ADVERTISEMENT

ಆಕಸ್ಮಿಕ ಸಾವಿನ ಪ್ರಕರಣ ಬೇಧಿಸಿದಾಗ ಕೊಲೆ ವಿಷಯ ಬಹಿರಂಗ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 19:30 IST
Last Updated 13 ಅಕ್ಟೋಬರ್ 2021, 19:30 IST

ಬೆಂಗಳೂರು: ಗಾಣಿಗರ ಪಾಳ್ಯದ ಭೋವಿ ಕಾಲೊನಿಯಲ್ಲಿ ಇತ್ತೀಚೆಗೆ ಮಂಜುನಾಥ್‌ (32) ಎಂಬುವವರು ಮೃತರಾಗಿದ್ದರು. ಕೋಣನಕುಂಟೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಜೊತೆಗಾರರೇ ಮಂಜುನಾಥ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಮಾಹಿತಿ ಬಹಿರಂಗವಾಗಿದೆ.

‘ಚಿಕ್ಕಮಗಳೂರಿನ ಮಂಜುನಾಥ್‌, ನಗರದಲ್ಲಿ ಮರ ಕಡಿಯುವ ಹಾಗೂ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ಆಕಾಶ್‌ ಮತ್ತು ಅನಿಲ್‌ ಕುಮಾರ್‌ ಕೂಡ ಅವರ ಜೊತೆಗೇ ಕೆಲಸಕ್ಕೆ ಹೋಗುತ್ತಿದ್ದರು. ಇವರೆಲ್ಲಾ ಇದೇ 3ರಂದು ಕೋಣನಕುಂಟೆಯ ಬೀರಣ್ಣ ಎಂಬುವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಮರಗಳನ್ನು ಕತ್ತರಿಸಿ ನಿವೇಶನ ಸ್ವಚ್ಛಗೊಳಿಸಿದ್ದರು. ಇದಕ್ಕಾಗಿ ಬೀರಣ್ಣ, ಮಂಜುನಾಥ್‌ಗೆ ₹1,200 ಮೊತ್ತ ನೀಡಿದ್ದರು. ಈ ಹಣವನ್ನು ಮೂವರೂ ಸಮನಾಗಿ ಹಂಚಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಮಂಜುನಾಥ್‌ ಅದನ್ನು ಆಕಾಶ್‌ ಮತ್ತು ಅನಿಲ್‌ಗೆ ನೀಡಿರಲಿಲ್ಲ. ಈ ವಿಚಾರವಾಗಿ ಮೂವರ ನಡುವೆ ಜಗಳ ನಡೆದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಇದೇ 4ರಂದು ಇವರೆಲ್ಲಾ ಖೋಡೆಸ್‌ ಸಿಲ್ವರ್‌ ಟ್ರೀ ಫಾರ್ಮ್‌ ಬಳಿ ಸೇರಿದ್ದರು. ಆಗ ಬಸಲಿಂಗಪ್ಪ ಎಂಬುವರೂ ಇವರ ಜೊತೆಗಿದ್ದರು. ಈ ವೇಳೆ ಆರೋಪಿಗಳು ಬಸಲಿಂಗಪ್ಪ ಕೈಗೆ ₹200 ಮೊತ್ತ ನೀಡಿ ಮದ್ಯ ತರುವಂತೆ ಕಳುಹಿಸಿದ್ದರು. ಬಳಿಕ ಎಲ್ಲರೂ ಒಂದೆಡೆ ಕೂತು ಮದ್ಯ ಸೇವಿಸಿದ್ದರು. ರಾತ್ರಿ 1 ಗಂಟೆಯಲ್ಲಿ ಆಕಾಶ್‌ ಮತ್ತು ಅನಿಲ್‌, ಮಂಜುನಾಥ್‌ ಜೊತೆ ವಾಗ್ವಾದ ನಡೆಸಿದ್ದರು. ಸಿಟ್ಟಿಗೆದ್ದು ಸೌದೆಯಿಂದ ಮಂಜುನಾಥ್‌ ಮೇಲೆ ಹಲ್ಲೆ ನಡೆಸಿದ್ದರು. ಮಂಜುನಾಥ್‌ ಅವರ ಎಡಗೈಯಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿದ್ದ ಆರೋಪಿಗಳು ಬ್ಯಾಂಡೇಜ್‌ ತಂದು ಕಟ್ಟಿದ್ದರು. ಬೆಳಗ್ಗಿನ ಜಾವ 3.15ರ ಸುಮಾರಿಗೆ ಮಂಜುನಾಥ್‌ ಅವರನ್ನು ಕೋಣನಕುಂಟೆ ಕ್ರಾಸ್‌ ಬಳಿ ಕರೆತಂದು ಬಿಎಂಟಿಸಿ ಬಸ್‌ ಹತ್ತಿಸಿದ್ದರು. ಟಿಕೆಟ್‌ ಖರೀದಿಸಲು 20 ರೂಪಾಯಿ ಕೊಟ್ಟು ಹೊರಟು ಹೋಗಿದ್ದರು’ ಎಂದು ವಿವರಿಸಿದ್ದಾರೆ.

ADVERTISEMENT

‘ಇದೇ 4ರ ಬೆಳಿಗ್ಗೆ ಕನಕಪುರ ರಸ್ತೆಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್‌, ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ಮೃತಪಟ್ಟಿದ್ದರು. ಮಂಜುನಾಥ್‌ ಅವರ ಸಹೋದರ ನಾಗರಾಜು ಕೊಟ್ಟ ದೂರಿನ ಅನ್ವಯ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಬಸಲಿಂಗಪ್ಪ ಅವರನ್ನು ಠಾಣೆಗೆ ಕರೆದು ವಿಚಾರಿಸಿದಾಗ ಅವರು ನಡೆದಿದ್ದನ್ನೆಲ್ಲಾ ವಿವರಿಸಿದ್ದರು’ ಎಂದು ಮಾಹಿತಿ ನೀಡಿದರು.     

ಸಾರಾಂಶ

ಗಾಣಿಗರ ಪಾಳ್ಯದ ಭೋವಿ ಕಾಲೊನಿಯಲ್ಲಿ ಇತ್ತೀಚೆಗೆ ಮಂಜುನಾಥ್‌ (32) ಎಂಬುವವರು ಮೃತರಾಗಿದ್ದರು. ಕೋಣನಕುಂಟೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಜೊತೆಗಾರರೇ ಮಂಜುನಾಥ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಮಾಹಿತಿ ಬಹಿರಂಗವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.