ADVERTISEMENT

ನೌಬಾದ್‌ ಪದವಿ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ: ಡಾ.ಅಶ್ವಥ್ ನಾರಾಯಣ

ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 16:57 IST
Last Updated 10 ಅಕ್ಟೋಬರ್ 2021, 16:57 IST
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಸಿ.ಎನ್. ಹೊಸ ತರಗತಿಗಳ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾಟಿಸಿದರು. ಚಂದ್ರಶೇಖರ ಸಾಲಿಮಠ, ಶರಣು ಸಲಗರ, ಭಗವಂತ ಖೂಬಾ, ಪ್ರಭು ಚವಾಣ್, ರಹೀಂ ಖಾನ್‌, ಶಶಿಲ್‌ ನಮೋಶಿ, ಕುಲಕರ್ಣಿ, ಬಾಬು ವಾಲಿ ಇದ್ದಾರೆ

ಬೀದರ್‌: ‘ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‌ ‘ಎ’ ಗ್ರೇಡ್‌ ಪಡೆದಿದೆ. ಈ ಕಾಲೇಜು ಇನ್ನೆರಡು ಅವಧಿಗೆ ನ್ಯಾಕ್‌ ‘ಎ+’ ಗ್ರೇಡ್‌ ಪಡೆದರೆ ಸ್ವಾಯತ್ತ ಸ್ಥಾನಮಾನ ನೀಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸಿ.ಎನ್. ಭರವಸೆ ನೀಡಿದರು.

ಇಲ್ಲಿಯ ಉದಗಿರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹೊಸ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಪದವಿ ಕಾಲೇಜು ಹೊರಗಿನಿಂದ ಅಷ್ಟು ಆಕರ್ಷಣೀಯವಾಗಿಲ್ಲ. ಇನ್ನಷ್ಟು ಮೂಲಸೌಕರ್ಯ ಒದಗಿಸಬೇಕಿದೆ. ಆದರೆ, ಶೈಕ್ಷಣಿಕವಾಗಿ ಗುಣಮಟ್ಟದ ಫಲಿತಾಂಶ ನೀಡುವಲ್ಲಿ ಮುಂಚೂಣಿಯಲ್ಲಿದೆ. ಕಾಲೇಜಿನ ಅಧ್ಯಕ್ಷರಾಗಿರುವ ಶಾಸಕ ರಹೀಂ ಖಾನ್‌ ಅವರು ಅಭಿವೃದ್ಧಿಗೆ ನೆರವಾಗಬೇಕು’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಹ ಪದವಿ ಕಾಲೇಜು ಅಭಿವೃದ್ಧಿಗೆ ಸಹಕಾರ ನೀಡಬೇಕು. ಕ್ಯಾಂಪಸ್‌ ಅಭಿವೃದ್ದಿ ಪಡಿಸುವ ದಿಸೆಯಲ್ಲಿ ಸಿಎಸ್‌ಆರ್‌ ನಿಧಿಯಿಂದ ಅನುದಾನ ಕೊಡಿಸಬೇಕು. ರಾಜ್ಯ ಸರ್ಕಾರದಿಂದಲೂ ಸಹಾಯಕ ಒದಗಿಸಲಾಗುವುದು’ ಎಂದು ತಿಳಿಸಿದರು.

‘ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಲಭಿಸಿದರೆ ಕಾಲೇಜಿನ ಕಾರ್ಯಕಲಾಪ, ಪರೀಕ್ಷಾ ಕಾರ್ಯ, ಮೌಲ್ಯಮಾಪನ, ಅಭಿವೃದ್ಧಿ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿರಲಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳಿಂದ ಪಡೆಯುವ ಪ್ರವೇಶ, ಪರೀಕ್ಷೆ ಶುಲ್ಕವನ್ನು ಸ್ವಾಯತ್ತ ಕಾಲೇಜುಗಳು ಅಭಿವೃದ್ಧಿ, ನಿರ್ವಹಣೆಗಾಗಿ ಬಳಸಬಹುದಾಗಿದೆ’ ಎಂದು ತಿಳಿಸಿದರು.

‘ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಪದವಿ ಕಾಲೇಜಿನ ಕಟ್ಟಡ ಸೋರುತ್ತಿದೆ. ಪದವಿ ಕಾಲೇಜಿಗೆ ಎರಡೂವರೆ ಎಕರೆ ಜಮೀನು ವರ್ಗ ಮಾಡಿಕೊಡುವ ಕೆಲಸ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತಲೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ’ ಎಂದು ತಿಳಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶಾಸಕರಾದ ರಹೀಂ ಖಾನ್, ಶರಣು ಸಲಗರ, ಶಶಿಲ್ ನಮೋಶಿ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಚಂದ್ರಶೇಖರ ಸಾಲಿಮಠ, ಕಾಲೇಜಿನ ಪ್ರಾಚಾರ್ಯ ದಿಲೀಪ ಗಡ್ಡೆ, ಇತಿಹಾಸ ವಿಭಾಗದ ಮುಖ್ಯಸ್ಥ ಶಿವಕುಮಾರ ಉಪ್ಪೆ ಇದ್ದರು.

ಸಾರಾಂಶ

ಬೀದರ್‌: ‘ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‌ ‘ಎ’ ಗ್ರೇಡ್‌ ಪಡೆದಿದೆ. ಈ ಕಾಲೇಜು ಇನ್ನೆರಡು ಅವಧಿಗೆ ನ್ಯಾಕ್‌ ‘ಎ+’ ಗ್ರೇಡ್‌ ಪಡೆದರೆ ಸ್ವಾಯತ್ತ ಸ್ಥಾನಮಾನ ನೀಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸಿ.ಎನ್. ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.