ಬೀದರ್: ಜಿಲ್ಲೆಯ 15 ರಿಂದ 18 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಕೋವಿಡ್ ಪ್ರತಿಬಂಧಕ ಲಸಿಕೆ ಕಡ್ಡಾಯವಾಗಿ ಕೊಡಿಸಬೇಕು ಎಂದು ಸರ್ಕಾರ ಆರೋಗ್ಯ ಇಲಾಖೆಯ ಮೇಲೆ ಒತ್ತಡ ಹಾಕುತ್ತಲೇ ಇದೆ. ಆದರೆ, ಜಿಲ್ಲೆಯಲ್ಲಿ ಸರ್ಕಾರದ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಕ್ಕಳನ್ನು ಹುಡುಕಿ ಅವರಿಗೆ ಲಸಿಕೆ ಕೊಡುವುದೇ ದೊಡ್ಡ ಸವಾಲಾಗಿದೆ.
ಶಾಲಾ, ಕಾಲೇಜುಗಳಲ್ಲಿನ 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನದ ಮೊದಲ ದಿನ ಶೇಕಡ 26.76 ರಷ್ಟು ವಿದ್ಯಾರ್ಥಿಗಳು ಮಾತ್ರ ಲಸಿಕೆ ಪಡೆದಿದ್ದಾರೆ. ಜಿಲ್ಲೆಯ 1,05,083 ಮಕ್ಕಳ ಪೈಕಿ 28,120 ಮಕ್ಕಳಿಗೆ ಲಸಿಕೆ ಕೊಡಲಾಯಿತು. ರಾಜ್ಯದ ಜಿಲ್ಲೆಗಳ ಸಾಲಿನಲ್ಲಿ ಬೀದರ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಈಗ ಮೊದಲ ದಿನದ ಉತ್ಸಾಹ ಕಂಡು ಬರುತ್ತಿಲ್ಲ.
ಮೊದಲ ದಿನ ಔರಾದ್ ತಾಲ್ಲೂಕಿನಲ್ಲಿ ಶೇಕಡ 50.81, ಬೀದರ್‌ನಲ್ಲಿ ಶೇಕಡ 15, ಭಾಲ್ಕಿಯಲ್ಲಿ ಶೇಕಡ 31.95, ಬಸವಕಲ್ಯಾಣದಲ್ಲಿ ಶೇಕಡ 29.99 ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಶೇಕಡ 27.95ರಷ್ಟು ಮಕ್ಕಳು ಕೋವಿಡ್ ಲಸಿಕೆ ಪಡೆದಿದ್ದರು. ಹಾಗೆ ನೋಡಿದರೆ ಒಂದು ವಾರದಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ಕೊಡುವ ಕಾರ್ಯ ಮುಗಿಯಬೇಕಿತ್ತು. ಆದರೆ, ವೈದ್ಯಕೀಯ ಸಿಬ್ಬಂದಿ ವಾಸ್ತವದಲ್ಲಿ ಇಲ್ಲದ ಮಕ್ಕಳನ್ನು ಹುಡುಕಲು ಪ್ರಯಾಸ ಪಡಬೇಕಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎನ್ನುವುದು ಮನವರಿಕೆಯಾದ ಮೇಲೆ ಜಿಲ್ಲಾಧಿಕಾರಿ ತಹಶೀಲ್ದಾರರು, ಪದವಿ ಪೂರ್ವ ಕಾಲೇಜು ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿ ಅವರೊಂದಿಗೆ ವಿಡಿಯೊ ಸಂವಾದ ನಡೆಸಿ ಅಗತ್ಯ ಸಹಕಾರ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಆದರೂ, ಶಿಕ್ಷಕರ ಹಂತದಲ್ಲಿ ಕಾರ್ಯಕ್ರಮದ ಗಂಭೀರತೆ ಕಂಡು ಬರುತ್ತಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ವರ್ಗಾವಣೆಯಾದ, ಶಾಲೆ ಬಿಟ್ಟ, ಶಾಲೆಯಿಂದ ದೂರ ಉಳಿದ ಮಕ್ಕಳ ಹೆಸರನ್ನು ಬೇರ್ಪಡಿಸದೇ ವಿದ್ಯಾರ್ಥಿಗಳ ಅಂಕಿ ಸಂಖ್ಯೆಗಳನ್ನು ಆರೋಗ್ಯ ಇಲಾಖೆಗೆ ಒಪ್ಪಿಸಿ ಕೈತೊಳೆದುಕೊಂಡಿದ್ದಾರೆ. ಬಿಸಿಯೂಟಕ್ಕಿರುವ ಹಾಜರಾತಿ, ಲಸಿಕೆ ಪಡೆಯಲು ಕಂಡು ಬರುತ್ತಿಲ್ಲ. ಇದು ಹಲವು ಸಂಶಯಗಳಿಗೂ ದಾರಿ ಮಾಡಿಕೊಟ್ಟಿದೆ.
ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ 11 ಸಾವಿರ ಮಕ್ಕಳು ಇದ್ದಾರೆ ಎಂದು ಶಿಕ್ಷಣ ಇಲಾಖೆ ಅಂಕಿ ಅಂಶ ಕೊಟ್ಟಿದೆ. ಆದರೆ, ಅಲ್ಲಿ 9 ಸಾವಿರ ವಿದ್ಯಾರ್ಥಿಗಳ ಲೆಕ್ಕ ಮಾತ್ರ ದೊರಕುತ್ತಿದೆ. ಉಳಿದವರ ಪತ್ತೆಯೇ ಇಲ್ಲ. ಕೆಲ ಮಕ್ಕಳು ಪಾಲಕರೊಂದಿಗೆ ವಲಸೆ ಹೋಗಿದ್ದಾರೆ, ಇನ್ನು ಕೆಲವರು ಶಾಲೆಯಿಂದ ದೂರ ಉಳಿದಿದ್ದಾರೆ ಎಂದು ಶಿಕ್ಷಕರು ಸಬೂಬು ಹೇಳುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳ ಅಂಕಿ ಅಂಶಗಳೂ ಶಿಕ್ಷಣ ಇಲಾಖೆಯ ಬಳಿ ಇದೆ. ಶಿಕ್ಷಣ ಇಲಾಖೆ ಸರಿಯಾದ ಮಾಹಿತಿ ಕೊಡಲು ಸಿದ್ಧವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಸಿಬ್ಬಂದಿ.
ಶಿಕ್ಷಣ ಇಲಾಖೆಯಲ್ಲಿನ ಗೋಲ್‌ಮಾಲ್ ಪ್ರತ್ಯಕ್ಷವಾಗಿ ಕಂಡು ಬಂದರೂ ವೈದ್ಯಕೀಯ ಸಿಬ್ಬಂದಿ ಜಿಲ್ಲಾಡಳಿತಕ್ಕೆ ನೇರವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ. ನಮಗೇಕೆ ಊರು ಉಸಾಬರಿ? ಎಂದು ಮೌನಕ್ಕೆ ಜಾರುತ್ತಿದ್ದಾರೆ. ಬೀದರ್ ತಾಲ್ಲೂಕಿನಲ್ಲೇ ಹೆಚ್ಚು ಗೊಂದಲ ಇದೆ. ನಂತರದ ಸ್ಥಾನದಲ್ಲಿ ಔರಾದ್, ಕಮಲನಗರ, ಹುಲಸೂರು ಹಾಗೂ ಚಿಟಗುಪ್ಪ ತಾಲ್ಲೂಕುಗಳು ಇವೆ ಎನ್ನುವುದು ಲಸಿಕೆ ಕೊಡಲು ಶಾಲೆಗೆ ತೆರಳುತ್ತಿರುವ ವೈದ್ಯಕೀಯ ಸಿಬ್ಬಂದಿಯ ಹೇಳಿಕೆ.
