ಹನೂರು: ಚಂಗಡಿ ಗ್ರಾಮದ ಸ್ಥಳಾಂತರದ ಪ್ರಸ್ತಾವವನ್ನು ಅರಣ್ಯ ಇಲಾಖೆ ಸುಲಭವಾಗಿ ಸಿದ್ಧಪಡಿಸಿರಲಿಲ್ಲ. ಅದರ ಹಿಂದೆ ಗ್ರಾಮಸ್ಥರ ಹೋರಾಟದ ಕಥೆ ಇದೆ.
‘ದಟ್ಟಾರಣ್ಯದೊಳಗಿರುವ ನಮಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿ ಐದು ವರ್ಷಗಳ ಹಿಂದೆ ಆರಂಭಗೊಂಡ ಗ್ರಾಮಸ್ಥರ ಹೋರಾಟವು ನಂತರದ ದಿನಗಳಲ್ಲಿ, ‘ಗ್ರಾಮವನ್ನೇ ಬಿಟ್ಟು ಬರುತ್ತೇವೆ. ನಮಗೆ ಪುನರ್ವಸತಿ ಕಲ್ಪಿಸಿಕೊಡಿ’ ಎಂಬ ಒತ್ತಾಯದೊಂದಿಗೆ ಹೊಸ ಮಜಲಿಗೆ ತೆರೆದುಕೊಂಡಿತು.
ಈ ಹೋರಾಟದ ಕಿಡಿ ಹತ್ತಿಕೊಂಡಿದ್ದು, 2016ರಲ್ಲಿ ನಡೆದಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ.
ಗ್ರಾಮಕ್ಕೆ ಶಿಕ್ಷಣ, ಆರೋಗ್ಯ, ರಸ್ತೆ ಸೌಕರ್ಯಗಳನ್ನು ಕಲ್ಪಿಸಿಕೊಡದಿದ್ದರೆ ಗ್ರಾಮದ ಜನರು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ 2016ರ ಜನವರಿ 20ರಂದು ನಿವಾಸಿಗಳು ರಾಮಾಪುರ ಪೊಲೀಸ್ ಠಾಣೆ ಹಾಗೂ ಅಂದಿನ ಕೊಳ್ಳೇಗಾಲದ ಉಪವಿಭಾಗಾಧಿಕಾರಿಯಾಗಿದ್ದ ಕವಿತಾ ರಾಜಾರಾಂ ಅವರಿಗೆ ಲಿಖಿತವಾಗಿ ಎಚ್ಚರಿಕೆ ನೀಡಿದ್ದರು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಗೋವಿಂದರಾಜು ಅವರನ್ನು ಬಿಟ್ಟು ಬೇರೆ ಯಾವ ಇಲಾಖೆಯ ಅಧಿಕಾರಿಗಳೂ ಗ್ರಾಮಕ್ಕೆ ತೆರಳಿ ಜನರ ಮನವೊಲಿಸುವ ಪ್ರಯತ್ನ ಮಾಡಿರಲಿಲ್ಲ.
ನಿರಂತರ ಹೋರಾಟ: ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, 2016ರ ಫೆ.20ರಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ. ಇದಾದ ಬಳಿಕ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಸೇರಿದಂತೆ ಹಲವು ಕಡೆ ರೈತ ಸಂಘದ ಜೊತೆಗೆ ಗ್ರಾಮಸ್ಥರು ಸಾಕಷ್ಟು ಪ್ರತಿಭಟನೆಯನ್ನು ನಡೆಸಿದ್ದರು.
ರೈತ ಸಂಘಟನೆಯ ಕಾರ್ಯಕರ್ತರು ಚಂಗಡಿ ಗ್ರಾಮಕ್ಕೆ ಭೇಟಿ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಗ್ರಾಮಸ್ಥರೊಡಗೂಡಿ ಹನೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. 2016ರ ಏ.18ರಂದು ಚಾಮರಾಜನಗರದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ ಚಂಗಡಿ ಗ್ರಾಮದ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಇದರಿಂದಲೂ ಸಮಸ್ಯೆ ಬಗೆಹರಿದಿರಲಿಲ್ಲ. ಮತ್ತೆ ಗ್ರಾಮಸ್ಥರೆಲ್ಲ ಸಭೆ ನಡೆಸಿ ಗ್ರಾಮವನ್ನೇ ತೊರೆದು ಬೇರೆಡೆ ನೆಲೆಸುವ ತೀರ್ಮಾನ ಕೈಗೊಂಡರು. 2016ರ ಆಗಸ್ಟ್ 26ರಂದು ಚಾಮರಾಜನಗರದಲ್ಲಿ ನಡದ ಸಭೆಯಲ್ಲಿ ಗ್ರಾಮದವರಿಗೆ ಪುನರ್ವಸತಿ ಕಲ್ಪಿಸಿಕೊಡುವುದಾದರೆ ಗ್ರಾಮವನ್ನೇ ಬಿಡುವುದಾಗಿ ಜನರು ತಮ್ಮ ಮನದ ಇಂಗಿತವನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದರು.
