ಹನೂರು: ಕಾವೇರಿ ಕಣಿವೆಯ ಮಗ್ಗುಲಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಗಡಿ ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲೊಂದು. ಸುಗ್ಗಿ ಮುಗಿದು ದವಸಧಾನ್ಯಗಳನ್ನು ತುಂಬಿಕೊಳ್ಳುವ ಕೃಷಿಕ ಸಮುದಾಯಗಳಿಗೆ ಈ ಜಾತ್ರೆ ಸಮೃದ್ಧಿಯ ಸಂಕೇತ. ಐದು ಹಗಲು ಹಾಗೂ ಐದು ರಾತ್ರಿ ಅಪಾರ ಜನಸಂದಣಿಯಿಂದ ಜರುಗುವ ಈ ಜಾತ್ರೆಯ ಮೇಲೆ ಕಳೆದ ವರ್ಷ ಆವರಿಸಿದ ಕೋವಿಡ್ ಕರಿನೆರಳು ಈ ವರ್ಷವೂ ಸರಿದಿಲ್ಲ.
ಈ ವರ್ಷದ ಜಾತ್ರೆ ಸೋಮವಾರದಿಂದ (ಜ.17) 21ರವರೆಗೆ ನಿಗದಿಯಾಗಿದೆ. ಕೋವಿಡ್ ನಿರ್ಬಂಧಗಳಿರುವುದರಿಂದ ಅದ್ಧೂರಿ ಜಾತ್ರೆಗೆ ಜಿಲ್ಲಾಡಳಿತ ತಡೆಯೊಡ್ಡಿದೆ. ಅರ್ಚಕರು, ದೇವಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಜಾತ್ರೆಯ ಎಲ್ಲ ವಿಧಿವಿಧಾನಗಳನ್ನು ಆಚರಿಸಲಷ್ಟೇ ಜಿಲ್ಲಾಡಳಿತ ಅನುಮತಿ ನೀಡಿದೆ.
ಜನವರಿ ತಿಂಗಳ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೇ ರಾಜ್ಯದ ನಾನಾ ಕಡೆಗಳಿಂದ ಚಿಕ್ಕಲ್ಲೂರಿಗೆ ವಾರಗಟ್ಟಲೇ ಬಿಡಾರ ಹೂಡುತ್ತಿದ್ದ ಭಕ್ತರು ಹಾಗೂ ಸುತ್ತಮುತ್ತಲ ಏಳು ಗ್ರಾಮಗಳ ಜನರು ಸೇರಿ ವೈಭವದಿಂದ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಜನರಿಗೆ ಕೋವಿಡ್ ಈ ವರ್ಷವೂ ನಿರಾಸೆ ಮೂಡಿಸಿದೆ.
ಐದು ದಿನಗಳ ಜಾತ್ರೆಯಲ್ಲಿ ಮೊದಲ ದಿನ ಚಂದ್ರಮಂಡಲೋತ್ಸವ ನಡೆದರೆ, ಎರಡನೇ ದಿನ ದೊಡ್ಡವರ ಸೇವೆ (ಧರೆಗೆ ದೊಡ್ಡವರು ಎಂದು ಕರೆಯುವ ದೊಡ್ಡಮ್ಮ ತಾಯಿ ಮತ್ತು ರಾಚಾಪ್ಪಾಜಿ ಅವರಿಗೆ ಸಲ್ಲಿಸುವ ಸೇವೆ). ಮೂರನೇ ದಿನ ಮುಡಿಸೇವೆ ಅಥವಾ ನೀಲಗಾರರ ದೀಕ್ಷೆ, ನಾಲ್ಕನೇ ದಿನ ಪಂಕ್ತಿಸೇವೆ (ಸಿದ್ಧರ ಸೇವೆ), ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆಬಾಗಿಲ ಸೇವೆ ನಡೆಯುತ್ತದೆ. ಚಂದ್ರಮಂಡಲೋತ್ಸವ ಒಂದು ಬಿಟ್ಟು ಉಳಿದವೆಲ್ಲ ಸೇವೆಗಳೂ ಭಕ್ತರಿಗೆ ಮೀಸಲಾದ ಸೇವೆಗಳು.
ಮೊದಲನೆಯ ದಿನವೇ ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯುವ ಚಂದ್ರಮಂಡಲೋತ್ಸವ ಸೋಮವಾರ ರಾತ್ರಿ ಸರಳ ಹಾಗೂ ಸಾಂಪ್ರಾದಾಯಿಕವಾಗಿ ಜರುಗಲಿದೆ.
