ADVERTISEMENT

ನಮ್ಮ ಮೆಟ್ರೊ ಕಾಮಗಾರಿ- ಕೆಂಗೇರಿ ರಸ್ತೆ ಹಸ್ತಾಂತರಕ್ಕೆ ತಕರಾರು

ಬಿಬಿಎಂಪಿಯಿಂದ -ಬಿಎಂಆರ್‌ಸಿಎಲ್‌ ಸುಪರ್ದಿಗೆ ವಹಿಸಲಾಗಿದ್ದ ರಸ್ತೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 20:38 IST
Last Updated 10 ಅಕ್ಟೋಬರ್ 2021, 20:38 IST
ಇತ್ತೀಚೆಗೆ ಸುರಿದ ಮಳೆಗೆ ಜ್ಞಾನಭಾರತಿ ಮೆಟ್ರೊ ನಿಲ್ದಾಣದ ಬಳಿ ಮೈಸೂರು ರಸ್ತೆಯ ಡಾಂಬರು ಕಿತ್ತುಹೋಗಿ ಗುಂಡಿಗಳು ನಿರ್ಮಾಣವಾಗಿವೆ  ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಇತ್ತೀಚೆಗೆ ಸುರಿದ ಮಳೆಗೆ ಜ್ಞಾನಭಾರತಿ ಮೆಟ್ರೊ ನಿಲ್ದಾಣದ ಬಳಿ ಮೈಸೂರು ರಸ್ತೆಯ ಡಾಂಬರು ಕಿತ್ತುಹೋಗಿ ಗುಂಡಿಗಳು ನಿರ್ಮಾಣವಾಗಿವೆ ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಸುಪರ್ದಿಗೆ ವಹಿಸಲಾಗಿದ್ದ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ರಸ್ತೆಯನ್ನು ಮರಳಿ ಹಸ್ತಾಂತರ ಮಾಡಿಕೊಳ್ಳಲು ಬಿಬಿಎಂಪಿ ತಕರಾರು ತೆಗೆದಿದೆ. ತಾಂತ್ರಿಕ ದೋಷಗಳಿಂದಾಗಿ ಈ ರಸ್ತೆಯು ಪದೇ ಪದೇ ಹದಗೆಡುತ್ತಿರುವುದು ಬಿಬಿಎಂಪಿ ಚಿಂತೆಗೆ ಕಾರಣವಾಗಿದೆ.

ಏಳು ವರ್ಷಗಳ ಹಿಂದೆ ಮೈಸೂರು ರಸ್ತೆ– ಕೆಂಗೇರಿ ನಡುವಿನ ನಮ್ಮ ಮೆಟ್ರೊ ಎತ್ತರಿಸಿದ ಮಾರ್ಗದ ಕಾಮಗಾರಿ ಶುರುವಾದಾಗ ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ– ಕೆಂಗೇರಿವರೆಗಿನ ಸುಮಾರು 8 ಕಿ.ಮೀ ಉದ್ದದ ಭಾಗವನ್ನು ಬಿಎಂಆರ್‌ಸಿಎಲ್‌ ಸುಪರ್ದಿಗೆ ಬಿಬಿಎಂಪಿ ಬಿಟ್ಟುಕೊಟ್ಟಿತ್ತು. ಆ ಬಳಿಕ ಈ ರಸ್ತೆಯನ್ನು ಬಿಎಂಆರ್‌ಸಿಎಲ್‌ ನಿರ್ವಹಣೆ ಮಾಡುತ್ತಿದೆ.

