ಚಾಮರಾಜನಗರ: ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಸತಿಗೃಹದಲ್ಲಿ ಅವಧಿ ಮೀರಿ ವಾಸವಿದ್ದ ಕಾರಣಕ್ಕೆ, ದೇವಾಲಯದ ನೌಕರ, ದಿವಂಗತ ಜಯಸ್ವಾಮಿ ಅವರ ಕುಟುಂಬದ ಸದಸ್ಯರನ್ನು ಅಧಿಕಾರಿಗಳು ಬಲವಂತವಾಗಿ ತೆರವುಗೊಳಿಸಿ ಆರು ದಿನಗಳು ಕಳೆದಿವೆ. ಅವರ ಪತ್ನಿ, ಮಗ ಹಾಗೂ ಮಗಳು ಮನೆಯ ಹೊರಗೆ ವಾಸಿಸುತ್ತಿದ್ದಾರೆ.
‘ಸಾಮಗ್ರಿಗಳೆಲ್ಲ ಬೀದಿಯಲ್ಲಿವೆ. ಊಟ, ನಿದ್ದೆ ಕೂಡ ಹೊರಗಡೆಯೇ. ಪ್ರಾಧಿಕಾರವು ತಂದೆಗೆ ಬರಬೇಕಾದ ಗ್ರಾಚ್ಯುಟಿ, ಇಪಿಎಫ್ ಹಣವನ್ನು ಇತ್ಯರ್ಥ ಮಾಡುವವರೆಗೂ ಸ್ಥಳದಿಂದ ಕದಲುವುದಿಲ್ಲ’ ಎಂದು ಜಯಸ್ವಾಮಿ ಮಗ ಶಾಂತ ಮಲ್ಲೇಶ್ ಹೇಳಿದ್ದಾರೆ.
ಈ ಮಧ್ಯೆ, ‘ಕೋವಿಡ್ ನಿಯಮ ಜಾರಿಯಲ್ಲಿದ್ದರೂ ರಾತ್ರೋ ರಾತ್ರಿ ಬಡ ಕುಟುಂಬವನ್ನು ಮನೆಯಿಂದ ಹೊರಹಾಕಲಾಗಿದೆ’ ಎಂದು ಕಸ್ತೂರಿ ಕರ್ನಾಟಕ ನ್ಯಾಯಪರ ಸಂಘಟನೆ ಆರೋಪಿಸಿದೆ.
‘ಕುಟುಂಬಕ್ಕೆ ತಕ್ಷಣವೇ ಮನೆಯನ್ನು ವಾಪಸ್ ನೀಡಬೇಕು. ಅನುಕಂಪದ ಆಧಾರದಲ್ಲಿ ಶಾಂತ ಮಲ್ಲೇಶ್ ಅವರಿಗೆ ಕೆಲಸ ನೀಡಬೇಕು. ಇಲ್ಲದಿದ್ದರೆ ಕನ್ನಡ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸಲಾಗುವುದು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಿರೀಶ್ ಶಿವಾರ್ಚಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಜಯಸ್ವಾಮಿ 30 ವರ್ಷ ದೇವಾಲಯದಲ್ಲಿ ದುಡಿದಿದ್ದರೂ, ಹಿಟ್ಲರ್ ರೀತಿಯಲ್ಲಿ ವರ್ತಿಸಿ ಕುಟುಂಬವನ್ನು ಬೀದಿಗೆ ತಂದಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೂ ದೂರು ನೀಡಲಾಗುವುದು’ ಎಂದರು.
‘ಎರಡು ದಿನ ಅವಕಾಶ ನೀಡುವಂತೆ ಕಾರ್ಯದರ್ಶಿಗೆ ಮನವಿ ಮಾಡಿದ್ದರೂ, ಮನೆಯಿಂದ ಹೊರಗೆ ಹಾಕಿದರು. ಸ್ವಂತ ಊರಾದ ಕಾಮಗೆರೆಯಲ್ಲಿ ಜಮೀನಷ್ಟೇ ಇದೆ. ಮನೆ ಇಲ್ಲ. ಹೀಗಾಗಿ ವಸತಿ ಗೃಹದ ಹೊರಗಡೆಯೇ ಇದ್ದೇವೆ’ ಎಂದು ಶಾಂತಮಲ್ಲೇಶ್ ಅಳಲು ತೋಡಿಕೊಂಡರು.