ಜಾತ್ರೆ ಆರಂಭಕ್ಕೂ ಮುನ್ನ ಚಿಕ್ಕಲ್ಲೂರಿನಲ್ಲಿ ಜನರು ಗಿಜಿಗುಡುತ್ತಾರೆ. ಆದರೆ, ಭಾನುವಾರ ಇಡೀ ಚಿಕ್ಕಲ್ಲೂರು ನೀರವವಾಗಿತ್ತು. ಹಳೇ ಮಠ ಹಾಗೂ ರಾಚಪ್ಪಾಜಿ ನಗರ ರಸ್ತೆಗಳು ಬಿಕೋ ಎನ್ನುತ್ತಿವೆ.
ನಿಷೇಧಾಜ್ಞೆ: ಈ ಬಾರಿ ಜಿಲ್ಲಾಡಳಿತ ದೇವಸ್ಥಾನದ ಸುತ್ತಲೂ ಐದೂ ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ. ಸೋಮವಾರದಿಂದ ದೇವಸ್ಥಾನದತ್ತ ಯಾರೂ ಬರದಂತೆ ಬಿಗಿ ಭದ್ರತೆಯನ್ನು ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಚಂದ್ರಮಂಡಲೋತ್ಸವ ದಿನ ಜನರು ಬರುವುದನ್ನು ತಡೆಗಟ್ಟುವ ಉದ್ದೇಶದಿಂದ ಮತ್ತೀಪುರ, ಕೊತ್ತನೂರು, ಬಾಣೂರು, ತೆಳ್ಳನೂರು, ರಾಚಪ್ಪಾಜಿ ನಗರ ಸೇರಿ ಆರು ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಭದ್ರತೆಗಾಗಿ ಐವರು ಇನ್‌ಸ್ಪೆಕ್ಟರ್, 16 ಸಬ್ ಇನ್‌ಸ್ಪೆಕ್ಟರ್, 18 ಎಎಸ್‌ಐಗಳು, 80 ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ನಿಷೇಧಾಜ್ಞೆ ಜಾರಿಯಾಗಲಿದ್ದು ಜಾತ್ರೆ ಮುಗಿಯುವವರೆಗೆ ಚಾಲ್ತಿಯಲ್ಲಿರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುತಿನ ಚೀಟಿ ಕಡ್ಡಾಯ
ಸೋಮವಾರ ಹಾಗೂ ಇನ್ನಿತರೆ ದಿನಗಳಲ್ಲಿ ಹೊರ ಗ್ರಾಮಗಳಿಂದ ಬರುವ ಜನರನ್ನು ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಸ್ಥಳೀಯರಿಗೆ ತೊಂದರೆಯಾಗದಂತೆ ಸ್ಥಳೀಯ ವಾಹನಗಳಿಗೆ ಪಾಸ್ ವಿತರಿಸಲಾಗಿದೆ. ಪಾಸ್ ಇಲ್ಲದ ವಾಹನಗಳನ್ನು ತಡೆದು ವಾಪಸ್ ಕಳುಹಿಸಲಾಗುತ್ತದೆ. ಆದ್ದರಿಂದ ಜನರು ದೇವಸ್ಥಾನದ ಬಳಿ ಅನಗತ್ಯವಾಗಿ ಬರುವ ಪ್ರಯತ್ನ ಮಾಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಹಾಗೂ ಆರ್‌ಟಿಪಿಸಿಆರ್ ನಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ಆದೇಶವನ್ನೂ ಜಿಲ್ಲಾಡಳಿತ ಹೊರಡಿಸಿದೆ.
ಕಾವೇರಿ ಕಣಿವೆಯ ಮಗ್ಗುಲಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಗಡಿ ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲೊಂದು. ಸುಗ್ಗಿ ಮುಗಿದು ದವಸಧಾನ್ಯಗಳನ್ನು ತುಂಬಿಕೊಳ್ಳುವ ಕೃಷಿಕ ಸಮುದಾಯಗಳಿಗೆ ಈ ಜಾತ್ರೆ ಸಮೃದ್ಧಿಯ ಸಂಕೇತ. ಐದು ಹಗಲು ಹಾಗೂ ಐದು ರಾತ್ರಿ ಅಪಾರ ಜನಸಂದಣಿಯಿಂದ ಜರುಗುವ ಈ ಜಾತ್ರೆಯ ಮೇಲೆ ಕಳೆದ ವರ್ಷ ಆವರಿಸಿದ ಕೋವಿಡ್ ಕರಿನೆರಳು ಈ ವರ್ಷವೂ ಸರಿದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.