ಮೈಸೂರು ರಸ್ತೆಯಲ್ಲಿ ‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಣೆಯ ಕಾಮಗಾರಿ ಕೆಂಗೇರಿವರೆಗೆ ಪೂರ್ಣಗೊಂಡಿದೆ.  ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ ಇತ್ತೀಚೆಗೆ ಮೆಟ್ರೊ ರೈಲು ಸೇವೆಯೂ ವಿಸ್ತರಣೆಗೊಂಡಿದೆ. ಹಾಗಾಗಿ ಈ ರಸ್ತೆಯನ್ನು ಮತ್ತೆ ಬಿಬಿಎಂಪಿಗೆ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಕೋರಿ ಬಿಎಂಆರ್‌ಸಿಎಲ್‌ನ ಕಾರ್ಯಕಾರಿ ನಿರ್ದೇಶಕ (ಸಿವಿಲ್‌–3) ಅವರು ಪಾಲಿಕೆಗೆ ಸೆ 15ರಂದು ಪತ್ರ ಬರೆದಿದ್ದರು. ಆ ಬಳಿಕ ಬಿಬಿಎಂಪಿಯ ಕೆಂಗೇರಿ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ಅವರು ಈ ರಸ್ತೆಯ ತಪಾಸಣೆ ನಡೆಸಿದ್ದರು. 

ADVERTISEMENT

ಈ ರಸ್ತೆಯಲ್ಲಿ ನಿರ್ಮಾಣವಾಗಿರುವ ಮೆಟ್ರೊ ಪಿಲ್ಲರ್‌ಗಳ ಬಳಿ ತಳಪಾಯ ಭರ್ತಿ ಮಾಡಿರುವ ಸ್ಥಳಗಳಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ಇಂತಹ ಕೆಲವು ಕಡೆ ಕುಸಿತ ಕಂಡುಬಂದಿದೆ. ರಸ್ತೆಯಿಂದ ನೀರು ಚರಂಡಿಗೆ ಹರಿದು ಹೋಗುವಂತೆ ನಿರ್ಮಿಸುವ ಕಿಂಡಿಗಳು ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿವೆ. ಹಾಗಾಗಿ ನೀರು ಸರಾಗವಾಗಿ ಹರಿದು ಚರಂಡಿಯನ್ನು ಸೇರುತ್ತಿಲ್ಲ. ರಸ್ತೆಯಲ್ಲೇ ನೀರು ನಿಲ್ಲುತ್ತಿರುವುದರಿಂದ ಅದರ ಡಾಂಬರು ಕಿತ್ತು ಹೋಗಿ ಗುಂಡಿಗಳು ನಿರ್ಮಾಣವಾಗುತ್ತಿವೆ. ಈಗಾಗಲೇ ಈ ರಸ್ತೆಯಲ್ಲಿ ಅನೇಕ ಕಡೆ ಡಾಂಬರು ಕಿತ್ತುಹೋಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ ಎಂಬುದು ಬಿಬಿಎಂಪಿಯ ತಕರಾರು.

ಈ ಕುರಿತು ಆರ್‌.ಆರ್‌.ನಗರ ವಲಯ ಕಾರ್ಯಪಾಲಕ ಎಂಜಿನಿಯರ್‌ ನಂದೀಶ್‌ ಅವರು ಬಿಎಂಆರ್‌ಸಿಎಲ್‌ನ ಸಿವಿಲ್‌–3 ವಿಭಾಗದ ಕಾರ್ಯಕಾರಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿ– ಕೆಂಗೇರಿವರೆಗಿನ ರಸ್ತೆಯಲ್ಲಿರುವ ಈ ನ್ಯೂನತೆಗಳನ್ನು ಸರಿಪಡಿಸಿದಲ್ಲಿ ಜಂಟಿ ತಪಾಸಣೆ ನಡೆಸಬಹುದು. ಆ ಬಳಿಕವಷ್ಟೇ ರಸ್ತೆಯನ್ನು ಹಸ್ತಾಂತರಿಸಿಕೊಳ್ಳುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

