಲ್ಲಿ ಜನ ಜೀವನ ಸ್ತಬ್ಧವಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಜನ ಸಂಚಾರ ಇದ್ದರೂ ಎಂದಿನಂತೆ ಇರಲಿಲ್ಲ. ಕೂಲಿ ಕಾರ್ಮಿಕರು, ರೈತರು ಹಾಗೂ ಅನಿವಾರ್ಯ ಇದ್ದವರು ಮಾತ್ರ ಓಡಾಟ ನಡೆಸುತ್ತಿದ್ದರು. 

ನಗರ, ಪಟ್ಟಣ ಪ್ರದೇಶಗಲ್ಲಿ ಆಸ್ಪತ್ರೆ, ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳನ್ನು ಬಿಟ್ಟು ಉಳಿದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಲವು ಹೋಟೆಲ್‌ಗಳು ತೆರೆದು ಪಾರ್ಸೆಲ್‌ ಸೌಲಭ್ಯ ನೀಡಿದವು. ದೇವಸ್ಥಾನಗಳೆಲ್ಲ ಮುಚ್ಚಿದ್ದವು. ಬೆರಳೆಣಿಕೆಯ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಜನರು, ವಾಹನಗಳ ಓಡಾಟವೂ ವಿರಳವಾಗಿತ್ತು. ಭಾನುವಾರವಾಗಿದ್ದರಿಂದ ಜನರು ಮನೆಯಿಂದ ಹೊರಗಡೆ ಬರಲಿಲ್ಲ.

ಸಾರಾಂಶ

3,010 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 144 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಇಬ್ಬರಿಗೆ ಮೈಸೂರಿನಲ್ಲಿ ಸೋಂಕು ಇರುವುದು ಖಚಿತವಾಗಿದ್ದು, ಜಿಲ್ಲೆಯಲ್ಲಿ 146 ಪ್ರಕರಣಗಳು ದೃಢಪಟ್ಟಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.