ADVERTISEMENT

ಹನೂರು: ಗ್ರಾಮಸ್ಥರಲ್ಲಿ ಮೂಡಿದ ಹೊಸ ಭರವಸೆ

ಚಂಗಡಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಕುಗ್ರಾಮ ಸ್ಥಳಾಂತರಕ್ಕೆ ಸಜ್ಜು

ಬಿ.ಬಸವರಾಜು
Published 15 ಅಕ್ಟೋಬರ್ 2021, 19:30 IST
Last Updated 15 ಅಕ್ಟೋಬರ್ 2021, 19:30 IST
ಚಂಗಡಿ ಗ್ರಾಮದ ನೋಟ
ಚಂಗಡಿ ಗ್ರಾಮದ ನೋಟ   

ಹನೂರು: ಮಲೆ ಮಹದೇಶ್ವರ ವನ್ಯಧಾಮದ ದಟ್ಟಾರಣ್ಯದೊಳಗಿರುವ ಕುಗ್ರಾಮವೊಂದರ ಹೆಸರು ಚಂಗಡಿ. ಕಾಡಿನ ಕಚ್ಚಾ‌ ಹಾದಿಯಲ್ಲಿ 16 ಕಿ.ಮೀ. ದೂರ ಸಾಗಿದರೆ ಈ ಹಳ್ಳಿಯ ದರ್ಶನವಾಗುತ್ತದೆ. ಐದು ವರ್ಷಗಳ ಹೋರಾಟದ ನಂತರ ಗ್ರಾಮಸ್ಥರು ತುಸು ನೆಮ್ಮದಿಯಿಂದ ಇದ್ದಾರೆ. ದಟ್ಟ ಕಾಡಿನಿಂದ ಶೀಘ್ರವಾಗಿ ನಾಡಿಗೆ ಹತ್ತಿರವಾದ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿರುವುದು ಅದಕ್ಕೆ ಕಾರಣ. 

ಅರಣ್ಯದೊಳಗೆ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತಗೊಂಡು ಶೋಚನೀಯ ಬದುಕು ಸಾಗಿಸುತ್ತಿದ್ದ ಜನರಲ್ಲಿ, ‘ನಾವೂ ಸಾಮಾನ್ಯ ಜನರಂತೆ ಬದುಕಬೇಕು. ನಮ್ಮ ಮಕ್ಕಳು ಬೇರೆ ಗ್ರಾಮಗಳ ಮಕ್ಕಳಂತೆ ಉನ್ನತ ಶಿಕ್ಷಣ ಪಡೆಯಬೇಕು’ ಎಂಬ ಕನಸು ಬೇರೂರಿತ್ತು. ಅದು ನನಸಾಗುವ ಕಾಲ ಸನ್ನಿಹಿತವಾಗಿದೆ. ಇಡೀ ಗ್ರಾಮವನ್ನು ಡಿ.ಎಂ.ಸಮುದ್ರದ ಬಳಿಗೆ ಸ್ಥಳಾಂತರಿಸುವ ಸಂಬಂಧ ಅರಣ್ಯ ಇಲಾಖೆ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರದಿಂದ ಶೀಘ್ರ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. 

ಮಲೆ ಮಹದೇಶ್ವರ ವನ್ಯಧಾಮದ ರಾಮಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. 178.9 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಗ್ರಾಮದಲ್ಲಿ 260 ಕುಟುಂಬಗಳಿವೆ. ಬಹುತೇಕ ಕುಟುಂಬಗಳು ಬೇರೆ ಕಡೆಗಳಿಗೆ ಹೋಗಿದ್ದು, 60 ಕುಟುಂಬಗಳು ಮಾತ್ರ ಸದ್ಯ ಇಲ್ಲಿ ನೆಲೆಸಿವೆ. 200ರಷ್ಟು ಜನಸಂಖ್ಯೆ ಇದೆ. ಹೆಚ್ಚಿನವರು ವೃದ್ಧರು.

ADVERTISEMENT

ಈ ಗ್ರಾಮಕ್ಕೆ ದಂಟಳ್ಳಿಯಿಂದ ಕಾಲು ದಾರಿಯಲ್ಲಿ 8 ಕಿ.ಮೀ. ಹಾಗೂ ವಡಕೆಹಳ್ಳದಿಂದ 16 ಕಿ.ಮೀ. ದೂರವಿದೆ. ಎರಡು ಮಾರ್ಗವಾಗಿಯೂ ಹೋಗಬಹುದು. ಗ್ರಾಮಕ್ಕೆ ಸಮರ್ಪಕ ರಸ್ತೆ ಸಂಪರ್ಕ ಇಲ್ಲ. ಅರಣ್ಯ ಇಲಾಖೆ ಮಾಡಿರುವ ಕಚ್ಚಾ ರಸ್ತೆಯಲ್ಲೇ ಹೋಗಬೇಕು. ಕಡಿದಾದ ರಸ್ತೆಯಲ್ಲಿ ಅರಣ್ಯ ಇಲಾಖೆಯ ಜೀಪ್‌ಗಳು ಮಾತ್ರ ಸಂಚರಿಸಬಹುದಾಗಿದೆ. ಗ್ರಾಮದ ಜನರು ತಮ್ಮ ಕೆಲಸಗಳಿಗೆ ನಡೆದುಕೊಂಡೇ ಕೌದಳ್ಳಿಗೆ ಬರಬೇಕು.