‘ತಂದೆ ನಿಧನರಾದ ನಂತರ ಪ್ರಾಧಿಕಾರವು ಗ್ರ್ಯಾಚ್ಯುಟಿ ಸೇರಿದಂತೆ ಬಾಕಿ ಹಣವನ್ನು ನೀಡಿದ್ದರೆ ವಸತಿಗೃಹದಲ್ಲಿರುವ ಪ್ರಮೇಯವೇ ಬರುತ್ತಿರಲಿಲ್ಲ. ತಮಗೆ ನಿಷ್ಠರಾಗಿರುವ ನೌಕರರಿಗೆ ಮನೆ ಕೊಡುವ ಸಲುವಾಗಿ ಕಾರ್ಯದರ್ಶಿ ನಮ್ಮನ್ನು ಬೀದಿಗೆ ತಂದಿದ್ದಾರೆ’ ಎಂದು ಆರೋಪಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್, ಉಪಾಧ್ಯಕ್ಷ ರವಿಕುಮಾರ್, ಸದಸ್ಯ ಸುಮನ್ ಇದ್ದರು.
‘ವಿವರಣೆ ಕೇಳಲಾಗಿದೆ’
ಮನೆ ಖಾಲಿ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್ ಅವರು, ‘ಘಟನೆ ನಡೆದ ದಿನವೇ ನನಗೆ ಮಾಹಿತಿ ಬಂತು. ತಕ್ಷಣವೇ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಗಮನಕ್ಕೆ ತಂದಿದ್ದೇನೆ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ಅವರು ಕೂಡ ಪ್ರಾಧಿಕಾರದ ಕಾರ್ಯದರ್ಶಿ ಅವರಿಂದ ವಿವರಣೆ ಕೇಳಿದ್ದಾರೆ’ ಎಂದರು.
ಉದ್ಯೋಗ ನೀಡಲು ಆಗ್ರಹ
ಮಹದೇಶ್ವರ ಬೆಟ್ಟ: ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯಾಧ್ಯಕ್ಷೆ ಲಕ್ಷ್ಮಿ ಮಹೇಶ್ ಅವರು ಗುರುವಾರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ಬೀದಿಯಲ್ಲಿರುವ ಕುಟುಂಬದ ಯೋಗ ಕ್ಷೇಮ ವಿಚಾರಿಸಿದರು.
’30 ವರ್ಷಗಳಿಂದ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಜಯಸ್ವಾಮಿ ಅವರ ಕುಟುಂಬಕ್ಕೆ ಪ್ರಾಧಿಕಾರ ಅನ್ಯಾಯ ಮಾಡಿದೆ. ವಾರಾಂತ್ಯ ಕರ್ಫ್ಯೂವನ್ನೂ ಲೆಕ್ಕಿಸದೆ ರಾತ್ರಿ ವೇಳೆಯಲ್ಲಿ ಕುಟುಂಬವನ್ನು ಬೀದಿ ಪಾಲು ಮಾಡಿರುವುದು ಖಂಡನೀಯ. ಆ ಕುಟುಂಬಕ್ಕೆ ನೀಡಬೇಕಾಗಿರುವ ಬಾಕಿ ಹಣ ನೀಡಬೇಕು. ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ‘ ಎಂದು ಎಚ್ಚರಿಸಿದರು.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಸತಿಗೃಹದಲ್ಲಿ ಅವಧಿ ಮೀರಿ ವಾಸವಿದ್ದ ಕಾರಣಕ್ಕೆ, ದೇವಾಲಯದ ನೌಕರ, ದಿವಂಗತ ಜಯಸ್ವಾಮಿ ಅವರ ಕುಟುಂಬದ ಸದಸ್ಯರನ್ನು ಅಧಿಕಾರಿಗಳು ಬಲವಂತವಾಗಿ ತೆರವುಗೊಳಿಸಿ ಆರು ದಿನಗಳು ಕಳೆದಿವೆ. ಅವರ ಪತ್ನಿ, ಮಗ ಹಾಗೂ ಮಗಳು ಮನೆಯ ಹೊರಗೆ ವಾಸಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.