ತಕ್ಷಣ ಸ್ಪಂದಿಸಿದ್ದ ಅರಣ್ಯ ಇಲಾಖೆ
ಗ್ರಾಮಸ್ಥರು ಬೇರೆ ಕಡೆಗೆ ಸ್ಥಳಾಂತರಗೊಳ್ಳುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸವಿದ್ದ ಜನರಿಗೆ ಹುಣಸೂರಿನಲ್ಲಿ ಪುನರ್ವಸತಿ ಕಲ್ಪಿಸಿರುವ ಮಾದರಿಯಲ್ಲಿ ಇಲ್ಲೂ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಅವಕಾಶ ಇದೆ ಎಂಬುದು ಅಧಿಕಾರಿಗಳ ನಿಲುವಾಗಿತ್ತು.
ಮಲೆಮಹದೇಶ್ವರ ವನ್ಯಧಾಮದ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿಪ್ರಿಯಾ ಅವರು ಹುಣಸೂರಿನ ಪುನರ್ವಸತಿ ಯೋಜನೆಯನ್ನು ಪರಿಶೀಲಿಸುವುದಕ್ಕಾಗಿ ಚಂಗಡಿ, ದೊಡ್ಡಾಣೆ, ತೋಕೆರೆ, ಪಡಸಲನತ್ತ ತುಳಸಿಕೆರೆ ಗ್ರಾಮಸ್ಥರನ್ನು ಕಳುಹಿಸಿಕೊಟ್ಟಿದ್ದರು. ಅಲ್ಲಿನ ಪುನರ್ವಸತಿಯನ್ನು ನೋಡಿದ ಬಳಿಕ ಚಂಗಡಿ ಗ್ರಾಮಸ್ಥರಲ್ಲಿ ಹಲವರು ಗ್ರಾಮ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದರು.
ಬಳಿಕ ಅಂದಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ ರವಿ ಹಾಗೂ ಡಾ.ಎಂ.ಮಾಲತಿಪ್ರಿಯಾ ನೇತೃತ್ವದ ತಂಡ ಗ್ರಾಮಕ್ಕೆ ಬೇಟಿ ನೀಡಿ ಜನರೊಂದಿಗೆ ಚರ್ಚೆ ನಡೆಸಿ ಹನೂರು ಬಫರ್ ವಲಯದ ಎಲ್ಲೇಮಾಳ ರಸ್ತೆಯ ದಕ್ಷಣ ದಿಕ್ಕಿಗೆ ಇರುವ ಅರಣ್ಯ ಇಲಾಖೆಗೆ ಸೇರಿದ್ದ ಸ್ಥಳವನ್ನು ಚಂಗಡಿ ಗ್ರಾಮದ ಪುನರ್ವಸತಿಗೆ ಗುರುತಿಸಿದ್ದರು.
---
ರೈತ ಸಂಘವು ಚಂಗಡಿ ಗ್ರಾಮಸ್ಥರೊಂದಿಗೆ ಸೇರಿ ಹೋರಾಟ ಮಾಡುತ್ತಲೇ ಬಂದಿದೆ. ಈಗ ಪನರ್ವಸತಿ ಕಲ್ಪಿಸಲು ಮುಂದಾಗಿರುವುದು ಸಂತಸ ತಂದಿದೆ
ಹೊನ್ನೂರು ಪ್ರಕಾಶ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
---
ಚಂಗಡಿ ಗ್ರಾಮಸ್ಥರ ಪುನರ್ವಸತಿಗಾಗಿ ಗ್ರಾಮಸ್ಥರ ದಾಖಲೆಗಳನ್ನು ಪಡೆದು, ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಲಾಗಿತ್ತು
ಡಾ.ಎಂ.ಮಾಲತಿಪ್ರಿಯ, ಹಿಂದಿನ ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ
‘ದಟ್ಟಾರಣ್ಯದೊಳಗಿರುವ ನಮಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿ ಐದು ವರ್ಷಗಳ ಹಿಂದೆ ಆರಂಭಗೊಂಡ ಗ್ರಾಮಸ್ಥರ ಹೋರಾಟವು ನಂತರದ ದಿನಗಳಲ್ಲಿ, ‘ಗ್ರಾಮವನ್ನೇ ಬಿಟ್ಟು ಬರುತ್ತೇವೆ. ನಮಗೆ ಪುನರ್ವಸತಿ ಕಲ್ಪಿಸಿಕೊಡಿ’ ಎಂಬ ಒತ್ತಾಯದೊಂದಿಗೆ ಹೊಸ ಮಜಲಿಗೆ ತೆರೆದುಕೊಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.