ಚಾಮರಾಜನಗರ: ಸ್ಮಶಾನಕ್ಕೆ ಜಾಗದ ಕೊರತೆ, ಶಾಲೆಯ ಬಳಿ ಇರುವ ಮದ್ಯದ ಅಂಗಡಿ ಸ್ಥಳಾಂತರಿಸಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಶಾಲೆಯ ಜಾಗ ಒತ್ತುವರಿ ತೆರವುಗೊಳಿಸಿ, ಎಲ್ಲರಿಗೂ ಶೌಚಾಲಯ ಕಲ್ಪಿಸಿ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನೇ ಯಳಂದೂರು ತಾಲ್ಲೂಕಿನ ಗೌಡ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತದ ಮುಂದೆ ಇಟ್ಟರು.
ಅಗರ ಹೋಬಳಿಯ ಗೌಡಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ–ಗ್ರಾಮದ ಕಡೆಗೆ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. 50ಕ್ಕೂ ಹೆಚ್ಚು ಕುಂದು ಕೊರತೆಗಳು ಸಲ್ಲಿಕೆಯಾದವು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಅಹವಾಲುಗಳನ್ನು ಸ್ವೀಕರಿಸಿದರು.
ಸ್ಮಶಾನಕ್ಕೆ ಜಾಗ ಕೊಡಿ: ’ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬನ್ನಿಸಾರಿಗೆ ಹಾಗೂ ಟಿ.ಹೊಸೂರು ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆಯಾಗಿದ್ದು, ಈಗಿರುವ ಸ್ಮಶಾನದ ಜಾಗ ಒತ್ತುವರಿಯಾಗಿದೆ. ಶವ ಹೂಳಲು ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಸರ್ವೆ ಮಾಡಿಸಿ ಜಾಗ ನೀಡಬೇಕು‘ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾತ್ಯಾಯಿನಿದೇವಿ ಅವರು, ’ಸ್ಮಶಾನಕ್ಕೆ ಸಮಸ್ಯೆಯಾಗಿರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾದಡಿ ಬೇಲಿ ಅಳವಡಿಸುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
’ಗ್ರಾಮದಲ್ಲಿರುವ ಶಾಲೆಗೆ ಜಾಗವನ್ನು ದಾನಿಗಳು ನೀಡಿದ್ದು, ಆ ಜಾಗ ಕೂಡ ಒತ್ತುವರಿಯಾಗಿದೆ. ಒತ್ತುವರಿಯನ್ನು ಆದಷ್ಟು ಬೇಗ ತೆರವುಗೊಳಿಸಬೇಕು‘ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಮನವಿ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿ, ’ದಾಖಲೆಗಳನ್ನು ಪರಿಶೀಲಿಸಿ ಸರ್ವೆ ನಡೆಸಿ ಶಾಲೆಗೆ ಸೇರಬೇಕಾದ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
’ಬೇಸಿಗೆಯಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತದೆ. ವಿದ್ಯುತ್ ಸಮಸ್ಯೆ ಆಗಾಗ್ಗೆ ತಲೆದೋರುತ್ತಿದೆ. ಇದರ ನಿವಾರಣೆಗಾಗಿ ಸೋಲಾರ್ ಘಟಕ ಸ್ಥಾಪಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯವಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ದರಪಟ್ಟಿ ಪ್ರದರ್ಶಿಸಬೇಕು. ಇ-ಕೆವೈಸಿ ಮಾಡಿಕೊಡಲು ಸಮಯ ನಿಗದಿ ಮಾಡಿಕೊಳ್ಳಬೇಕು. ವಡ್ಡಗೆರೆಯಿಂದ ಅಲ್ಕೆರೆ ಅಗ್ರಹಾರದವರೆಗೆ ರೈತರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಪವರ್ ಸ್ಟೇಷನ್ ಮಾಡಿಕೊಡಬೇಕು‘ ಎಂದು ಸುಂದರ್ ಕಲಿವೀರ್ ಎಂಬುವವರು ಮನವಿ ಮಾಡಿದರು.
ಶೌಚಾಲಯ ನಿರ್ಮಿಸಿ: ಮಲಾರಪಾಳ್ಯ ಗ್ರಾಮದ ಮಧುಮಾಲತಿ ಎಂಬುವವರು, ’ಈ ಭಾಗದ ಗ್ರಾಮಗಳಲ್ಲಿ ಜನರು ರಸ್ತೆಪಕ್ಕದಲ್ಲಿ ಹಾಗೂ ಬಯಲು ಶೌಚ ಮಾಡುತ್ತಿದ್ದು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಂಚಾಯಿತಿ ವತಿಯಿಂದ ಎಲ್ಲರೂ ಶೌಚಾಲಯ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು‘ ಎಂದು ಮನವಿ ಸಲ್ಲಿಸಿದರು.
