ಬೀದರ್: ಜಿಲ್ಲೆಯಲ್ಲಿ ಡಿಸೆಂಬರ್ ಎರಡನೇ ವಾರದಿಂದ ಆರಂಭವಾಗಿರುವ ಚಳಿ ನಿರಂತರವಾಗಿ ಮುಂದುವರಿದಿದೆ. 14 ಡಿಗ್ರಿ ಸೆಲ್ಸಿಯಸ್ ಸುತ್ತ ಸುಳಿದಾಡುತ್ತಿದ್ದ ಕನಿಷ್ಠ ಉಷ್ಣಾಂಶ ಬುಧವಾರ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದು ಚಳಿ ಮೈಕೊರೆದರೆ, ಗುರುವಾರ ಮತ್ತೆ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು ಜನರನ್ನು ಇನ್ನಷ್ಟು ನಡುಗಿಸಿತು.
ಜಿಲ್ಲೆಯಲ್ಲಿ ಎರಡು ವಾರಗಳಿಂದ ಚಳಿ ಇದೆ. ತಣ್ಣನೆಯ ಗಾಳಿ ಬೀಸುತ್ತಿದೆ. ಇನ್ನೂ ಒಂದು ವಾರ ಚಳಿ ಮುಂದುವರಿಯಲಿದೆ. ಫೆಬ್ರುವರಿ ಆರಂಭದಲ್ಲಿ ನಿಧನವಾಗಿ ಕಡಿಮೆಯಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ಹೇಳುತ್ತಾರೆ.
ಕಡಲೆ ಬೆಳೆಗೆ ಈ ಹವಾಮಾನ ಒಳ್ಳೆಯದು. ಚಳಿಗೆ ತರಕಾರಿ ಬೆಳೆಗಳಲ್ಲಿ ಸ್ವಲ್ಪಮಟ್ಟಿಗೆ ಕೀಟಗಳು ಆಗುವ ಸಾಧ್ಯತೆ ಇರುತ್ತದೆ. ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
10 ಡಿಗ್ರಿ ಸೆಲ್ಸಿಯಸ್‌ಕನಿಷ್ಠ ಉಷ್ಠಾಂಶ ಈ ವರ್ಷದ ದಾಖಲೆಯಾಗಿದೆ. ಬೀದರ್‌ತಾಲ್ಲೂಕಿನ ಮನ್ನಳ್ಳಿಯಲ್ಲಿ 2018ರಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. 2015ರ ಜನವರಿ 10 ರಂದು ಬೀದರ್‌ನ ಹಳ್ಳದಕೇರಿಯಲ್ಲಿ 5.8 ಡಿಗ್ರಿ ಸೆಲ್ಸಿಯಸ್, 2017ರ ನವೆಂಬರ್‌ರಂದು ಹಲಬರ್ಗಾದಲ್ಲಿ ಕನಿಷ್ಠ ಉಷ್ಣಾಂಶ 7.2 ಡಿಗ್ರಿ ಸೆಲ್ಸಿಯಸ್‌ದಾಖಲಾಗಿತ್ತು. 1901ರ ಜನವರಿ 5ರಂದು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್‌ಉಷ್ಣಾಂಶ ದಾಖಲಾಗಿತ್ತು. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದಲ್ಲಿ ಈ ದಾಖಲೆ ಇದೆ.
’ಕೊಲ್ಲಿ ರಾಷ್ಟ್ರಗಳ ಕಡೆಯಿಂದ ದೂಳು ಮಿಶ್ರಿತ ಶೀತಗಾಳಿ ಬೀಸುತ್ತಿದೆ. ಇದು ಹಿಮಾಲಯ ಪರ್ವತಗಳಿಗೆ ಅಪ್ಪಳಿಸಿ ದಿಕ್ಕು ಬದಲಿಸಿಕೊಂಡು ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಬರುತ್ತಿದೆ. ಶೀತಗಾಳಿ ಆರೋಗ್ಯಕ್ಕೆ ಹಿತಕರವಲ್ಲ. ಜನ ಶೀತಗಾಳಿಯಿಂದ ರಕ್ಷಣೆ ಪಡೆಯುವುದು ಹಾಗೂ ಮನೆಗಳಲ್ಲೇ ಇರುವುದು ಉತ್ತಮ‘ ಎಂದು ಬಿರಾದಾರ ಹೇಳುತ್ತಾರೆ.
ಶೀತಗಾಳಿಯಿಂದಾಗಿ ಮಕ್ಕಳು, ಹಿರಿಯರಲ್ಲಿ ,ಕೆಮ್ಮು, ನೆಗಡಿ ಹಾಗೂ ಜ್ವರ ಕಾಣಿಸಿಕೊಂಡಿದೆ. ಕೋವಿಡ್‌ಭಯ ಆಗಲೇ ಜನರನ್ನು ಕಾಡುತ್ತಿದೆ. ನೌಕರಸ್ಥರು ಹಾಗೂ ವಿದ್ಯಾರ್ಥಿಗಳು ಸ್ವೇಟರ್, ಕೈಗವಸು ಹಾಗೂ ತಲೆಗೆ ಟೊಪ್ಪಿಗೆ ಹಾಕಿಕೊಂಡು ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಹಳ್ಳಿಗಳಲ್ಲಿ ಜನರು ಬೆಳಿಗ್ಗೆ ಚಹಾ ಅಂಗಡಿಗಳ ಮುಂದೆ ಕಸಕ್ಕೆ ಬೆಂಕಿ ಹಚ್ಚಿ ಮೈಕಾಯಿಸಿಕೊಳ್ಳುತ್ತಿದ್ದಾರೆ.
ಮಾಂಜ್ರಾ ನದಿ ದಂಡೆ ಗ್ರಾಮಗಳಲ್ಲಿ ಹೆಚ್ಚು ಚಳಿ ಇದೆ. ಗುರುವಾರ ಮನೆಯಿಂದ ಹೊರಗೆ ಬರಲಾರದಷ್ಟು ಚಳಿ ಇತ್ತು. ಅನೇಕ ಜನ ಹೊಲಗಳಿಗೂ ಹೋಗಲಿಲ್ಲ ಎಂದು ಮರಕಲ್‌ಗ್ರಾಮದ ಲೋಕೇಶ್‌ತಿಳಿಸಿದರು.
ಬೀದರ್: ಜಿಲ್ಲೆಯಲ್ಲಿ ಡಿಸೆಂಬರ್ ಎರಡನೇ ವಾರದಿಂದ ಆರಂಭವಾಗಿರುವ ಚಳಿ ನಿರಂತರವಾಗಿ ಮುಂದುವರಿದಿದೆ. 14 ಡಿಗ್ರಿ ಸೆಲ್ಸಿಯಸ್ ಸುತ್ತ ಸುಳಿದಾಡುತ್ತಿದ್ದ ಕನಿಷ್ಠ ಉಷ್ಣಾಂಶ ಬುಧವಾರ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದು ಚಳಿ ಮೈಕೊರೆದರೆ, ಗುರುವಾರ ಮತ್ತೆ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು ಜನರನ್ನು ಇನ್ನಷ್ಟು ನಡುಗಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.