ADVERTISEMENT

ಚಾಮರಾಜನಗರ: 1,000 ದಾಟಿದ ಸಕ್ರಿಯ ಪ್ರಕರಣ

ಒಂದೇ ದಿನ 268 ಪ್ರಕರಣ, 151 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:16 IST
Last Updated 19 ಜನವರಿ 2022, 15:16 IST
ಜಿಲ್ಲಾಡಳಿತ ಭವನದ ಒಳಾಂಗಣದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವುದಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಿರುವುದು
ಜಿಲ್ಲಾಡಳಿತ ಭವನದ ಒಳಾಂಗಣದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವುದಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಿರುವುದು   

ಚಾಮರಾಜನಗರ: ಬುಧವಾರ ಒಂದೇ ದಿನ ಜಿಲ್ಲೆಯ 268 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.  

ಈ ಪೈಕಿ ಜಿಲ್ಲೆಯಲ್ಲಿ 262 ಪ್ರಕರಣಗಳು ವರದಿಯಾಗಿದ್ದರೆ, ಆರು ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟಿವೆ. ಸೋಂಕಿತರು ದಾಖಲೆ ಸಂಖ್ಯೆಯಲ್ಲಿ ಗುಣಮುಖರಾಗಿದ್ದು, ಒಂದೇ ದಿನ 151 ಮಂದಿ ಚೇತರಿಸಿಕೊಂಡಿದ್ದಾರೆ.

ಹಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ 1,000 ದಾಟಿದೆ. ಸದ್ಯ ಜಿಲ್ಲೆಯಲ್ಲಿ 1,010 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 572 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಹೊಸದಾಗಿ ಸಾವಿನ ಪ್ರಕರಣ ವರದಿಯಾಗಿಲ್ಲ. ಐಸಿಯುನಲ್ಲಿ ಯಾರೂ ಇಲ್ಲ. 

ADVERTISEMENT

ಬುಧವಾರ ಸೋಂಕು ದೃಢಪಟ್ಟವರಲ್ಲಿ 229 ಮಂದಿಯನ್ನು ಹೋಂ ಐಸೊಲೇಷನ್‌ಗೆ ಕಳುಹಿಸಲಾಗಿದೆ. 

ಜಿಲ್ಲೆಯಲ್ಲಿ ಇದುವರೆಗೆ 34,052 ಮಂದಿಗೆ ಸೋಂಕು ಖಚಿತವಾಗಿದೆ. 32,500 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಬುಧವಾರ 3,039 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದೆ. ಈ ಪೈಕಿ 1,307 ಮಂದಿಯ ವರದಿ ನೆಗಟಿವ್‌ ಬಂದಿದೆ. 

ಸೋಂಕು ದೃಢಪಟ್ಟ 268 ಮಂದಿಯಲ್ಲಿ 40 ಮಂದಿ ಮಕ್ಕಳು. ಈ ಪೈಕಿ 16 ಮಂದಿ ನಗರ ಪ್ರದೇಶದವರಾದರೆ, 14 ಮಂದಿ ಗ್ರಾಮೀಣ ಭಾಗದವರು.

ಒಟ್ಟು ಪ್ರಕರಣಗಳಲ್ಲಿ 84 ಪ್ರಕರಣಗಳು ನಗರ ಪ್ರದೇಶಕ್ಕೆ ಸೇರಿವೆ. ಉಳಿದವು ಗ್ರಾಮೀಣ ಭಾಗದವು. 

ಕೋಳ್ಳೇಗಾಲ ತಾಲ್ಲೂಕಿನಲ್ಲಿ 100, ಚಾಮರಾಜನಗರದಲ್ಲಿ 85, ಗುಂಡ್ಲುಪೇಟೆಯಲ್ಲಿ 38, ಹನೂರಿನಲ್ಲಿ 31, ಯಳಂದೂರಿನಲ್ಲಿ 11 ಹಾಗೂ ಹೊರ ಜಿಲ್ಲೆಗಳಿಗೆ ಸೇರಿದ ಮೂರು ಪ್ರಕರಣಗಳು ವರದಿಯಾಗಿವೆ. 

ಮೊದಲ ಸಾವು: ಈ ಮಧ್ಯೆ, ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆಯಲ್ಲಿ ಮೊದಲ ಸಾವು ಸಂಭವಿಸಿದೆ. 

