ADVERTISEMENT

ಬೆಂಗಳೂರು: ಮನೆಯೊಳಗೂ ನೀರು, ಹೊಳೆಯಾದವು ರಸ್ತೆಗಳು

ಮೋಡ ಕವಿದ ವಾತಾವರಣದಲ್ಲಿ ‘ವರುಣ’ ಅಬ್ಬರ l ಜಿಟಿ ಜಿಟಿ ಮಳೆಯಲ್ಲೇ ಜನರ ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 20:35 IST
Last Updated 12 ಅಕ್ಟೋಬರ್ 2021, 20:35 IST
ಮೈಸೂರು ರಸ್ತೆಯ ಮೈಲಸಂದ್ರ ಬಳಿ ರಾಜಕಾಲುವೆ ಕಾಮಗಾರಿ ಸ್ಥಗಿತಗೊಂಡಿರುವ ದೃಶ್ಯ. – ಪ್ರಜಾವಾಣಿ ಚಿತ್ರಗಳು
ಮೈಸೂರು ರಸ್ತೆಯ ಮೈಲಸಂದ್ರ ಬಳಿ ರಾಜಕಾಲುವೆ ಕಾಮಗಾರಿ ಸ್ಥಗಿತಗೊಂಡಿರುವ ದೃಶ್ಯ. – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬಿಡುವು ಕೊಡುತ್ತಲೇ ‘ವರುಣ’ ಅಬ್ಬರಿಸಿ ಸುರಿಯುತ್ತಿದ್ದಾನೆ. ಸೋಮವಾರ ರಾತ್ರಿ ನಿರಂತರವಾಗಿ ಸುರಿದಿದ್ದ ಮಳೆ, ಮಂಗಳವಾರವೂ ಜೋರಾಗಿತ್ತು.

ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಂಗಳವಾರ ಬೆಳಿಗ್ಗೆ ಮಾತ್ರ ಕೊಂಚ ಬಿಸಿಲು ಕಾಣಿಸಿಕೊಂಡಿತ್ತು. ಸಮಯ ಕಳೆದಂತೆ ಮೋಡಗಳು ಮುಸುಕಿ ಜಿಟಿ ಜಿಟಿ ಮಳೆ ಆರಂಭವಾಯಿತು. ನಂತರ ಮಳೆ ಪ್ರಮಾಣ ಹೆಚ್ಚಾಯಿತು.

ಮಧ್ಯಾಹ್ನದಿಂದ ಸಂಜೆಯವರೆಗೂ ಸುರಿದ ಮಳೆ, ರಾತ್ರಿ ಸ್ವಲ್ಪ ಬಿಡುವು ನೀಡಿತ್ತು. ತಡರಾತ್ರಿ ಪುನಃ ಜಿಟಿ ಜಿಟಿ ಮಳೆ ಇತ್ತು.

ADVERTISEMENT

ಬನಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬಸವನಗುಡಿ, ಚಾಮರಾಜಪೇಟೆ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ಹೆಬ್ಬಾಳ, ಆರ್‌.ಟಿ.ನಗರ, ಸಂಜಯನಗರ, ಜೆ.ಸಿ.ನಗರ, ವಸಂತನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್‌ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತ ಮಳೆ ಅಬ್ಬರ ಹೆಚ್ಚಿತ್ತು.

ಮೆಜೆಸ್ಟಿಕ್, ಶೇಷಾದ್ರಿಪುರ, ಸಂಪಂಗಿರಾಮನಗರ, ಇಂದಿರಾನಗರ, ಹಲಸೂರು, ವಿಲ್ಸನ್ ಗಾರ್ಡನ್, ಶಾಂತಿನಗರ, ವೈಟ್‌ಫೀಲ್ಡ್, ಬೆಳ್ಳಂದೂರು, ಈಜಿಪುರ, ಕೆ.ಆರ್. ಪುರ, ನಾಗವಾರ, ವಿದ್ಯಾರಣ್ಯಪುರ, ಯಲಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಜೋರಾಗಿತ್ತು.

ಹೊಳೆಯಂತೆ ಹರಿದ ನೀರು: ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ನಗರದ ಪ್ರಮುಖ ರಸ್ತೆ ಹಾಗೂ ಒಳ ರಸ್ತೆಯಲ್ಲೂ ನೀರಿನ ಹರಿಯುವಿಕೆ ಹೆಚ್ಚಿತ್ತು.

ನಿರಂತರವಾಗಿ ಸುರಿದ ಮಳೆಯಿಂದಾಗಿ ಕಾಲುವೆಗಳು ತುಂಬಿ ಹರಿದವು. ಹೆಚ್ಚಾದ ನೀರು, ರಸ್ತೆಯಲ್ಲೇ ಎರಡು ಅಡಿಯಿಂದ ನಾಲ್ಕು ಅಡಿಯಷ್ಟು ಹರಿಯಿತು. ಅದೇ ನೀರಿನಲ್ಲಿ ಚಾಲಕರು, ವಾಹನ ಚಲಾಯಿಸಿಕೊಂಡು ಹೋದರು. ಕೆಲ ದ್ವಿಚಕ್ರ ವಾಹನಗಳು ಮಾರ್ಗಮಧ್ಯೆಯೇ ಕೆಟ್ಟು ನೀರಿನಲ್ಲಿ ನಿಂತಿದ್ದವು. ಅವುಗಳನ್ನು ದಡ ತಲುಪಿಸಲು ಸವಾರರು ಹರಸಾಹಸಪಟ್ಟರು.

ನಗರದ ಬಹುತೇಕ ಕಡೆ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಅಲ್ಲೆಲ್ಲ ಗುಂಡಿಯಲ್ಲಿ ನೀರು ನಿಂತುಕೊಂಡಿತ್ತು. ರಾಜಕಾಲುವೆ ಕಾಮಗಾರಿ ಸ್ಥಳದಲ್ಲಿ ನೀರು ಧಾರಾಕಾರವಾಗಿ ಹರಿಯಿತು.

ಉರುಳಿಬಿದ್ದ ಮರಗಳು: ಮಳೆ ಸುರಿಯುವ ವೇಳೆಯಲ್ಲಿ ಗಾಳಿಯೂ ಜೋರಾಗಿತ್ತು. ನಗರದ ಮೂರು ಕಡೆ ಮರಗಳು ನೆಲಕ್ಕುರುಳಿದ್ದು, ಒಂದು ಕಡೆ ಮರದ ದೊಡ್ಡ ಕೊಂಬೆ
ಬಿದ್ದಿತ್ತು.

‘ಐಡಿಯಲ್ ಹೋಮ್‌ ಬಡಾವಣೆ, ಮಹಾಲಕ್ಷ್ಮಿ ಬಡಾವಣೆಯ 5ನೇ ಅಡ್ಡರಸ್ತೆ ಹಾಗೂ ಕೋರಮಂಗಲದ 60 ಅಡಿ ರಸ್ತೆಯಲ್ಲಿ ತಲಾ ಒಂದೊಂದು ಮರ ಉರುಳಿಬಿದ್ದಿದ್ದವು. ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ದಟ್ಟಣೆ ಉಂಟಾಗಿತ್ತು. ದೂರು ಬರುತ್ತಿದ್ದಂತೆ ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಮರಗಳನ್ನು ತೆರವು ಮಾಡಿದ್ದಾರೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ಯಶವಂತಪುರದ ಗೋವರ್ಧನ್ ಚಿತ್ರಮಂದಿರ ಬಳಿ ಮರದ ದೊಡ್ಡ ಕೊಂಬೆಯೊಂದು ಬಿದ್ದಿತ್ತು. ಅದನ್ನೂ ತೆರವು ಮಾಡಲಾಗಿದೆ’ ಎಂದೂ ತಿಳಿಸಿದರು.

ಮನೆಗೆ ನುಗ್ಗಿದ್ದ ನೀರು: ಕೊತ್ತನೂರು ಹಾಗೂ ಸುತ್ತಮುತ್ತ ಪ್ರದೇಶಗಳ ಶೆಡ್‌ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಆಗಿದೆ.

ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ಪೀಠೋಪಕರಣಗಳು ನೀರಿನಲ್ಲೇ ಮುಳುಗಿದ್ದವು. ಮಂಗಳವಾರ ಬೆಳಿಗ್ಗೆ ನಿವಾಸಿಗಳು, ನೀರು ಹೊರಹಾಕುವುದರಲ್ಲಿ ನಿರತರಾಗಿದ್ದು ಕಂಡುಬಂತು.

‘ನಿಲ್ದಾಣದ ನೀರು ತೆರವಿಗೆ ನಸುಕಿನವರೆಗೆ ಕಾರ್ಯಾಚರಣೆ’

ನಗರದ ಹೊರವಲಯದಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜೋರು ಮಳೆ ಆಗಿದೆ. ಸೋಮವಾರ ರಾತ್ರಿ ಮಳೆಯಿಂದ ಸಂಗ್ರಹವಾಗಿದ್ದ ನೀರು ನಿಲ್ದಾಣ ಬಳಿಯೇ ಧಾರಾಕಾರವಾಗಿ ಹರಿಯಿತು. ಟರ್ಮಿನಲ್‌ ಹಾಗೂ ಎದುರಿನ ರಸ್ತೆಯಲ್ಲಿ ನೀರು ಹರಿಯುವಿಕೆ ಹೆಚ್ಚಿತ್ತು. ಕಾರು, ಬಸ್‌ಗಳು ಸಂಚರಿಸಲು ಸಹ ಸಾಧ್ಯವಾಗಿರಲಿಲ್ಲ. ಹೀಗಾಗಿ, ಪ್ರಯಾಣಿಕರನ್ನು ಟ್ರ್ಯಾಕರ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.

ಈ ಬಗ್ಗೆ ಮಾತನಾಡಿರುವ ನಿಲ್ದಾಣದ ಅಧಿಕಾರಿ ಸಿ. ಶ್ರೀನಿವಾಸ್, ‘ನಿಲ್ದಾಣದಲ್ಲಿ ಉತ್ತಮ ಒಳ ಚರಂಡಿ ವ್ಯವಸ್ಥೆ ಇದ್ದು, ಇದುವರೆಗೂ ಇಷ್ಟು ಪ್ರಮಾಣದಲ್ಲಿ ನೀರು ಹರಿದಿರಲಿಲ್ಲ. ಸೋಮವಾರ ಅತೀ ಹೆಚ್ಚು ಮಳೆ ಸುರಿದಿದ್ದರಿಂದ ಈ ಸ್ಥಿತಿ ನಿರ್ಮಾಣವಾಯಿತು’ ಎಂದಿದ್ದಾರೆ.

‘ಟರ್ಮಿನಲ್‌ ಬಹುತೇಕ ಭಾಗ ಹಾಗೂ ಎದುರಿನ ರಸ್ತೆಯಲ್ಲಿ ನೀರು ನಿಂತಿತ್ತು. ಟರ್ಮಿನಲ್‌ನಿಂದ ಹೊರಗೆ ಹೋಗಲು ಹಾಗೂ ಒಳಗೆ ಬರಲು ಪ್ರಯಾಣಿಕರಿಗೆ ತೊಂದರೆ ಆಗಿತ್ತು. ತುರ್ತು ಸೇವೆ ಸಿಬ್ಬಂದಿ, ಮಂಗಳವಾರ ನಸುಕಿನವರೆಗೂ ಕಾರ್ಯಾಚರಣೆ ನಡೆಸಿ ನೀರು ತೆರವು ಮಾಡಿದರು’ ಎಂದೂ ತಿಳಿದಿದ್ದಾರೆ.

‘ಮಳೆ ಹೆಚ್ಚಿದ್ದರಿಂದ ಮುಂಜಾಗ್ರತಾ ಕ್ರಮವಾಗಿ 20 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ನೀರು ತೆರವಾದ ನಂತರವೇ ವಿಮಾನಗಳ ಹಾರಾಟ ಯಥಾಸ್ಥಿತಿಗೆ ಬಂತು’ ಎಂದೂ ಹೇಳಿದ್ದಾರೆ.

