ಹನೂರು: ಕೊಳ್ಳೇಗಾಲ-ಹನೂರು ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಕೆ-ಶಿಪ್ ಅಧಿಕಾರಿಗಳು ಯೋಜನೆ ರೂಪಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಅಂಬೇಡ್ಕರ್ ಪ್ರತಿಮೆಯು ಈಗ ಇರುವ ಜಾಗದಲ್ಲೇ ಇರಬೇಕು. ಆ ಪ್ರದೇಶದಲ್ಲಿ ವ್ಯವಸ್ಥಿತ ವೃತ್ತವನ್ನು ಅಭಿವೃದ್ಧಿ ಪಡಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಕೊಳ್ಳೇಗಾಲದಿಂದ ಹನೂರಿನವರೆಗೆ, ₹108 ಕೋಟಿ ವೆಚ್ಚದ 23 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.
ರಸ್ತೆ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತ ಹಾಗೂ ಪ್ರತಿಮೆಯನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಬಳಿಗೆ ಸ್ಥಳಾಂತರಿಸಲು ಕಾಮಗಾರಿಯನ್ನು ನಡೆಸುತ್ತಿರುವ ಕೆ–ಶಿಪ್‌ನ ಅಧಿಕಾರಿಗಳು ಯೋಜಿಸಿದ್ದಾರೆ.
ಈಗ ಇರುವ ಜಾಗದಿಂತೆ ಬಾಬಾ ಸಾಹೇಬರ ಪ್ರತಿಮೆಯನ್ನು ಸ್ಥಳಾಂತರಿಸಬಾರದು ಎಂಬುದು ದಲಿತ ಮುಖಂಡರ ಒತ್ತಾಯ.
’ಮುಂದಿನ ದಿನಗಳಲ್ಲಿ ಹನೂರು ದೊಡ್ಡ ತಾಲ್ಲೂಕು ಕೇಂದ್ರವಾಗಲಿದೆ. ಲೊಕ್ಕನಹಳ್ಳಿ ಹಾಗೂ ಹನೂರು ಎರಡು ಹೋಬಳಿಗಳಿಗೆ ಈ ವೃತ್ತ ಕೇಂದ್ರವಾಗಲಿದೆ. ಅಲ್ಲದೇ ರಾಷ್ಟ್ರದ ನಾಯಕರೊಬ್ಬರ ಪ್ರತಿಮೆ ಹಾಗೂ ಅವರ ಹೆಸರಿನಲ್ಲಿರುವ ವೃತ್ತವನ್ನು ಸ್ಥಳಾಂತರ ಮಾಡುವುದು ಸರಿಯಾದ ಕ್ರಮವಲ್ಲ. ಕೆ.ಶಿಪ್ ಅಧಿಕಾರಿಗಳು ತಮ್ಮ ಯೋಜನೆಯನ್ನು ಕೈಬಿಡಬೇಕು. ಪ್ರತಿಮೆಯನ್ನು ಅಲ್ಲೇ ಉಳಿಸಿಕೊಂಡು, ಸುವ್ಯವಸ್ಥಿತ ವೃತ್ತವನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಹಾಗೂ ಜಿಲ್ಲಾ ದಲಿತಪರ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗುವುದು‘ ಎಂದು ಮುಖಂಡ ರವೀಂದ್ರ ಅವರು ಹೇಳಿದರು.
2000-2001ರಲ್ಲಿ ಹನೂರು ಗ್ರಾಮಪಂಚಾಯಿತಿಯಾಗಿದ್ದ ಸಮಯದಲ್ಲೇ ವೃತ್ತ ಎಂದು ನಮೂದಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಗೌತಮ್ ಸಂಘದಿಂದ ಮನವಿ ಸಲ್ಲಿಸಿ ವೃತ್ತವನ್ನು ನಿರ್ಮಿಸಲಾಗಿತ್ತು. 20 ವರ್ಷಗಳಿಂದಲೂ ಇದು ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ರಸ್ತೆ ಅಭಿವೃದ್ಧಿಯ ನೆಪವೊಡ್ಡಿ ವೃತ್ತವನ್ನೇ ಸರಿಸುವ ಪ್ರಕ್ರಿಯೆಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಸಮುದಾಯದ ಮುಖಂಡರಿಂದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರು ನಮ್ಮ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ‘ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್. ಸಿದ್ದರಾಜು ಅವರು ’ಪ್ರಜಾವಾಣಿ‘ಗೆ ತಿಳಿಸಿದರು.
ಈ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ರಸ್ತೆ ಅಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಮುತ್ತಣ್ಣ ಅವರು, ’ಸ್ಥಳೀಯರು ಅಂಬೇಡ್ಕರ್ ಪ್ರತಿಮೆ ಇರುವ ಸ್ಥಳವನ್ನು ವೃತ್ತ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲಿಂದ ಬರುವ ಮಾಹಿತಿ ಆಧರಿಸಿ ಮುಂದಿನ ಕಾಮಗಾರಿ ಕೈಗೊಳ್ಳಲಾಗುವುದು‘ ಎಂದರು.
ಪ್ರತಿಕ್ರಿಯೆಗಾಗಿ ಶಾಸಕ ಆರ್.ನರೇಂದ್ರ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
*
ಅಂಬೇಡ್ಕರ್ ವೃತ್ತ ಮೊದಲಿನಿಂದಲೂ ಇದೆ. ಈಗ ಕೆ–ಶಿಪ್‌ನವರು ಪ್ರತಿಮೆ ಸಹಿತ ವೃತ್ತವನ್ನು ಬದಿಗೆ ಸರಿಯಲು ಯೋಜಿಸುತ್ತಿದ್ದಾರೆ.
ಎಸ್.ಸಿದ್ದರಾಜು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ
*
ವೃತ್ತವನ್ನು ಸ್ಥಳಾಂತರಿಸದಂತೆ ಈಗಾಗಲೇ ಶಾಸಕರಿಗೆ ಮನವಿ ಮಾಡಲಾಗಿದೆ. ಅವರು ವೃತ್ತ ನಿರ್ಮಿಸಲು ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.
ಬಸವರಾಜು, ಮಾಜಿ ಉಪಾಧ್ಯಕ್ಷ, ಪಟ್ಟಣ ಪಂಚಾಯಿತಿ
*
ಈಗಿರುವ ಸ್ಥಳದಲ್ಲೇ ವೃತ್ತ ನಿರ್ಮಿಸಬೇಕು, ಬೇರೆಡೆ ಸ್ಥಳಾಂತರ ಮಾಡಲು ಮುಂದಾದರೆ ಪ್ರಗತಿಪರ ಸಂಘಟನೆಗಳ ಜತೆಗೂಡಿ ಹೋರಾಟ ನಡೆಸಬೇಕಾಗುತ್ತದೆ.
ರವೀಂದ್ರ, ಹನೂರು.
ಹನೂರು: ಕೊಳ್ಳೇಗಾಲ-ಹನೂರು ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಕೆ-ಶಿಪ್ ಅಧಿಕಾರಿಗಳು ಯೋಜನೆ ರೂಪಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.