‘ಒಂದು ವಾರದ ಅವಧಿಯಲ್ಲಿ ಬಹುತೇಕ ಎಲ್ಲ ಪ್ರೌಢಶಾಲೆಗೆ ತೆರಳಿ ಮಕ್ಕಳಿಗೆ ಕೋವಿಡ್ ಪ್ರತಿಬಂಧಕ ಲಸಿಕೆ ಕೊಡಲಾಗಿದೆ. ಮಕ್ಕಳು ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆದಿದ್ದಾರೆ. ಯಾರೊಬ್ಬರೂ ನಿರಾಕರಿಸಿಲ್ಲ. ಲಸಿಕೆ ಪಡೆದ ನಂತರ ಅಡ್ಡ ಪರಿಣಾಮವೂ ಕಂಡು ಬಂದಿಲ್ಲ’ ಎಂದು ಔರಾದ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗಾಯತ್ರಿ ವಿಜಯಕುಮಾರ ಹೇಳಿದರು.
‘ಮಕ್ಕಳು ಟಿವಿ ಹಾಗೂ ಪತ್ರಿಕೆಗಳ ಮೂಲಕ ಕೋವಿಡ್ ಬಗೆಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅಂತೆಯೇ ಲಸಿಕೆ ಪಡೆಯಲು ಹಿಂಜರಿದಿಲ್ಲ. ಆದರೆ, ಶಿಕ್ಷಣ ಇಲಾಖೆ ಕೊಟ್ಟಿರುವ ಅಂಕಿ ಅಂಶಗಳು ಹಾಗೂ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಕೆಲ ಮಟ್ಟಿಗೆ ತಾಳೆಯಾಗುತ್ತಿಲ್ಲ. ಆದರೂ ಮಕ್ಕಳ ಮನೆಗೆ ಹೋಗಿ ಲಸಿಕೆ ಕೊಡುತ್ತಿದ್ದೇವೆ’ ಎಂದು ತಿಳಿಸಿದರು.
‘ಚಿಟಗುಪ್ಪ ತಾಲ್ಲೂಕಿನಲ್ಲಿ ಶೇಕಡ 80ರಷ್ಟು ಮಕ್ಕಳಿಗೆ ಲಸಿಕೆ ಕೊಡಲಾಗಿದೆ. ಶಾಲೆಯಿಂದ ದೂರ ಉಳಿದ ಹಾಗೂ ಗೈರಾದ ಮಕ್ಕಳನ್ನು ಆಶಾ ಕಾರ್ಯಕರ್ತೆಯರು ಹುಡುಕುತ್ತಿದ್ದಾರೆ. ಅವರಿಗೂ ಲಸಿಕೆ ಕೊಡಲಾಗುವುದು’ ಎಂದು ಚಿಟಗುಪ್ಪ ತಹಶೀಲ್ದಾರ್ ರವೀಂದ್ರ ದಾಮಾ ಹೇಳುತ್ತಾರೆ.
ಔರಾದ್ ತಾಲ್ಲೂಕಿನ ಶೇ 80ರಷ್ಟು ಮಕ್ಕಳಿಗೆ ಕೋವಿಡ್ ಲಸಿಕೆ ಕೊಡಿಸಲಾಗಿದೆ. 15 ರಿಂದ 18 ವರ್ಷದೊಳಗಿನ ಒಟ್ಟು 9,750 ಮಕ್ಕಳ ಪೈಕಿ 8,000 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಉಳಿದ ಶೇ 20 ರಷ್ಟು ಮಕ್ಕಳಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿದ್ಧವಿದೆ. ವಲಸೆ ಇತರೆ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರಿಗೂ ಲಸಿಕೆ ನೀಡಲಾಗುವುದು. ಇದಕ್ಕಾಗಿ ಶಿಕ್ಷಣ ಇಲಾಖೆ ಸಹಕಾರ ಅಗತ್ಯ ಎಂದು ಡಾ.ಗಾಯತ್ರಿ ತಿಳಿಸುತ್ತಾರೆ.
‘ಶಾಲೆಯ ವೇಳಾಪಟ್ಟಿಯಂತೆ ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಯೊಳಗೆ ಇದ್ದರೆ. ಲಸಿಕೆ ನೀಡಲು ಅನುಕೂಲ ಆಗುತ್ತದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಲಸಿಕೆ ತೆಗೆದುಕೊಂಡು ಶಾಲೆಗೆ ಹೋದರೆ ಅಲ್ಲಿ ಮಕ್ಕಳೇ ಕಾಣಿಸುತ್ತಿಲ್ಲ. ಸಿಬ್ಬಂದಿ ಶ್ರಮ ವ್ಯರ್ಥವಾಗುತ್ತಿದೆ’ ಎಂದು ಹುಮನಾಬಾದ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಿವಕುಮಾರ್ ಸಿದ್ಧೇಶ್ವರ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ ವಿವರಿಸಿದರು.