‘ಮಳೆ ಬಂದಾಗಲೆಲ್ಲಾ ಈ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಈ ರಸ್ತೆ ವಾಹನಗಳ ಸುಗಮ ಸಂಚಾರಕ್ಕೆ ಪೂರಕವಾಗಿಲ್ಲ. ಅನೇಕ ಕಡೆ ನೀರು ಚರಂಡಿಯ ಕಡೆಗೆ ಹರಿಯುವ ಬದಲು ರಸ್ತೆ ವಿಭಜಕದತ್ತ ಹರಿಯುತ್ತಿದೆ. ಪಾದಚಾರಿ ಮಾರ್ಗವೂ ಎತ್ತರದಲ್ಲಿದೆ. ರಸ್ತೆಯ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗುವಂತೆ ಸಮರ್ಪಕ ವ್ಯವಸ್ಥೆಗಳನ್ನೂ ಕಲ್ಪಿಸಿಲ್ಲ. ಹಾಗಾಗಿ ಈ ರಸ್ತೆಯನ್ನು ಈಗಿರುವ ಸ್ಥಿತಿಯಲ್ಲೇ ಮತ್ತೆ ಬಿಬಿಎಂಪಿಗೆ ಹಸ್ತಾಂತರ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ನಂದೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ರಸ್ತೆಯ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಬಿಎಂಆರ್‌ಸಿಎಲ್‌ ಅಧೀನದಲ್ಲಿರುತ್ತಾರೆ. ಹಾಗಾಗಿ ಕಾಮಗಾರಿಯ ದೋಷಮುಕ್ತ ಅವಧಿಯಲ್ಲೂ ಅವರ ಮೇಲೆ ಬಿಬಿಎಂಪಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ. ಹಾಗಾಗಿ ಬಿಎಂಆರ್‌ಸಿಎಲ್‌ನವರು ಈ ರಸ್ತೆಯನ್ನು ಅಭಿವೃದ್ಧಿಪಡಿಸಿ, ಅದರ ಗುಣಮಟ್ಟವು ಖಾತರಿಯಾದರೆ ಮಾತ್ರ ನಾವು ಅದನ್ನು ಹಸ್ತಾಂತರ ಮಾಡಿಕೊಳ್ಳಬಹುದು’ ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರಜಾವಾಣಿ’ಯು ಭಾನುವಾರದ ಸಂಚಿಕೆಯಲ್ಲಿ ಈ ರಸ್ತೆಯ ದುರವಸ್ಥೆಯ ಬಗ್ಗೆ ‘ದುರಸ್ತಿ ಬಳಿಕವೂ ಕಿತ್ತು ಬಂದ ರಸ್ತೆ’ ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ದುರಸ್ತಿ ಕಾಮಗಾರಿ ನಡೆಸಿದ ಬಳಿಕವೂ ರಸ್ತೆ ಹದಗೆಟ್ಟಿರುವ ಬಗ್ಗೆ ವರದಿಯಲ್ಲಿ ವಿವರಿಸಲಾಗಿತ್ತು.

ಸಾರಾಂಶ

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಸುಪರ್ದಿಗೆ ವಹಿಸಲಾಗಿದ್ದ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ರಸ್ತೆಯನ್ನು ಮರಳಿ ಹಸ್ತಾಂತರ ಮಾಡಿಕೊಳ್ಳಲು ಬಿಬಿಎಂಪಿ ತಕರಾರು ತೆಗೆದಿದೆ. ತಾಂತ್ರಿಕ ದೋಷಗಳಿಂದಾಗಿ ಈ ರಸ್ತೆಯು ಪದೇ ಪದೇ ಹದಗೆಡುತ್ತಿರುವುದು ಬಿಬಿಎಂಪಿ ಚಿಂತೆಗೆ ಕಾರಣವಾಗಿದೆ. ಏಳು ವರ್ಷಗಳ ಹಿಂದೆ ಮೈಸೂರು ರಸ್ತೆ– ಕೆಂಗೇರಿ ನಡುವಿನ ನಮ್ಮ ಮೆಟ್ರೊ ಎತ್ತರಿಸಿದ ಮಾರ್ಗದ ಕಾಮಗಾರಿ ಶುರುವಾದಾಗ ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ– ಕೆಂಗೇರಿವರೆಗಿನ ಸುಮಾರು 8 ಕಿ.ಮೀ ಉದ್ದದ ಭಾಗವನ್ನು ಬಿಎಂಆರ್‌ಸಿಎಲ್‌ ಸುಪರ್ದಿಗೆ ಬಿಬಿಎಂಪಿ ಬಿಟ್ಟುಕೊಟ್ಟಿತ್ತು. ಆ ಬಳಿಕ ಈ ರಸ್ತೆಯನ್ನು ಬಿಎಂಆರ್‌ಸಿಎಲ್‌ ನಿರ್ವಹಣೆ ಮಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.