ರಸ್ತೆ ಅಭಿವೃದ್ಧಿ, ಚರಂಡಿ ಸ್ವಚ್ಛತೆ, ಗ್ರಾಮಕ್ಕೆ ಸಾರಿಗೆ ಬಸ್ ಸಂಪರ್ಕ, ಆಸ್ಪತ್ರೆ, ಅಂಗನವಾಡಿ, ಕುಡಿಯುವ ನೀರು, ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ವಸತಿ ವ್ಯವಸ್ಥೆ, ವಿವಿಧ ನಿಗಮಗಳಿಂದ ಸಾಲ ಸೌಲಭ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತ್ವರಿತವಾಗಿ ಪರಿಹರಿಸುವ ಭರವಸೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ಆರ್.ರಘು, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ತಹಶೀಲ್ದಾರ್ ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪೌತಿ ಖಾತೆ ಆಂದೋಲನ ಆಯೋಜಿಸಿ
ಗೌಡಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡ ಪಂಚಾಯಿತಿಯಾಗಿದ್ದು, ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ ಆಂದೋಲನ ಆಯೋಜಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರು ಸೂಚಿಸಿದರು.
’ಯಾರಿಗೆ ಪೌತಿ ಖಾತೆ ಅವಶ್ಯವಿದೆಯೋ ಅವರಿಗೆ ಪೌತಿ ಖಾತೆಗಳನ್ನು ಮಾಡಿಕೊಡಬೇಕು. ಅಲ್ಲದೇ ಆರ್.ಟಿ.ಸಿ ಯಲ್ಲಿ ತಿದ್ದುಪಡಿ ಅಗತ್ಯವಿರುವವರಿಂದ ದಾಖಲೆಗಳನ್ನು ಪಡೆದು ಆರ್.ಟಿ.ಸಿ ಸರಿಪಡಿಸಿಕೊಡುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಿಕೊಡಬೇಕು‘ ಎಂದು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಮದ್ಯದ ಅಂಗಡಿ ಸ್ಥಳಾಂತರಿಸಿ’
‘ಅಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಅನಧಿಕೃತವಾಗಿ ಜ್ಯೂಸ್ ಅಂಗಡಿ ಹೆಸರಿನಲ್ಲಿ ಮದ್ಯದ ಅಂಗಡಿ ತೆರೆಯಲಾಗಿದ್ದು, ಪಂಚಾಯಿತಿಯಿಂದ ಎರಡು ಬಾರಿ ನೋಟಿಸ್ ನೀಡಿದ್ದರೂ ಸ್ಥಳಾಂತರವಾಗಿಲ್ಲ. ಬಾರ್ ಪಕ್ಕದಲ್ಲಿ ಶಾಲೆ ಇದೆ. ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತಿದೆ. ಜನರು ಮೋಜು-ಮಸ್ತಿ ಹೆಚ್ಚಾಗಿ ಅರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಬೇಕು‘ ಎಂದು ಅಲ್ಕೆರೆ ಅಗ್ರಹಾರದ ಗ್ರಾಮಸ್ಥರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅವರು, ಈ ವಿಚಾರವನ್ನು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿಸಿ, ಅಧಿಕಾರಿಗಳ ಗೈರಿಗೆ ಅಸಮಾಧಾನ
ಜಿಲ್ಲಾಧಿಕಾರಿ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳೂ ಕಡಿಮೆ ಸಂಖ್ಯೆಯಲ್ಲಿದ್ದರು.
ಇದಕ್ಕೆ ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಅವರು ಬಂದಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳೂ ಇಲ್ಲ. ಎಲ್ಲರೂ ಎರಡನೇ ಹಂತದ ಅಧಿಕಾರಿಗಳು ಇದ್ದಾರೆ. ಹೀಗಾದರೆ ನಮಗೆ ಸರ್ಕಾರದ ಸೌಲಭ್ಯಗಳು ಸಿಗುವುದು ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾತ್ಯಾಯಿನಿದೇವಿ ಅವರು, ’ಅನಿವಾರ್ಯ ಕಾರಣಗಳಿಂದ ಜಿಲ್ಲಾಧಿಕಾರಿ ಅವರು ಬಂದಿಲ್ಲ. ಅವರ ಬದಲಿಗೆ ನಾನು ಬಂದಿದ್ದೇನೆ‘ ಎಂದರು.
ಸ್ಮಶಾನಕ್ಕೆ ಜಾಗದ ಕೊರತೆ, ಶಾಲೆಯ ಬಳಿ ಇರುವ ಮದ್ಯದ ಅಂಗಡಿ ಸ್ಥಳಾಂತರಿಸಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಶಾಲೆಯ ಜಾಗ ಒತ್ತುವರಿ ತೆರವುಗೊಳಿಸಿ, ಎಲ್ಲರಿಗೂ ಶೌಚಾಲಯ ಕಲ್ಪಿಸಿ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನೇ ಯಳಂದೂರು ತಾಲ್ಲೂಕಿನ ಗೌಡ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತದ ಮುಂದೆ ಇಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.