ADVERTISEMENT

ಅಗೆದು ಬಿಟ್ಟ ರಸ್ತೆಯಲ್ಲಿ ಕೊಳಚೆ ನೀರು: ಬಿಬಿಎಂಪಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:45 IST
Last Updated 17 ಜನವರಿ 2022, 16:45 IST
ರಸ್ತೆಗೆ ಅಡ್ಡಲಾಗಿ ತೋಡಿರುವ ಗುಂಡಿಯಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿರುವುದು
ರಸ್ತೆಗೆ ಅಡ್ಡಲಾಗಿ ತೋಡಿರುವ ಗುಂಡಿಯಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿರುವುದು   

ಬೆಂಗಳೂರು: ‘ಅಭಿವೃದ್ಧಿ ನೆಪದಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ತಿಂಗಳಾದರೂ ಅದನ್ನು ಮುಚ್ಚದೆ ಹಾಗೇ ಬಿಡಲಾಗಿದೆ. ಅದರೊಳಗೆ ಒಳಚರಂಡಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ’ ಎಂದು ಜಾನಕೀರಾಮ್‌ ಬಡಾವಣೆಯ ನಿವಾಸಿಗಳು ದೂರಿದ್ದಾರೆ. ಈ ಕುರಿತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

‘ಮಳೆ ಹಾನಿಯ ಸಮೀಕ್ಷೆಗೆಂದು ಹೋದ ವರ್ಷದ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಡಾವಣೆಗೆ ಭೇಟಿ ನೀಡಿದ್ದರು. ಆಗ ಮಳೆನೀರು ಸರಾಗವಾಗಿ ಹರಿದುಹೋಗಲು ಅನುವಾಗುವಂತೆ ರಸ್ತೆಗೆ ಅಡ್ಡಲಾಗಿ ಒಳಚರಂಡಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ರಸ್ತೆ ಅಗೆದಿದ್ದರು. ಸುಮಾರು ಒಂದು ತಿಂಗಳಾದರೂ ಚರಂಡಿ ಕೆಲಸ ಮುಗಿದಿಲ್ಲ. ಅಧಿಕಾರಿಗಳೂ ಅತ್ತ ತಿರುಗಿ ನೋಡುತ್ತಿಲ್ಲ. ಗುಂಡಿಯಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿ ದುರ್ನಾತ ಹೊರಹೊಮ್ಮುತ್ತಿದೆ. ಅದರಿಂದ ಸಮೀಪದ ಮನೆಯವರು ಸಂಕಟ ಪಡುವಂತಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ’ ಎಂದು ಆರೋಪಿಸಿದ್ದಾರೆ.

‘ಬಡಾವಣೆಯಲ್ಲಿ 500ಕ್ಕೂ ಅಧಿಕ ಮನೆಗಳಿವೆ. ಹೆಣ್ಣೂರಿನಿಂದ ಹೋಗುವವರು ಬಡಾವಣೆ ಪ್ರವೇಶಿಸಲು ಈ ರಸ್ತೆಯನ್ನೇ ಅವಲಂಬಿಸಬೇಕಿತ್ತು. ಈಗ ದಾರಿಯೇ ಇಲ್ಲದಂತಾಗಿದೆ. ಜನ ಪರ್ಯಾಯ ಮಾರ್ಗದ ಮೊರೆಹೋಗಿದ್ದು, ಕಚ್ಚಾ ರಸ್ತೆಯಲ್ಲಿ 3 ಕಿ.ಮೀ. ಸುತ್ತಿ ಬರುವುದು ಅನಿವಾರ್ಯವಾಗಿದೆ. ಪರ್ಯಾಯ ಮಾರ್ಗದಲ್ಲಿ ಸಾಗುವಾಗ ರಾತ್ರಿ ದುಷ್ಕರ್ಮಿಗಳು ದಾಳಿ ಮಾಡುವ ಅಪಾಯ ಎದುರಾಗಿದೆ’ ಎಂದು ಸ್ಥಳೀಯರಾದ ಜೇಕಬ್‌ ‌ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಬಡಾವಣೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರನ್ನು ಕರೆದೊಯ್ಯಲು ಆಂಬುಲೆನ್ಸ್‌ ಬರಲೂ ದಾರಿ ಇಲ್ಲದಂತಾಗಿದೆ. ಶಾಲಾ ಮಕ್ಕಳು ಓಡಾಡುವುದೂ ಕಷ್ಟವಾಗಿದೆ. ಪಾದಚಾರಿಗಳಿಗಾಗಿ ರಸ್ತೆಯ ಒಂದು ಬದಿಯಲ್ಲಿ ಮರದ ಹಲಗೆಗಳನ್ನು ಹಾಕಲಾಗಿದೆ. ಅದರ ಮೇಲೆ ಓಡಾಡುವಾಗ ಮಕ್ಕಳು ಹಾಗೂ ವೃದ್ಧರು ಆಯತಪ್ಪಿ ಬಿದ್ದ ಉದಾಹರಣೆಗಳು ಇವೆ’ ಎಂದು ದೂರಿದರು.

‘ಸಮಸ್ಯೆ ಪರಿಹರಿಸುವಂತೆ ಸಚಿವ ಬೈರತಿ ಬಸವರಾಜು ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಹೀಗಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜಾನಕೀರಾಮ್ ಬಡಾವಣೆ ಇರುವ ಹೊರಮಾವು ವಾರ್ಡ್‌ನ ಸಹಾಯಕ ಎಂಜಿನಿಯರ್‌ ಈ ಕುರಿತು ಪ್ರತಿಕ್ರಿಯೆಗೆ ಸಿಗಲಿಲ್ಲ.

ಸಾರಾಂಶ

‘ಅಭಿವೃದ್ಧಿ ನೆಪದಲ್ಲಿ ಮುಖ್ಯರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ತಿಂಗಳಾದರೂ ಅದನ್ನು ಮುಚ್ಚದೆ ಹಾಗೇ ಬಿಡಲಾಗಿದೆ. ಅದರೊಳಗೆ ಒಳಚರಂಡಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ’ ಎಂದು ಜಾನಕೀರಾಮ್‌ ಬಡಾವಣೆಯ ನಿವಾಸಿಗಳು ದೂರಿದ್ದಾರೆ. ಈ ಕುರಿತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.