ಚಾಮರಾಜನಗರ ತಾಲ್ಲೂಕಿನ ಗಣಗನೂರು ಗ್ರಾಮದ ವ್ಯಕ್ತಿಯೊಬ್ಬರು ‌ಕೋವಿಡ್‌ನಿಂದಾಗಿ ಸೋಮವಾರ ಮೃತಪಟ್ಟಿದ್ದಾರೆ. ಜಿಲ್ಲಾಡಳಿತವು ಮಂಗಳವಾರದ ಕೋವಿಡ್‌ ವರದಿಯಲ್ಲಿ ಇದನ್ನು ಉಲ್ಲೇಖಿಸಿದೆ.  

50 ವರ್ಷ ವ್ಯಕ್ತಿಯು ಕೋವಿಡ್‌ ದೃಢಪಟ್ಟು 16ರಂದು (ಭಾನುವಾರ) ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೋಮವಾರ (ಜ.17) ಮೃತಪಟ್ಟಿದ್ದರು.  

’ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರು. ಎರಡೂ ಕಾಲುಗಳಲ್ಲಿ ನರ ದೌರ್ಬಲ್ಯ ಹೊಂದಿದ್ದರು. ಆ ಕಾರಣಕ್ಕೆ ಕೋವಿಡ್‌ ಲಸಿಕೆ ಪಡೆದಿರಲಿಲ್ಲ. ಅವರ ಮನೆಯವರೆಲ್ಲರೂ ಲಸಿಕೆ ಪಡೆದಿದ್ದರು. ಭಾನುವಾರ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಅವರು ಸ್ಪಂದಿಸಲಿಲ್ಲ‘ ಎಂದು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ’ಪ್ರಜಾವಾಣಿ‘ಗೆ ತಿಳಿಸಿದರು. 

ಜಿಲ್ಲಾಡಳಿತ ಭವನದಲ್ಲೇ ಕೋವಿಡ್‌ ಪರೀಕ್ಷೆ 

ಈ ಮಧ್ಯೆ, ಜಿಲ್ಲಾಡಳಿತ ಭವನದ ಒಳಾಂಗಣದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲು (ರ‍್ಯಾಟ್‌) ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿದ್ದು, ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು ಹೊರಗಡೆಯಿಂದ ಬರುವವರಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. 

ರ‍್ಯಾಟ್‌ ಕಿಟ್‌ನೊಂದಿಗೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಅವರ ಭೇಟಿಗೆ ಬರುವವರು ರ‍್ಯಾಟ್‌ ಪರೀಕ್ಷೆಗೆ ಒಳಪಡಬೇಕು. ವರದಿ ನೆಗೆಟಿವ್‌ ಬಂದವರಿಗೆ ಭೇಟಿಗೆ ಅವಕಾಶ ನೀಡಲಾಗುತ್ತಿದೆ. 

’ಜಿಲ್ಲಾಡಳಿತ ಭವನದಲ್ಲೇ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಡೆಯಿಂದ ಬರುವವರನ್ನು ಪರೀಕ್ಷಿಸುವುದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ‘ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರು ’ಪ್ರಜಾವಾಣಿ‘ಗೆ ತಿಳಿಸಿದರು. 

ಹೆಚ್ಚು ಪರೀಕ್ಷೆಗೆ ಅನುಕೂಲ: ’ಜಿಲ್ಲಾಧಿಕಾರಿ ಭೇಟಿಗೆ ಬರುವವರಿಗೆ ಎಂದು ಮಾತ್ರ ಅಲ್ಲ, ಅಧಿಕಾರಿಗಳು, ಜಿಲ್ಲಾಡಳಿತ ಭವನಕ್ಕೆ ವಿವಿಧ ಕೆಲಸಗಳಿಗೆ ಇತರರು ಕೂಡ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇದರಿಂದ ಹೆಚ್ಚು ಪರೀಕ್ಷೆಗಳನ್ನು ನಡೆಸಿದಂತಾಗುತ್ತದೆ. ಜನರಿಗೂ ಸುಲಭವಾಗಿ ಪರೀಕ್ಷೆ ನಡೆಸಲು ಅವಕಾಶ ಸಿಕ್ಕಿದಂತಾಗುತ್ತದೆ‘ ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು. 

ಸಾರಾಂಶ

ಈ ಪೈಕಿ ಜಿಲ್ಲೆಯಲ್ಲಿ 262 ಪ್ರಕರಣಗಳು ವರದಿಯಾಗಿದ್ದರೆ, ಆರು ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟಿವೆ. ಸೋಂಕಿತರು ದಾಖಲೆ ಸಂಖ್ಯೆಯಲ್ಲಿ ಗುಣಮುಖರಾಗಿದ್ದು, ಒಂದೇ ದಿನ 151 ಮಂದಿ ಚೇತರಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.