ಭಾಲ್ಕಿ ತಾಲ್ಲೂಕಿನ 15ರಿಂದ 18 ವರ್ಷದೊಳಗಿನ ಸುಮಾರು 17 ಸಾವಿರ ವಿದ್ಯಾರ್ಥಿಗಳಲ್ಲಿ ಜ.3ರಿಂದ ಇಲ್ಲಿಯವರೆಗೆ 14 ಸಾವಿರ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಶಾಲೆಗಳಿಗೆ ಕೋವಿಡ್ ಲಸಿಕೆ ನೀಡಲು ಹೋದಾಗ ನಾನಾ ಕಾರಣಗಳಿಂದ ಗೈರು ಹಾಜರಿರುವ ಮಕ್ಕಳ ವಿಳಾಸ, ಮೊಬೈಲ್ ನಂಬರ್ ಪಡೆದುಕೊಂಡು ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಕೀರ್ತಿ ಚಾಲಾಕ್ ತಿಳಿಸಿದರು.
‘ಗೊಂದಲ ನಿವಾರಿಸಲು ಲಸಿಕೆ ಪಡೆದ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಮಾಹಿತಿ ಕೊಡಲು ಹೇಳಿದ್ದೇವೆ. ಮಾಹಿತಿ ಕ್ರೋಡೀಕರಿಸಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕೊಡಲಿದ್ದೇವೆ’ ಎಂದು ಬೀದರ್‌ನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ತೋರಣೆಕರ್ ತಿಳಿಸಿದರು.
‘ವಾಸ್ತವದಲ್ಲಿ ನಾಲ್ಕೈದು ದಿನಗಳಲ್ಲಿ ಮಕ್ಕಳಿಕೆ ಲಸಿಕೆ ನೀಡುವ ಕಾರ್ಯ ಮುಗಿಯಬೇಕಿತ್ತು. ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ನಿಯಮಿತವಾಗಿ ಬರುತ್ತಿಲ್ಲ. ಹೀಗಾಗಿ ಅವರ ವಿಳಾಸ ಪಡೆದು ಅವರು ಇರುವಲ್ಲಿಗೆ ಹೋಗಿ ಲಸಿಕೆ ಹಾಕಲು ನಿರ್ಧರಿಸಿದ್ದೇವೆ’ ಎಂದು ಲಸಿಕೆ ವಿಭಾಗದ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರಾಜಶೇಖರ ಪಾಟೀಲ ಹೇಳಿದರು.
ಪೂರಕ ಮಾಹಿತಿ: ಗುಂಡು ಅತಿವಾಳ, ಮನ್ಮಥ ಸ್ವಾಮಿ, ಬಸವಕುಮಾರ , ಬಸವರಾಜ ಪ್ರಭಾ, ಮನೋಜ್‌ಕುಮಾರ, ನಾಗೇಶ ಪ್ರಭಾ
ಬೀದರ್ ಜಿಲ್ಲೆಯ 15 ರಿಂದ 18 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಕೋವಿಡ್ ಪ್ರತಿಬಂಧಕ ಲಸಿಕೆ ಕಡ್ಡಾಯವಾಗಿ ಕೊಡಿಸಬೇಕು ಎಂದು ಸರ್ಕಾರ ಆರೋಗ್ಯ ಇಲಾಖೆಯ ಮೇಲೆ ಒತ್ತಡ ಹಾಕುತ್ತಲೇ ಇದೆ. ಆದರೆ, ಜಿಲ್ಲೆಯಲ್ಲಿ ಸರ್ಕಾರದ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಕ್ಕಳನ್ನು ಹುಡುಕಿ ಅವರಿಗೆ ಲಸಿಕೆ ಕೊಡುವುದೇ ದೊಡ್ಡ ಸವಾಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.