****

ಬೆಂಗಳೂರಿನಲ್ಲಿ ಸುರಿದ ಮಳೆ ಪ್ರಮಾಣ (ಅ. 11ರ ರಾತ್ರಿ 8 ಗಂಟೆಯಿಂದ ಅ. 12ರ ಬೆಳಿಗ್ಗೆ 8 ಗಂಟೆಯವರೆಗೆ)

ಕಡಿಮೆ ಮಳೆ (0.25 ಸೆ.ಮೀ–1.55 ಸೆಂ.ಮೀ)

ರಾಜರಾಜೇಶ್ವರಿನಗರ

ಬೊಮ್ಮನಹಳ್ಳಿ

ಕೋಣನಕುಂಟೆ

ಗೊಟ್ಟಿಗೆರೆ

ಕೋರಮಂಗಲ

ದೊಡ್ಡಬಿದರಕಲ್ಲು

ಪುಲಿಕೇಶಿನಗರ

ಬೆನ್ನಿಗಾನಹಳ್ಳಿ

ಹೊಯ್ಸಳನಗರ

ವಿಜ್ಞಾನನಗರ

ಗರುಡಾಚಾರ್ಯಪಾಳ್ಯ

ಹೊಡಿ

ಬಸವನಪುರ

ವರ್ತೂರ

ಬೆಳ್ಳಂದೂರು

ಸಾಧಾರಣ ಮಳೆ (1.56 ಸೆಂ.ಮೀ–6.44 ಸೆಂ.ಮೀ)

ಅಟ್ಟೂರು

ಯಲಹಂಕ

ವಿದ್ಯಾರಣ್ಯಪುರ

ಬ್ಯಾಟರಾಯನಪುರ

ಹೊರಮಾವು

ಕೊಡಿಗೇಹಳ್ಳಿ

ಯಶವಂತಪುರ

ಚೊಕ್ಕಸಂದ್ರ

ನಂದಿನಿ ಲೇಔಟ್

ಬಸವೇಶ್ವರನಗರ

ರಾಜಾಜಿನಗರ

ಜ್ಞಾನಭಾರತಿ

ಕೆಂಗೇರಿ

ಹೆಮ್ಮಿಗೆಪುರ

ಸಂಪಂಗಿರಾಮನಗರ

ಚಾಮರಾಜಪೇಟೆ

ಸಾರಕ್ಕಿ

ಸಿಂಗಸಂದ್ರ

ಮಾರತ್ತಹಳ್ಳಿ

ಎಚ್‌ಎಎಲ್‌ ಏರ್‌ಪೋರ್ಟ್

ದೊಮ್ಮಲೂರು

ದೊಡ್ಡನೆಕ್ಕುಂದಿ

ಕೊನೇನ ಅಗ್ರಹಾರ

ಕೆ.ಆರ್.ಪುರ

ಬೇಗೂರು

ಜೋರು ಮಳೆ (6.45 ಸೆಂ.ಮೀ–11.55 ಸೆಂ.ಮೀ)

ಕಾಟನ್‌ಪೇಟೆ

ದಯಾನಂದನಗರ

ಜಕ್ಕೂರು

ಚೌಡೇಶ್ವರಿ

ಸಾರಾಂಶ

ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬಿಡುವು ಕೊಡುತ್ತಲೇ ‘ವರುಣ’ ಅಬ್ಬರಿಸಿ ಸುರಿಯುತ್ತಿದ್ದಾನೆ. ಸೋಮವಾರ ರಾತ್ರಿ ನಿರಂತರವಾಗಿ ಸುರಿದಿದ್ದ ಮಳೆ, ಮಂಗಳವಾರವೂ ಜೋರಾಗಿತ್ತು. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಂಗಳವಾರ ಬೆಳಿಗ್ಗೆ ಮಾತ್ರ ಕೊಂಚ ಬಿಸಿಲು ಕಾಣಿಸಿಕೊಂಡಿತ್ತು. ಸಮಯ ಕಳೆದಂತೆ ಮೋಡಗಳು ಮುಸುಕಿ ಜಿಟಿ ಜಿಟಿ ಮಳೆ ಆರಂಭವಾಯಿತು. ನಂತರ ಮಳೆ ಪ್ರಮಾಣ ಹೆಚ್ಚಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.