230 ಕುಟುಂಬಗಳು ಗ್ರಾಮದಲ್ಲಿರುವ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಅರಣ್ಯ ಇಲಾಖೆಗೆ ಸಲ್ಲಿಸಿವೆ. ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಇದೆ. ಇದರ ಆಧಾರದ ಮೇಲೆ ಅರಣ್ಯ ಹಾಗೂ ಕಂದಾಯ ಇಲಾಖೆ ಗ್ರಾಮವನ್ನು ಸರ್ವೆ ಮಾಡಿ, ಜಿಲ್ಲಾ ಮಟ್ಟದಲ್ಲಿ ನಡೆದ ಸಭೆಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಸರ್ಕಾರ ಅನುಮತಿ ನೀಡುತ್ತಿದ್ದಂತೆ ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ ಸಿದ್ಧತೆಗಳು ನಡೆಯಲಿವೆ.

‘ನಾಲ್ಕೈದು ತಲೆಮಾರಿನಿಂದ ನಾವು ಇದೇ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವೆ. ಅರಣ್ಯದೊಳಗಿರುವ ನಮಗೆ ಕೃಷಿ ಬಿಟ್ಟು ಬೇರೆ ಯಾವುದೇ ಆದಾಯದ ಮೂಲ ಇಲ್ಲ. ನಮ್ಮ ತಲೆಮಾರಿನವರೆಗೂ ಹೇಗೋ ಸಂಭಾಳಿಸಿಕೊಂಡು ಬಂದಿದ್ದೇವೆ. ನಮ್ಮ ಮಕ್ಕಳಿಗಾದರೂ ಉತ್ತಮ ಜೀವನ ದೊರಕಲಿ ಎಂಬ ಉದ್ದೇಶದಿಂದ ನಾವು ಈ ಊರನ್ನು ಬಿಟ್ಟು ಬರಲು ಒಪ್ಪಿಕೊಂಡಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು.

ವೀರಪ್ಪನ್‌ ಕ್ರೌರ್ಯಕ್ಕೆ ಸಾಕ್ಷಿ

ಕಾಡುಗಳ್ಳ ವೀರಪ್ಪನ್‌ನ ಕ್ರೌರ್ಯಕ್ಕೂ ಚಂಗಡಿ ಸಾಕ್ಷಿಯಾಗಿದೆ. ವೀರಪ್ಪನ್‌ನಿಂದ ಅಪಹರಣಕ್ಕೀಡಾಗಿದ್ದ ಮಾಜಿ ಸಚಿವ ಎಚ್‌.ನಾಗಪ್ಪ ಮೃತದೇಹ ಚಂಗಡಿ ಅರಣ್ಯ ಪ್ರದೇಶದಲ್ಲೇ ಪತ್ತೆಯಾಗಿತ್ತು. 

‘ಇದೇ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಪಹರಿಸಿದ್ದ ವೀರಪ್ಪನ್‌, ಇಲಾಖೆಯ ಬಂಗಲೆಯಲ್ಲಿದ್ದ ಎರಡು ಬಂದೂಕುಗಳನ್ನು ಕಳ್ಳತನ ಮಾಡಿದ್ದ’ ಎಂದು ಸ್ಥಳೀಯ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಸಾರಾಂಶ

ಮಲೆ ಮಹದೇಶ್ವರ ವನ್ಯಧಾಮದ ದಟ್ಟಾರಣ್ಯದೊಳಗಿರುವ ಕುಗ್ರಾಮವೊಂದರ ಹೆಸರು ಚಂಗಡಿ. ಕಾಡಿನ ಕಚ್ಚಾ‌ ಹಾದಿಯಲ್ಲಿ 16 ಕಿ.ಮೀ. ದೂರ ಸಾಗಿದರೆ ಈ ಹಳ್ಳಿಯ ದರ್ಶನವಾಗುತ್ತದೆ. ಐದು ವರ್ಷಗಳ ಹೋರಾಟದ ನಂತರ ಗ್ರಾಮಸ್ಥರು ತುಸು ನೆಮ್ಮದಿಯಿಂದ ಇದ್ದಾರೆ. ದಟ್ಟ ಕಾಡಿನಿಂದ ಶೀಘ್ರವಾಗಿ ನಾಡಿಗೆ ಹತ್ತಿರವಾದ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿರುವುದು ಅದಕ್ಕೆ ಕಾರಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.